ಕರಾವಳಿ

‘ಪರೇಶ್ ಸಾವಿಗೆ ನ್ಯಾಯ ಕೊಡಿಸಿ’: ಕುಂದಾಪುರದಲ್ಲಿ ಕೊಂಕಣ ಖಾರ್ವಿ ಸಮಾಜದಿಂದ ಮೌನ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ನಡೆದ ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಕುಂದಾಪುರದ ಕೊಂಕಣಿ ಖಾರ್ವಿ ಸಮಾಜದವರು ಶ್ರೀ ಮಹಾಕಾಳಿ ದೇವಸ್ಥಾನ ಹಾಗೂ ವಿದ್ಯಾರಂಗ ಮಿತ್ರಮಂಡಳಿ ಸಂಸ್ಥೆಯ ನೇತೃತ್ವದಲ್ಲಿ ಸೋಮವಾರ ಕುಂದಾಪುರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ತೀರಾ ಬಡತನದಲ್ಲಿದ್ದ ಕೊಂಕಣ ಖಾರ್ವಿ ಸಮಾಜದ ಯುವಕ ಪರೇಶ್ ಮೇಸ್ತ ಸಾವು ಆತನ ಮನೆಮಂದಿಯನ್ನು ದಿಕ್ಕು ತೋಚದಂತೆ ಮಾಡಿದೆ. ಪರೇಶ್ ಸಾವು ಅನುಮಾನಾಸ್ಪದವಾಗಿದ್ದು ಆತನ ಶವದ ಮರಣೋತ್ತರ ಪರೀಕ್ಷೆಯೂ ಸರಿಯಾಗಿಲ್ಲ. ಮೋಲ್ನೋಟಕ್ಕೆ ಈ ಅಸಹಜ ಸಾವು ಕೊಲೆಯೆಂಬುದಾಗಿ ಕಂಡುಬರುತ್ತಿದೆ. ಈ ಬಗ್ಗೆ ಮರುಪರಿಶೀಲಿಸಿ ಆತನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ಸೋಮವಾರ ಬೆಳಿಗ್ಗೆ ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಿಂದ ಹೊರಟ ಮೌನ ಮೆರವಣಿಗೆ ನಗರದಲ್ಲಿ ಸಂಚರಿಸಿ ಶಾಸ್ತ್ರಿ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧಕ್ಕೆ ತೆರಳಿತು. ಇದೇ ವೇಳೆ ಕುಂದಾಪುರ ತಹಶಿಲ್ದಾರ್ ಜಿ.ಎಂ ಬೋರ್ಕರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ನಾಳೆ ಗಂಗೊಳ್ಳಿ-ತ್ರಾಸಿ ಬಂದ್: ಬೆಳಿಗ್ಗೆ ಖಂಡನಾ ಸಭೆ
ಪರೇಶ್ ಮೇಸ್ತ ಅಸಹಜ ಸಾವು ಹಿನ್ನೆಲೆ ಮಂಗಳವಾರ ಗಂಗೊಳ್ಳಿಯಲ್ಲಿ ಪ್ರತಿಭಟನೆ ನಡೆಯಲಿದ್ದು ಮಂಗಳವಾರ ಗಂಗೊಳ್ಳಿ ಹಾಗೂ ತ್ರಾಸಿ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತ ಬಂದ್ ನಡೆಯಲಿದೆ. ಬೆಳಿಗ್ಗೆ ೯ ಗಂಟೆಗೆ ಗಂಗೊಳ್ಳಿ ಬಂದರು ಪ್ರದೇಶದಿಂದ ಬ್ರಹತ್ ಪಾದಾಯಾತ್ರೆ ನಡೆಯಲಿದ್ದು ತಾರ್ಸಿ ತನಕ ಸಾಗಲಿದೆ. ಬಳಿಕ ಕೊಡಪಾಡಿಯಲ್ಲಿ ಖಂಡನಾ ಸಭೆ ನಡೆಯಲಿದೆ. ಮಂಗಳವಾರ ಮೀನುಗಾರಿಕೆ ಸೇರಿದಂತೆ ಮೀನು ವ್ಯಾಪಾರವೂ ಸ್ಥಗಿತಗೊಳ್ಳಲಿದ್ದು ಬಸ್ ಸಂಚಾರ ಇಲ್ಲ ಎನ್ನಲಾಗಿದೆ.

Comments are closed.