ಕರಾವಳಿ

ಬಿಜೆಪಿ ಋಣ ನನ್ನ ಮೇಲಿದೆ, ಮುಂದೆ ಪಕ್ಷ ಸೇರ್ಪಡೆ ಖಚಿತ: ಹಾಲಾಡಿ ಶ್ರೀನಿವಾಸ ಶೆಟ್ಟಿ

Pinterest LinkedIn Tumblr

ಕುಂದಾಪುರ: ತಾಂತ್ರಿಕ ಸಮಸ್ಯೆಗಳಿರುವ ಕಾರಣ ಸದ್ಯ ಬಿಜೆಪಿ ಪಕ್ಷ ಸೇರಲು ಸಾಧ್ಯವಿಲ್ಲ. ಕುಂದಾಪುರದಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಸಾಮಾನ್ಯ ಜನರಂತೆ ಪ್ರೇಕ್ಷಕನಾಗಿ ಪಾಲ್ಗೊಳ್ಳಲಿದ್ದು, ವೇದಿಕೆ ಏರುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವುದು ಸ್ಪಷ್ಟ ನಿರ್ಧಾರ ಮಾಡಿದ್ದು, ಕುಂದಾಪುರ ಪರಿವರ್ತನಾ ಸಮಾವೇಶದಲ್ಲಿ ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟ ಪಡಿಸಿದರು.

ಬಿಜೆಪಿ ಪಕ್ಷ ಸೇರಲು ಆಹ್ವಾನವಿದ್ದು, ಬಿಜೆಪಿ ಪರ ಕೆಲಸ ಮಾಡಿದ್ದೇನೆ. ತಾಂತ್ರಿಕ ಸಮಸ್ಯೆ ಪರಿಹಾರದ ನಂತರ ಬಿಜೆಪಿ ಸೇರೋದು ನಿಶ್ಚಯ. ಬೇರೆ ಪಕ್ಷಗಳಿಂದಲೂ ಆಹ್ವಾನ ಇತ್ತು. ಆದರೇ ಎಲ್ಲಾ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷದ ಪರ ಬೆಂಬಲ ಸೂಚಿಸಿದ್ದೇನೆ. ಸದ್ಯ ಯಾವುದೇ ಶರತ್ತು, ನಿರೀಕ್ಷೆ ಇಲ್ಲದೆ ಬಿಜೆಪಿ ಸೇರಿ, ನಿಷ್ಠಾವಂತ ಕಾರ್‍ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು. ಬಿಜೆಪಿ ಪಕ್ಷದ ಋಣ ನನ್ನ ಮೇಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿದರು. ಪರಿವರ್ತನಾ ಸಮಾವೇಶದ ಬ್ಯಾನರ್‌ನಲ್ಲಿ ನನ್ನ ಭಾವಚಿತ್ರ ಹಾಕದಂತೆ ತಿಳಿಸಿದ್ದೆ, ಆದರೆ ಹಾಕಿದ್ದಾರೆ ಅದನ್ನು ತೆಗೆಯಲು ನಾನು ಹೇಳುವುದು ಸರಿಯಲ್ಲ ಎಂದರು.

ಬಿಜೆಪಿ ಮತ್ತೆ ಸೇರೋಲ್ಲ ಎಂದು ಹಿಂದೆ ಹೇಳಿಕೆ ನೀಡದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂದಿನ ಕಾಲಸ್ಥಿತಿಯೇ ಬೇರೆ. ಇಂದಿನ ವಸ್ತುಸ್ಥಿತಿಯೇ ಬೇರೆ. ತಾನು ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿರಲಿಲ್ಲ. ಆದರೇ ಅಭಿಮಾನಿಗಳು ಮತ್ತು ಹಿತೈಷಿಗಳ ಒತ್ತಡಕ್ಕೆ ಮಣಿದು ಬೆಂಗಳೂರಿಗೆ ಹೋಗಿದ್ದು, ಸಚಿವ ಸ್ಥಾನ ತಪ್ಪಿದ ಬಗ್ಗೆ ಹಿತೈಷಿಗಳು ಪ್ರತಿಭಟಿಸುವಾಗಲೂ ಅವರನ್ನು ಸಮಾಧಾನ ಪಡಿಸಿದ್ದೆ ಎಂದರು. ಕಳೆದ ಚುನಾವಣೆಯಲ್ಲಿ ನನ್ನೊಟ್ಟಿಗೆ ಕೆಲಸ ಮಾಡಿದವರೂ ನನ್ನ ವಿರೋಧಿಸುತ್ತಿದ್ದಾರೆ. ಆದರೇ ಅದ್ಯಾಕೆ ಎನ್ನೋದು ಅವರೇ ಹೇಳಬೇಕೆಂದರು.

ಜನ ಸಾಮಾನ್ಯ, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆಯಲ್ಲಿ ವಿಚಾರಿಸಿದರೇ ಮಾತ್ರ ನಡೆದ ಅಭಿವೃದ್ಧಿ ಕಾರ್ಯಗಳು ತಿಳಿಯುತ್ತೆ, ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ವಾರಾಹಿ ನೀರಾವರಿ, ಮೀನುಗಾರಿಕೆ, ಬಂದರು, ಆರೋಗ್ಯ ಹಾಗೂ ವಿವಿಧ ಇಲಾಖೆಗೆ ಬೇಕಾದಷ್ಟು ಅನುದಾನ ತಂದಿದ್ದೇನೆ. ವಿಧಾನ ಸಭೆಯಲ್ಲಿ ಮಾತನಾಡಿದ್ದರ ಬಗ್ಗೆಯೂ ನನ್ನ ಬಳಿ ದಾಖಲೆ ಇದೆ. ಶಾಸಕರು ಯಾವ ಕಾರ್‍ಯಕ್ರಮಕ್ಕೂ ಬರೋದಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು ಭಾಗವಹಿಸಲೇಬೇಕಾದ ಎಲ್ಲಾ ಕಾರ್‍ಯಕ್ರಮದಲ್ಲೂ ಪಾಲ್ಗೊಂಡಿದ್ದೇನೆ. ಸೋಶಿಯಲ್ ಮೀಡಿಯಾ ಬಗ್ಗೆ ಗೊತ್ತಿಲ್ಲ. ಅಭಿವೃದ್ಧಿ ಕೆಲಸ ಬಗ್ಗೆ ಅನಗಳ್ಳಿ ಗ್ರಾಮಸ್ಥರು ಹೇಳಬೇಕು. ಕೋಡಿ ವಾಸಿಗಳು ಮಾತನಾಡಬೇಕು. ಕೋಡಿ, ಆನಗಳ್ಳಿ ಬ್ರಿಜ್ ರಚನೆ ಅಭಿವೃದ್ಧಿ ಅಲ್ಲವಾ? ಕುಂದಾಪುರ ಮಿನಿ ವಿಧಾಸ ಸೌಧ ರಚನೆ ಆಗಿಲ್ವಾ? ರಸ್ತೆಗಳ ಅಭಿವೃದ್ಧಿ ಮೂರುಕಡೆ ಜಟ್ಟಿ ನಿರ್ಮಾಣ ಅಭಿವೃದ್ಧಿ ಅಲ್ಲವಾ? ತಾಲೂಕಿನಲ್ಲಿ ೩೨ ಗ್ರಾಮ ಪಂಚಾಯತ್, ಒಂದು ಪಟ್ಟಣ ಹಾಗೂ ಪುರಸಭೆ ಇದ್ದು, ಶಾಸಕರ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎನ್ನೋದಕ್ಕೆ ಉತ್ತರ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

 

 

Comments are closed.