ಕರ್ನಾಟಕ

ರಸ್ತೆ ಬದಿ ಅನಾಥವಾಗಿ ಮಲಗಿದ್ದ ವೃದ್ದೆ ರಕ್ಷಿಸಿದ ದಂಪತಿ

Pinterest LinkedIn Tumblr


ಚೆನ್ನೈ: ತಮಿಳುನಾಡಿನ ಅಣ್ಣಾ ಸಲೈ ಪ್ರದೇಶದ ರಸ್ತೆಯ ಮೇಲೆ ಅನಾಥ ಶವದಂತೆ ಬಿದ್ದಿದ್ದ 70ರ ವೃದ್ದೆಯೊಬ್ಬರನ್ನು ದಂಪತಿ ರಕ್ಷಿಸಿದ್ದು, 108 ತುರ್ತು ಸೇವೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದೆಯನ್ನು ರಾಜೀವ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ‘ವೃದ್ದೆ ಕಳೆದ ಮೂರು-ನಾಲ್ಕು ದಿನಗಳಿಂದ ರಸ್ತೆಯಲ್ಲಿ ಅನಾಥವಾಗಿಯೇ ಬಿದ್ದಿದ್ದರೂ, ಯಾರೊಬ್ಬರೂ ವಿಚಾರಿಸಲು ಬಂದಿರಲಿಲ್ಲ,’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ದೇವಪ್ರಭು ಹಾಗೂ ಅವರ ಪತ್ನಿ ಡಿ.ವಿನಿತಾ ವೃದ್ದೆಯನ್ನು ರಕ್ಷಿಸಿದ ದಂಪತಿ. ’70ರ ಪ್ರಾಯದ ವೃದ್ದೆ ತೀವ್ರ ಅಸ್ವಸ್ಥೆಯಿಂದ ಬಳಲುತ್ತಿದ್ದು, ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತುರ್ತು ವೈದ್ಯಕೀಯ ತಂತ್ರಜ್ಞೆ ಜಿ.ಭಾಗ್ಯಲಕ್ಷ್ಮೀ ಅವರು ಮಾಹಿತಿ ನೀಡಿದ್ದಾರೆ.

‘ನಾಲ್ಕೈದು ದಿನಗಳಿಂದ ರಸ್ತೆಯಲ್ಲಿ ಅನಾಥವಾಗಿ ಮಲಗಿದ್ದ ವೃದ್ದೆಯ ಸಹಾಯಕ್ಕೆ ಯಾರು ಮುಂದೆ ಬಾರದಿರುವುದು ನಿಜಕ್ಕೂ ದುರಂತವೇ ಸರಿ. ಖಾಸಗಿ ವ್ಯಕ್ತಿಗಳನ್ನು ಸಹಾಯಕ್ಕೆ ಕರೆದರೆ ಹಣದ ಬೇಡಿಕೆ ಇಡುತ್ತಾರೆ. ಕೊನೆಗೆ 108 ಸಹಾಯದಿಂದ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ,’ ಎಂದು ಕಂಪ್ಯೂಟರ್ ಅಂಗಡಿ ನಡೆಸುತ್ತಿರುವ ಪ್ರಭು ಹೇಳಿದ್ದಾರೆ.

ದೇವಪ್ರಭು ಹಾಗೂ ಡಿ.ವಿನಿತಾ ದಂಪತಿ ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ, ವೃದ್ಧೆಗೆ ಅಗತ್ಯ ಬಟ್ಟೆಗಳನ್ನೂ ನೀಡಲಿದ್ದಾರೆ.

Comments are closed.