ಪ್ರಮುಖ ವರದಿಗಳು

ನಿಷೇಧಿತ ಹಳೆಯ ನೋಟುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪದ್ಮಪ್ರಶಸ್ತಿ ಪುರಸ್ಕೃತ ವೈದ್ಯನನ್ನು ವಶಕ್ಕೆ ಪಡೆದ ಸಿಬಿಐ

Pinterest LinkedIn Tumblr

black-money-122316

ಮುಂಬೈ: ನೋಟುನಿಷೇಧ ಬಳಿಕ ದೇಶಾದ್ಯಂತ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಶನಿವಾರ ಮಹತ್ವದ ಬೆಳವಣಿಗೆಯೊಂದರಲ್ಲಿ ನಿಷೇಧಿತ ಹಳೆಯ ನೋಟುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಪದ್ಮಪ್ರಶಸ್ತಿ ಪುರಸ್ಕೃತ ವೈದ್ಯರೊಬ್ಬರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮುಂಬೈನ ಖ್ಯಾತ ವೈದ್ಯ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ದೃತ ಡಾ.ಸುರೇಶ್ ಅಡ್ವಾಣಿ ಅವರನ್ನು ಸಿಬಿಐ ಅಧಿಕಾರಗಳು ವಶಕ್ಕೆ ಪಡೆದಿದ್ದು, ಕಪ್ಪುಹಣವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಇತರೆ ಐವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಡಾ.ಸುರೇಶ್ ಅಡ್ವಾಣಿ ಅವರು ಸುಮಾರು 10 ಕೋಟಿ ಮೌಲ್ಯದ ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದು, ಪ್ರಸ್ತುತ ಆ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಕಪ್ಪುಹಣ ಸಾಗಣೆ ವೇಳೆ ಬಂಧಿತರಾಗಿದ್ದ ಇತರೆ ಐವರನ್ನು ಯೋಗೇಶ್ ಬಿ ಶಿರೋಯೆ, ಧರಮ್ ರಾಜ್ ತಿಗಲ್, ಕ್ರಿಶ್, ಗಜಾನಂದ್ ಸೋಮನಾಥ್, ಬಿಎಂ ಶಾ ಎಂದು ಗುರುತಿಸಲಾಗಿದೆ. ಆರೋಪಗಳೆಲ್ಲರೂ ವೈದ್ಯನಾಥ್ ಕೊಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳಾಗಿದ್ದು, 10 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಮುಂಬೈನ ಘಟಕೋಪರ್ ಬಳಿ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಪೈಕಿ ಮೂವರನ್ನು ವಿಚಾರಣೆಗೊಳಪಡಿಸಲಾಗಿದ್ದು, 10 ಕೋಟಿ ರು. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ವೈದ್ಯ ಡಾ.ಸುರೇಶ್ ಅಡ್ವಾಣಿ ಅವರ ವಿರುದ್ಧ ಸಿಬಿಐ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಡಾ.ಸುರೇಶ್ ಅಡ್ವಾಣಿ ಅವರು ಔರಂಗಾಬಾದ್ ನಲ್ಲಿರುವ ಸಿಐಐಜಿಎಂ ಆಸ್ಪತ್ರೆಯಲ್ಲಿ ಗ್ರಂಥಿಶಾಸ್ತ್ರಜ್ಞರಾಗಿದ್ದು, ದೇಶದ ಪ್ರಮುಖ ಗ್ರಂಥಿಶಾಸ್ತ್ರ ವೈದ್ಯರಲ್ಲಿ ಇವರೂ ಒಬ್ಬರಾಗಿದ್ದಾರೆ. ಹೆಮಟಾಪೊಯಿಟಿಕ್ ಸ್ಟೆಂ ಸೆಲ್ ಕಸಿ ಶಸ್ತ್ರ ಚಿಕಿತ್ಸೆ ನಿಪುಣರಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಶಸ್ತಿಗಳನ್ನು ಸುರೇಶ್ ಅಡ್ವಾಣಿ ಅವರು ಪಡೆದಿದ್ದಾರೆ. 2002ರಲ್ಲಿ ಪದ್ಮಶ್ರೀ ಹಾಗೂ 2012ರಲ್ಲಿ ಸುರೇಶ್ ಅಡ್ವಾಣಿ ಅವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

Comments are closed.