ಪ್ರಮುಖ ವರದಿಗಳು

ಪಾಸ್‌ಪೋರ್ಟ್‌ ನಿಯಮ ಸಡಿಲಿಕೆ; ಜನನ ಪತ್ರ ಬೇಕಿಲ್ಲ…

Pinterest LinkedIn Tumblr

passport

ನವದೆಹಲಿ: ಪಾಸ್‌ಪೋರ್ಟ್‌ ನಿಯಮಗಳನ್ನು ಸಡಿಲಿಸಲಾಗಿದೆ. ಪಾಸ್‌ಪೋರ್ಟಿಗೆ ಅರ್ಜಿ ಸಲ್ಲಿಸುವಾಗ ಜನ್ಮ ದಿನಾಂಕದ ದೃಢೀಕರಣಕ್ಕೆ ಜನನ ಪ್ರಮಾಣಪತ್ರ ಸಲ್ಲಿಕ್ಕೆ ಕಡ್ಡಾಯ ಎಂಬ ನಿಯಮವನ್ನು ರದ್ದುಪಡಿಸಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪಾಸ್‌ಪೋರ್ಟ್‌ ನಿಯಮ ಪ್ರಕಾರ, 1989ರ ಜನವರಿ 26ರ ನಂತರ ಜನಿಸಿದವರು ಜನನ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಆದರೆ ಈ ನಿಯಮವನ್ನು ಈಗ ಬದಲಾಯಿಸಲಾಗಿದೆ.

ಪಾಸ್‌ಪೋರ್ಟಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವವರು ತಂದೆ, ತಾಯಿ ಅಥವಾ ಪಾಲಕರಲ್ಲಿ ಯಾರಾದರು ಒಬ್ಬರ ಹೆಸರು ನಮೂದಿಸಿದರೆ ಸಾಕು. ಇದರಿಂದ ಒಂಟಿ ತಾಯಂದಿರು ತಮ್ಮ ಮಕ್ಕಳಿಗೆ ಪಾಸ್‌ಪೋರ್ಟ್‌ ಮಾಡಿಸುವುದು ಸುಲಭವಾಗಲಿದೆ. ಹಾಗೆಯೇ ಅರ್ಜಿದಾರರು ಬಯಸಿದರೆ ಪಾಸ್‌ಪೋರ್ಟ್‌ನಲ್ಲಿ ತಂದೆ ಅಥವಾ ತಾಯಿಯ ಹೆಸರು ಮುದ್ರಿಸದೇ ಇರುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಸಾಧು ಮತ್ತು ಸನ್ಯಾಸಿನಿಯರು ತಮ್ಮ ಹೆತ್ತವರ ಬದಲಿಗೆ ಗುರುವಿನ ಹೆಸರನ್ನು ನಮೂದಿಸಬಹುದು. ಆದರೆ ಗುರುವಿನ ಹೆಸರು ಇರುವ ತಮ್ಮ ಯಾವುದಾದರೂ ಒಂದು ಗುರುತಿನ ಚೀಟಿಯನ್ನು (ಮತದಾರರ ಚೀಟಿ, ಪ್ಯಾನ್‌ ಕಾರ್ಡ್‌, ಆಧಾರ್‌ ಇತ್ಯಾದಿ) ಸಲ್ಲಿಸಬೇಕು.

ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್‌ ಅವರು ಹೊಸ ನಿಯಮಗಳನ್ನು ಪ್ರಕಟಿಸಿದರು. ಹೊಸ ನಿಯಮಗಳ ಪ್ರಕಾರ ಸರ್ಕಾರಿ ಸೇವೆಯಲ್ಲಿ ಇರುವವರಿಗೂ ಕೆಲವು ವಿನಾಯಿತಿ ನೀಡಲಾಗಿದೆ.

ಸರ್ಕಾರಿ ನೌಕರರಿಗೆ ತಮ್ಮ ಇಲಾಖೆ/ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ ಸಿಕ್ಕಿಲ್ಲ ಎಂದಾದರೆ, ಪಾಸ್‌ಪೋರ್ಟ್‌ ಪಡೆಯುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂಬ ಘೋಷಣಾ ಪತ್ರ ನೀಡಬಹುದು. ಹಿಂದಿನ ನಿಯಮಗಳ ಪ್ರಕಾರ, ಪಾಸ್‌ಪೋರ್ಟ್‌ ನೀಡಿದ ಐದು ವರ್ಷಗಳ ನಂತರ ಜನ್ಮ ದಿನಾಂಕದಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇರಲಿಲ್ಲ. ಆದರೆ ಈ ನಿಯಮವನ್ನೂ ಬದಲಾಯಿಸಲಾಗಿದೆ. ಈಗ ಪಾಸ್‌ಪೋರ್ಟ್‌ ಅಧಿಕಾರಿಗಳು ಜನ್ಮ ದಿನಾಂಕ ಬದಲಾವಣೆಯ ಅರ್ಜಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬಹುದು. ಇದಕ್ಕೆ ಸಮಯದ ಮಿತಿ ಇಲ್ಲ.

ಬದಲಿ ದಾಖಲೆಗಳು ಯಾವ್ಯಾವು?
* ಶಾಲಾ ವರ್ಗಾವಣೆ/ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ

* ಪ್ಯಾನ್‌ ಕಾರ್ಡ್‌
* ಜನ್ಮ ದಿನಾಂಕ ಇರುವ ಆಧಾರ್‌/ ಇ–ಆಧಾರ್‌
* ಅರ್ಜಿದಾರರ ಸೇವಾ ದಾಖಲೆ ಪ್ರತಿ
* ಚಾಲನಾ ಪರವಾನಗಿ
* ಮತದಾರರ ಗುರುತು ಚೀಟಿ
* ಎಲ್‌ಐಸಿ ಪಾಲಿಸಿಯ ಬಾಂಡ್‌

ಏನೆಲ್ಲಾ ಬದಲಾವಣೆ
* ವಿಚ್ಛೇದಿತರು/ ಗಂಡನಿಂದ ಪ್ರತ್ಯೇಕವಾಗಿ ಜೀವಿಸುತ್ತಿರುವವರು ಪಾಸ್‌ಪೋರ್ಟ್ ಅರ್ಜಿಯಲ್ಲಿ ಗಂಡನ ಹೆಸರು ಬರೆಯುವ ಅಗತ್ಯ ಇಲ್ಲ

* ಸಾಧುಗಳು ಮತ್ತು ಸನ್ಯಾಸಿನಿಯರ ಪಾಸ್‌ಪೋರ್ಟಿನಲ್ಲಿ ಹೆತ್ತವರ ಹೆಸರಿನ ಬದಲಿಗೆ ತಮ್ಮ ಗುರುವಿನ ಹೆಸರು ನಮೂದಿಸಲು ಅವಕಾಶ ನೀಡಲಾಗಿದೆ

* ಅನಾಥಾಲಯದಲ್ಲಿರುವ ಮಕ್ಕಳ ವಯಸ್ಸನ್ನು ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಬಹುದು. ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಅದನ್ನು ಘೋಷಿಸಿದರೆ ಸಾಕು

* ದತ್ತು ಮಕ್ಕಳಿಗೆ ಪಾಸ್‌ಪೋರ್ಟ್‌ ಪಡೆಯಲು ಅವರನ್ನು ದತ್ತು ಪಡೆದ ಕರಾರಿನ ನೋಂದಿತ ಪ್ರತಿಯನ್ನು ಸಲ್ಲಿಸುವ ಅಗತ್ಯ ಇಲ್ಲ. ದತ್ತು ಪಡೆದಿರುವುದನ್ನು ದೃಢಪಡಿಸುವ ಪತ್ರ ನೀಡಿದರೆ ಸಾಕು

Comments are closed.