ಚೆನ್ನೈ: ವಾರ್ದಾ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದೆ. ಗಂಟೆಗೆ 150 ಕಿಮೀ ವೇಗದಲ್ಲಿ ಚಂಡಮಾರುತವು ತಮಿಳುನಾಡಿನ ಕರಾವಳಿ ಭಾಗದಲ್ಲಿ ರೌದ್ರಾವತಾರ ತಾಳಿದೆ. ಚೆನ್ನೈನಲ್ಲಿ 10 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಗಳು ಬಂದಿವೆ.
ಚೆನ್ನೈ, ತಿರುವಳ್ಳೂರ್ ಮತ್ತು ಕಾಂಚೀಪುರಂನಲ್ಲಿ ಇಂದು ಸೋಮವಾರ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ. ಗಾಳಿಯ ರಭಸಕ್ಕೆ ಸುಮಾರು 300 ಮರಗಳು 37 ವಿದ್ಯುತ್ ಕಂಬಗಳು ಧರೆಗುರುಳಿವೆ. 224 ರಸ್ತೆಗಳು ಅಸ್ತವ್ಯಸ್ಥಗೊಂಡಿವೆ. ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಚೆನ್ನೈನ ಸಾಕಷ್ಟು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭೂಕುಸಿತ ಸಂಭವಿಸುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ಆಂಧ್ರದಿಂದ ಚೆನ್ನೈಗೆ ಓಡಾಡುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಚೆನ್ನೈ ಏರ್’ಪೋರ್ಟನ್ನು ರಾತ್ರಿ 9ಗಂಟೆವರೆಗೂ ಸ್ಥಗಿತಗೊಳಿಸಲಾಗಿದೆ.
ಉತ್ತರ ಉತ್ತರ ಚೆನ್ನೈ ಹಾಗೂ ತಿರುವಳ್ಳೂರು,ಮಲ್ಲಾಪುರಂ,ಕಾಂಚಿಪುರಂ ಜಿಲ್ಲೆಗಳಲ್ಲಿನ ತಗ್ಗು ಪ್ರದೇಶಗಳಲ್ಲಿರುವ ಸುಮಾರು 8 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.ಬೇಳಿಗ್ಗೆ 7 ಗಂಟೆಯಿಂದೆ ಎಲ್ಲ ವಿಮಾನ ಹಾರಾಟಗಳನ್ನು ಹಾಗೂ ಚೆನ್ನೈ ಕೇಂದ್ರದಿಂದ ಹೊರಡುವ 17ರೈಲುಗಳನ್ನು ರದ್ದುಗೊಳಿಸಲಾಗಿದೆ.
ಎನ್’ಡಿಆರ್’ಎಫ್’ನ 15 ತಂಡಗಳು ತಮಿಳುನಾಡು ಹಾಗು ಆಂಧ್ರದ ಕರಾವಳಿ ಭಾಗಗಳಲ್ಲಿ ನಿಯೋಜನೆಯಾಗಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಪ್ರತೀ ತಂಡದಲ್ಲೂ 45 ಸಿಬ್ಬಂದಿ ಇದ್ದು, ತೀವ್ರತರವಾದ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ತರಬೇತಿಯನ್ನು ಹೊಂದಿದವರಾಗಿದ್ದಾರೆ. ಎನ್’ಡಿಆರ್’ಎಫ್ ಜೊತೆಗೆ ಸೇನಾ ಸಿಬ್ಬಂದಿಯೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಇದೇ ವೇಳೆ, ತಮಿಳುನಾಡು ಸರಕಾರ ಕರಾವಳಿ ಭಾಗದ ಜನರಿಗೆ ಸಹಾಯವಾಣಿ ನಂಬರ್ ನೀಡಿದೆ.
044-25619206, 25619511, 25384965, 25383694, 25383694, 25367823, 25387570.
ಇದೇ ವೇಳೆ, ಕರ್ನಾಟಕದ ಮೇಲೂ ಚಂಡಮಾರುತದ ಪರಿಣಾಮ ವ್ಯಕ್ತವಾಗಲಿದೆ. ಬೆಂಗಳೂರು, ಕೋಲಾರ ಮತ್ತು ಕೆಜಿಎಫ್ ಭಾಗಗಳಲ್ಲಿ ಡಿ. 13 ಮತ್ತು 14ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಈ ಚಂಡಮಾರುತವು ಗೋವಾ ರಾಜ್ಯವನ್ನು ಮುಟ್ಟುವ ನಿರೀಕ್ಷೆ ಇದೆ.