ಪ್ರಮುಖ ವರದಿಗಳು

ನ.24ರವರೆಗೆ ಹಳೆಯ ನೋಟುಗಳ ಚಲಾವಣೆಗೆ ಅವಕಾಶ: ಎಟಿಎಂಗಳಲ್ಲಿ 500ರ ಹೊಸ ನೋಟು

Pinterest LinkedIn Tumblr

centralನವದೆಹಲಿ,ನ.14- ಕಾಳಧನಿಕರನ್ನು ಮಟ್ಟ ಹಾಕಲು ಹಾಗೂ ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಪ್ರಧಾನಿ ಮೋದಿ 500 ಮತ್ತು 1000ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದ ಬೆನ್ನಲ್ಲೇ ಜನ ಸಾಮಾನ್ಯರು ಬದಲಿ ನೋಟುಗಳನ್ನು ಪಡೆಯಲು ಹೆಣಗಾಡುತ್ತಿದ್ದುದನ್ನು ಗಮನಿಸಿದ ಕೇಂದ್ರ ಸರ್ಕಾರ ಇದೀಗ ಜನರಿಗೆ `ದುಡ್ಡಿದೆ, ದುಡಕಬೇಡಿ’ ಎಂದು ಅಭಯ ನೀಡಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಥಿಕ ವ್ಯವಹಾರ ಸಮಿತಿಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಜನರ ಬವಣೆ ನೀಗಲು ಕೇಂದ್ರ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ದುಬಾರಿ ನೋಟಿನ ಮೇಲೆ ದಿಢೀರನೆ ಹೇರಲಾಗಿದ್ದ ನಿಷೇಧದಿಂದಾಗಿ ಕಂಗಾಲಾಗಿದ್ದ ಸಾರ್ವಜನಿಕರಿ ಅನುಕೂಲಕ್ಕೆ ಕೇಂದ್ರ ಸರ್ಕಾರ ಎಟಿಎಂ ವಿತ್‍ಡ್ರಾ ಮಿತಿ ಹಾಗೂ ಬ್ಯಾಂಕ್ ಕೌಂಟರ್‍ಗಳ ಮಿತಿಯನ್ನು ಏರಿಕೆ ಮಾಡಿದೆ.

ಎಟಿಎಂ ವಿತ್ ಡ್ರಾ ಮಿತಿಯನ್ನು 2000ರಿಂದ 2,500ಕ್ಕೆ ಹಾಗೂ ಬ್ಯಾಂಕ್ ಕೌಂಟರ್‍ಗಳ ಮಿತಿಯನ್ನು 4 ಸಾವಿರದಿಂದ 4,500ಕ್ಕೆ ಏರಿಕೆ ಮಾಡಿದೆ. ಜೊತೆಗೆ ಗರ್ಭಿಣಿಯರು ಹಾಗೂ ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೇಂದ್ರ ಸರ್ಕಾರ ಬ್ಯಾಂಕ್‍ಗಳಿಗೆ ಕರೆ ನೀಡಿದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣದ ಅಗತ್ಯತೆ ಹೆಚ್ಚಾಗಿರಲಿದ್ದು, ಬ್ಯಾಂಕ್‍ಗಳು ಪ್ರತ್ಯೇಕವಾಗಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚನೆ ನೀಡಿದೆ.

ನ.24ರವರೆಗೆ ಹಳೆಯ ನೋಟುಗಳ ಚಲಾವಣೆ:

ಪ್ರಮುಖ ಬೆಳವಣಿಯೊಂದರಲ್ಲಿ ನಿಷೇಧಕ್ಕೆ ಒಳಗಾಗಿರುವ ಹಳೆಯ 500 ಮತ್ತು 1000ರೂ. ಮುಖಬೆಲೆಯ ನೋಟುಗಳ ಚಲಾವಣೆಯ ಕಾಲಾವಧಿಯನ್ನು ಕೇಂದ್ರ ಸರ್ಕಾರ ಮತ್ತೆ 10 ದಿನಕ್ಕೆ ವಿಸ್ತರಿಸಿದೆ.

ಸರ್ಕಾರಿ ಕಚೇರಿ, ಸರ್ಕಾರಿ ಸಾರಿಗೆ ಸಂಸ್ಥೆ, ಪೆಟ್ರೋಲ್ ಬಂಕ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ನೋಟುಗಳ ಚಲಾವಣೆ ಕಾಲಾವಧಿಯನ್ನು ಮತ್ತೆ 10 ದಿನಗಳ ಕಾಲ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ನೋಟು ರದ್ಧತಿ ಘೋಷಣೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 14ರ ವರೆಗೂ ಹಳೆಯ ನೋಟುಗಳನ್ನು ಸರ್ಕಾರಿ ಸಂಸ್ಥೆಗಳಲ್ಲಿ ಬಳಕೆ ಮಾಡಬಹುದು ಎಂದು ಹೇಳಿದ್ದರು. ಅದರಂತೆ ಇಂದಿಗೆ ಹಳೆಯ ನೋಟುಗಳ ಚಲಾವಣೆ ಅಂತ್ಯವಾಗಬೇಕಿತ್ತು. ಆದರೆ ಹಳೆಯ ನೋಟುಗಳ ಚಲಾವಣೆಯನ್ನು ಮತ್ತಷ್ಟು ದಿನಗಳ ಕಾಲ ಮುಂದುವರೆಸುವಂತೆ ದೇಶಾದ್ಯಂತ ವ್ಯಾಪಕ ಮನವಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಅವಧಿ ವಿಸ್ತರಿಸಿದೆ.

ಎಟಿಎಂಗಳಲ್ಲಿ 500ರ ನೋಟು:

ಬಿಗಿ ಭದ್ರತೆಯ ನಡುವೆ 500ರೂ ನೋಟುಗಳನ್ನು ನಾನಾ ಬ್ಯಾಂಕ್‍ಗಳಿಗೆ ಇಂದು ಬಿಡುಗಡೆಗೊಳಿಸಲಾಗುತ್ತಿದ್ದು, ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.

ನವದೆಹಲಿಯ ಎಸ್‍ಬಿಐ ಪಾರ್ಲಿಮೆಂಟ್ ಸ್ಟ್ರೀಟ್ ಬ್ರಾಂಚ್‍ನಲ್ಲಿ ಹೊಸ 500ರೂ. ನೋಟುಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಟ್ವೀಟ್‍ನಲ್ಲಿ ಹೇಳಿದೆ.

ದೆಹಲಿಯ ಎಸ್‍ಬಿಐ ಕೇಂದ್ರ ಕಚೇರಿಯಲ್ಲಿ ಈಗಾಗಲೇ 500ರೂ. ನೋಟುಗಳನ್ನು ವಿತರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧ ಮಾಡಿದ ದಿನದಿಂದಲೂ ಬ್ಯಾಂಕ್‍ಗಳಲ್ಲಿ 2000ರೂ. ಮತ್ತು 100ರೂ.ಗಳ ನೋಟುಗಳೇ ಲಭ್ಯವಾಗುತ್ತಿದ್ದವು. 500ರೂ. ನೋಟುಗಳಿಂದ ಬ್ಯಾಂಕುಗಳ ಸಿಬ್ಬಂದಿಗೆ ಕೊಂಚ ಹೊರೆ ಕಡಿಮೆಯಾಗಲಿದೆ.

ನೋಟುಗಳ ಆಕಾರಕ್ಕೆ ಸಂಬಂಧಿಸಿದಂತೆ ಎಟಿಎಂಗಳನ್ನು ದುರಸ್ಥಿಗೊಳಿಸಿದ ನಂತರ ಎಟಿಎಂಗಳಲ್ಲಿ ಹಣ ಸಿಗುತ್ತದೆ. ಆರ್‍ಬಿಐನ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿಯುಳ್ಳ ಹೊಸ ನೋಟುಗಳು ಇಂದಿನಿಂದ ಬ್ಯಾಂಕ್‍ಗಳಲ್ಲಿ ಲಭ್ಯವಿದೆ. 500ರೂ.ಗಳನ್ನು ಬೇರೆಯದೇ ಬಣ್ಣ, ಆಕಾರದಲ್ಲಿ ಮುದ್ರಿಸಲಾಗಿದ್ದು, ಸಾಕಷ್ಟು ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಂದೂ ಮುಂದುವರೆದ ಸಾಲು:

ಇಂದು ಗುರುನಾನಕ್ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇದ್ದರೂ, ಬ್ಯಾಂಕ್ ಹಾಗೂ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಬೆಳಗ್ಗಿನಿಂದಲೇ ಹಣ ಪಡೆಯಲು ನಾಗರಿಕರು ಬ್ಯಾಂಕ್, ಎಟಿಎಂ, ಅಂಚೆ ಕಚೇರಿಯತ್ತ ದೌಡಾಯಿಸುತ್ತಿದ್ದಾರೆ.

ಇದರಿಂದ ನಗರದ ಹಲವು ಎಟಿಎಂ, ಬ್ಯಾಂಕ್, ಅಂಚೆ ಕಚೇರಿ ಮುಂದೆ ಬೆಳಗ್ಗೆ 7 ಗಂಟೆಯಿಂದಲೇ ಸರದಿ ಸಾಲು ಕಂಡು ಬಂದಿತು. ಪ್ರಮುಖವಾಗಿ ಕರ್ನಾಟಕ ಬ್ಯಾಂಕ್, ಎಸ್‍ಬಿಐ, ಎಸ್‍ಬಿಎಂ ಹಾಗೂ ಬ್ಯಾಂಕ್ ಎದುರು ಸರದಿ ಸಾಲು ದೊಡ್ಡದಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿದೆ.

Comments are closed.