ನವದೆಹಲಿ: ರಿಯೊ ಒಲಂಪಿಕ್ಸ್ನಲ್ಲಿ ಈಗಾಗಲೇ ಬೆಳ್ಳಿ ಪದಕದ ಗೆಲುವನ್ನು ಖಚಿತಪಡಿಸಿರುವ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಬಂಗಾರ ಪದಕ ಗೆದ್ದು ಹೊಸ ಚರಿತ್ರೆ ನಿರ್ಮಿಸಲಿ ಎಂಬುದು ದೇಶದ 120 ಕೋಟಿ ಜನರ ಆಶಯವಾಗಿದೆ.
ಇಡೀ ರಾಷ್ಟ್ರವೇ ಆ ಬಂಗಾರದ ನಿಮಿಷಕ್ಕಾಗಿ ಕಾತರದಿಂದ ನಿರೀಕ್ಷಿಸುತ್ತಿದೆ. ಭಾರತವೀಗ ಸಿಂಧು ಸ್ವಪ್ನದಲ್ಲಿದೆ. ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಫೈನಲ್ ತಲುಪಿ ಚಾರಿತ್ರಿಕ ದಾಖಲೆ ಸೃಷ್ಟಿಸಿರುವ ಸಿಂಧು ಇಂದು ಸಂಜೆ 6.30ಕ್ಕೆ ನಡೆಯುವ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಸ್ಪೇನ್ನ ಕರೋಲಿನಾ ಮರಿನ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ 10ನೆ ಶ್ರೇಯಾಂಕದ ಸಿಂಧು ಜಪಾನ್ ಆಟಗಾರ್ತಿ ಮತ್ತು ವಿಶ್ವದ ಆರನೆ ಶ್ರೇಯಾಂಕಿತೆ ನೊಜೊಮಿ ಒಕುಹಾರ ವಿರುದ್ಧ 21-19, 21-10ರ ಎರಡು ನೇರ ಸೆಟ್ಗಳಿಂದ ಮಣಿಸಿ ಫೈನಲ್ ತಲುಪಿದ್ದಾರೆ.
ಒಲಂಪಿಕ್ ಕ್ರೀಡಾಕೂಟದಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತ ಫೈನಲ್ಗೆ ಲಗ್ಗೆ ಹಾಕಿದ ಭಾರತದ ಏಕಮೇವ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಐತಿಹಾಸಿಕ ದಾಖಲೆ ಮಾಡಿರುವ ಹೈದರಾಬಾದ್ನ ಹುಡುಗಿ ಸಿಂಧು ಮೇಲೆ ಇಡೀ ಭಾರತದ ಕಣ್ಣು ನೆಟ್ಟಿದೆ. ಸಿಂಧು ಚಿನ್ನದ ಸಾಧನೆ ಮಾಡಲಿ ಎಂದು ದೇಶದ ವಿವಿಧೆಡೆ ಪ್ರಾರ್ಥನೆಗಳು ನಡೆಯುತ್ತಿವೆ. ಗುಡ್ಲಕ್ ಸಿಂಧು… ಆಲ್ ದಿ ಬೆಸ್ಟ್.
Comments are closed.