ಅಂತರಾಷ್ಟ್ರೀಯ

ಎಮಿರೇಟ್ಸ್ ವಿಮಾನ ದುರಂತದಿಂದ ಬಚಾವಾಗಿರುವ ಭಾರತೀಯನಿಗೆ ಒಲಿದ ಅದೃಷ್ಟ ! ಲಕ್ಕಿ ಡ್ರಾದಲ್ಲಿ ಸಿಕ್ಕಿತು ಒಂದು ಮಿಲಿಯನ್ ಡಾಲರ್

Pinterest LinkedIn Tumblr

basheer

ದುಬೈ: ಅದೃಷ್ಟ ಯಾವ ಯಾವ ರೀತಿ ಹುಡುಕಿಕೊಂಡು ಬರುತ್ತೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ದೊಡ್ಡದೊಂದು ದುರಂತದಲ್ಲಿ ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದ ದುಬೈಯಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬರು ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ.

ಇತ್ತೀಚೆಗೆ ತಿರುವನಂತಪುರಂನಿಂದ ಹೊರಟ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನ ದುಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆಯಲ್ಲಿ ಪವಾಡಸದೃಶವಾಗಿ ಪಾರಾಗಿದ್ದ ಪ್ರಯಾಣಿಕರಲ್ಲೊಬ್ಬರಾದ ದುಬೈನಲ್ಲಿ ಉದ್ಯೋಗದಲ್ಲಿರುವ ಭಾರತೀಯ ಮುಹಮ್ಮದ್ ಬಶೀರ್ ಅಬ್ದುಲ್ ಖಾದರ್‌ಗೆ ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅದೃಷ್ಟ ಖುಲಾಯಿಸಿದೆ.

ಅವರ ಅದೃಷ್ಟವಂತ ಟಿಕೆಟ್ ಸಂಖ್ಯೆ 0845 ದುಬೈ ವಿಮಾನ ನಿಲ್ದಾಣದ ಕಾನ್ಕೋರ್ಸ್ ಎ ಇಲ್ಲಿ ದುಬೈ ಡ್ಯೂಟಿ ಫ್ರೀ ಮಿಲೆನಿಯಂ ಮಿಲಿಯನೇರ್ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದ್ದು ಅವರಿಗೆ ಒಂದು ಮಿಲಿಯನ್ ಡಾಲರ್ ( 3.67 ಮಿಲಿಯನ್ ದಿರ್ಹಮ್) ಬಹುಮಾನ ಬಂದಿದೆ.

ದುಬೈನಲ್ಲಿ ಕಾರು ವಿತರಕ ಕಂಪೆನಿಯೊಂದರಲ್ಲಿ ಫ್ಲೀಟ್ ಅಡ್ಮಿನಿಸ್ಟ್ರೇಟರ್ ಆಗಿರುವ 62 ವರ್ಷದ ಖಾದರ್ ಅವರಿಗೆ ಪ್ರತಿ ಬಾರಿ ತವರು ದೇಶಕ್ಕೆ ಮರಳುವಾಗ ರಾಫೆಲ್ ಟಿಕೆಟ್ ಖರೀದಿಸುವ ಅಭ್ಯಾಸವಿತ್ತು. ಅಂತೆಯೇ ಅವರು ಈ ಟಿಕೆಟ್‌ನ್ನು ಕೇರಳದ ತಿರುವನಂತಪುರಂನಲ್ಲಿರುವ ತಮ್ಮ ಕುಟುಂಬದೊಂದಿಗೆ ರಜಾ ಕಳೆಯುವ ಸಲುವಾಗಿ ಈದ್ ದಿನ ಮುಂಗಡ ಕಾದಿರಿಸಿದ್ದರು. ತಮ್ಮ ಉದ್ಯೋಗದಿಂದ ಮುಂದಿನ ನಾಲ್ಕು ತಿಂಗಳಲ್ಲಿ ಅವರು ನಿವೃತ್ತರಾಗಲಿದ್ದು ಅದಕ್ಕೂ ಮುಂಚೆ ಅವರು ಮಿಲಿಯಾಧಿಪತಿಯಾಗಿದ್ದಾರೆ. ಅವರು ಕಳೆದ 37 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಈ ಅದೃಷ್ಟ ಒಲಿದು ಬಂದಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಮಿರೇಟ್ಸ್ ವಿಮಾನ ತುರ್ತು ಭೂಸ್ಪರ್ಶ ಘಟನೆಯಲ್ಲಿ ತಾನು ಬಚಾವಾಗಿದ್ದು ಪವಾಡವೆಂದು ಅವರು ಬಣ್ಣಿಸುತ್ತಾರೆ. ನಿವೃತ್ತರಾದ ನಂತರ ಭಾರತಕ್ಕೆ ಮರಳಿ ತಮ್ಮ ತವರು ರಾಜ್ಯವಾದ ಕೇರಳದಲ್ಲಿ ಅಸಹಾಯಕ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ಯೋಚನೆ ಅವರಿಗಿದೆ.

ಪ್ರಸಕ್ತ ಖಾದರ್ ಅವರಿಗೆ ಪ್ರತಿ ತಿಂಗಳು ತಮ್ಮ ಉದ್ಯೋಗದಿಂದ 8,000 ದಿರ್ಹಮ್ ವೇತನ ದೊರೆಯುತ್ತಿದ್ದರೂ, 21 ರ ಹರೆಯದ ಅವರ ಪುತ್ರ ಹುಟ್ಟಿ 13 ದಿನಗಳಾದಾಗ ಪಾರ್ಶ್ವವಾಯು ಪೀಡಿತನಾಗಿದ್ದಾಗ ಆತನ ಚಿಕಿತ್ಸೆಗಾಗಿ ಅವರು ಸಾಕಷ್ಟು ಹಣ ವ್ಯಯ ಮಾಡಿದ್ದರು.

ಶಾರ್ಜಾದಲ್ಲಿ ಮೆಕ್ಯಾನಿಕ್ ಆಗಿರುವ ಇನ್ನೊಬ್ಬ ಭಾರತೀಯ ಸದಾನಂದ್ ರಾಘವನ್ ಅವರು 2007ರಲ್ಲಿ ಮಶ್ರೇಖ್ ಬ್ಯಾಂಕಿನ ರಾಫೆಲ್ ಡ್ರಾದಲ್ಲಿ 5 ಮಿಲಿಯನ್ ದಿರ್ಹಮ್ ಬಹುಮಾನ ಪಡೆದಿದ್ದರು.

Comments are closed.