ಮೈಸೂರು: ವಿಶ್ವ ವಿಖ್ಯಾತ ದಸರಾ ಸಂದರ್ಭದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ದುಷ್ಕೃತ್ಯಗಳನ್ನು ಎಸಗುವ ಸಂಭವವಿರುವುದರಿಂದ ಪರಿಸ್ಥಿತಿ ಎದುರಿಸಲು ಸರ್ವ ಸಿದ್ಧತೆಯಲ್ಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಇಂದು ನಡೆದ ಮೊದಲ ತಂಡದ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು. ಮೈಸೂರು ನ್ಯಾಯಾಲಯ ಆವರಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ, ತೆಲಂಗಾಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಸಾಮ್ಯತೆಯಿದೆ. ಇದುವರೆಗೂ ಯಾವುದೇ ಸಂಘಟನೆಯೂ ಬಾಂಬ್ ಸ್ಫೋಟದ ಬಗ್ಗೆ ಒಪ್ಪಿಕೊಂಡಿಲ್ಲ. ಹಾಗಾಗಿ ಘಟನೆ ನಡೆದ ಸ್ಥಳದಲ್ಲಿ ದೊರೆತ ಸಾಕ್ಷಿಗಳನ್ನು ಸಂಗ್ರಹಿಸಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
ಮೈಸೂರು ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ಈ ಬಾರಿಯ ಭದ್ರತೆಯನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ದಸರಾವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್ ಠಾಣೆ ತೆರೆಯಲಾಗುವುದು. ಮಹಿಳೆಯರಿಗೆ ಸಂಬಂಧಿಸಿದ ಎಲ್ಲ ಮೊಕದ್ದಮೆಗಳನ್ನು ಮಹಿಳಾ ಠಾಣೆಗೆ ವರ್ಗಾವಣೆ ಮಾಡಲಾಗುವುದು. ಜಿಲ್ಲಾಧಿಕಾರಿ ಶಿಖಾ ಅವರಿಗೆ ಧಮ್ಕಿ ಹಾಕಿ ಜೈಲು ಸೇರಿರುವ ಮರಿಗೌಡರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು ಮರಿಗೌಡರನ್ನು ಈಗಾಗಲೇ ಕಾಂಗ್ರೆಸ್‍ನಿಂದ ಅಮಾನತ್ತುಗೊಳಿಸಲಾಗಿದೆ ಎಂದು ಹೇಳಿದರು. ನಗರ ಕಾಂಗ್ರೆಸ್ ಅಧ್ಯಕ್ಷ ರವಿಶಂಕರ್ ಅವರು ವ್ಯಕ್ತಿಯೊಬ್ಬರ ಮೇಲೆ ನಡೆಸಿದ ಹಲ್ಲೆ ಕುರಿತಂತೆ ಕೇಳದ ಪ್ರಶ್ನೆಗೆ ಕಾನೂನು ಎಲ್ಲರಿಗೂ ಒಂದೆ. ಹಾಗಾಗಿ ಪೊಲೀಸರು ಕಾನೂನಿನಂತೆ ಕ್ರಮ ಜರುಗಿಸುತ್ತಾರೆ ಎಂದರು.
Comments are closed.