ಬೆಂಗಳೂರು, ಜು.22- ಕಳೆದ 24 ಗಂಟೆಗಳ ಅವಧಿಯಲ್ಲಿ ನಗರದ ವಿವಿಧೆಡೆ ನಾಲ್ವರ ಭೀಕರ ಕೊಲೆ ನಡೆದಿದ್ದು , ರಾಜಧಾನಿಯ ಜನತೆಯನ್ನು ಬೆಚ್ಚಿಬೀಳಿಸಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದರೆ, ರಾಜರಾಜೇಶ್ವರಿನಗರ ಹಾಗೂ ಉಪ್ಪಾರಪೇಟೆಯಲ್ಲಿ ಚಿಂದಿ ಆಯುವವರ ಕೊಲೆ ನಡೆದಿದ್ದು, ಸುಬ್ರಹ್ಮಣ್ಯನಗರ ವ್ಯಾಪ್ತಿಯಲ್ಲಿ ಹಳೆ ದ್ವೇಷದಿಂದ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ.
ಕಾಮಾಕ್ಷಿಪಾಳ್ಯ: ದಂಪತಿ ನಡುವೆ ಮನಸ್ತಾಪ ಉಂಟಾಗಿ ಪತಿಯೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪಲ್ಲವಿ(23) ಕೊಲೆಯಾದ ಮಹಿಳೆ. ಐದು ವರ್ಷದ ಹಿಂದೆ ಸುಂಕದಕಟ್ಟೆಯ ಶ್ರೀನಿವಾಸನಗರ ನಿವಾಸಿ ಪುನೀತ್ ಎಂಬಾತನನ್ನು ಪಲ್ಲವಿ ಮದುವೆಯಾಗಿದ್ದು, ಇವರಿಗೆ ಮೂರು ವರ್ಷದ ಗಂಡು ಮಗುವಿದೆ. ಪುನೀತ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು , ಕೆಲ ತಿಂಗಳುಗಳಿಂದ ದಂಪತಿ ನಡುವೆ ವಿನಾಕಾರಣ ಮನಸ್ತಾಪ ಹಾಗೂ ಕೌಟುಂಬಿಕ ಕಲಹ ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಮನಸ್ತಾಪದಿಂದ ದಂಪತಿ ಪರಸ್ಪರ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದರು. ಈ ಮಧ್ಯೆ ಪಲ್ಲವಿ ಪತಿಯನ್ನು ತೊರೆದು ಪಕ್ಕದ ಬೀದಿಯಲ್ಲೇ ಇರುವ ತನ್ನ ತವರು ಮನೆಯಲ್ಲಿದ್ದರು. ನಿನ್ನೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಇದ್ದುದರಿಂದ ಇಬ್ಬರು ಅಲ್ಲಿಗೆ ತೆರಳಿದಾಗ ಇವರನ್ನು ಕೌನ್ಸಿಲಿಂಗ್ ಮಾಡಲಾಗಿತ್ತು.
ಮಧ್ಯಸ್ಥಿಕೆ ಕೇಂದ್ರದಲ್ಲಿ ನಾವು ಒಟ್ಟಾಗಿ ಬಾಳುವುದಾಗಿ ದಂಪತಿ ಹೇಳಿಕೆ ಕೊಟ್ಟು ಬಂದಿದ್ದರು. ಈ ವೇಳೆ ಪಲ್ಲವಿ ನಾನು ಮನೆಗೆ ಬರುವುದಾಗಿ ಪುನೀತ್‍ಗೆ ಹೇಳಿದಾಗ ಮೂರ್ನಾಲ್ಕು ದಿನ ಬಿಟ್ಟು ಬಾ ಎಂದು ಹೇಳಿದ್ದರಿಂದ ಪಲ್ಲವಿ ತನ್ನ ತಾಯಿ ಮನೆಗೆ ತೆರಳಿದ್ದರು. ರಾತ್ರಿ 9 ಗಂಟೆಯಲ್ಲಿ ಪಲ್ಲವಿ, ಪತಿ ಪುನೀತ್‍ಗೆ ದೂರವಾಣಿ ಕರೆ ಮಾಡಿ ನಾನು ಮನೆಗೆ ಬರುವುದಾಗಿ ತಿಳಿಸಿದಾಗ ಬರುವಂತೆ ಹೇಳಿದ್ದರಿಂದ ಪಲ್ಲವಿ ಮನೆಗೆ ಬಂದಾಗ ಮತ್ತೆ ಇವರಿಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಪುನೀತ್ ಕೈಗೆ ಸಿಕ್ಕ ಮಚ್ಚಿನಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದರಿಂದ ಸ್ಥಳದಲ್ಲೇ ಪಲ್ಲವಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಸುದ್ದಿ ತಿಳಿದ ಕಾಮಾಕ್ಷಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪುನೀತ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಆರ್.ಆರ್.ನಗರ: ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 35 ವರ್ಷದವನಂತೆ ಕಾಣುವ ಈ ವ್ಯಕ್ತಿ ಚಿಂದಿಆಯುವವನೆಂದು ಹೇಳಲಾಗಿದ್ದು, ಹೆಸರು ವಿಳಾಸ ತಿಳಿದುಬಂದಿಲ್ಲ. ಚನ್ನಸಂದ್ರ ಮುಖ್ಯರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡವಿದ್ದು ರಾತ್ರಿ ಈತ ಇಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ವ್ಯಕ್ತಿಯನ್ನು ಯಾರು, ಏತಕ್ಕಾಗಿ ಕೊಲೆ ಮಾಡಿದ್ದಾರೆಂಬುವುದು ಸದ್ಯ ತಿಳಿದುಬಂದಿಲ್ಲ.
ಸುದ್ದಿ ತಿಳಿದ ರಾಜರಾಜೇಶ್ವರಿನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.
ಉಪ್ಪಾರಪೇಟೆ: ಹಣದ ವಿಚಾರ ಹಾಗೂ ಹುಡುಗಿ ವಿಚಾರವಾಗಿ ಇಬ್ಬರು ಸ್ನೇಹಿತರು ಸೇರಿಕೊಂಡು ಚಿಂದಿ ಆಯುವ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಮೂಲತಃ ಕನಕಪುರದ ನಿವಾಸಿ ರಮೇಶ(28) ಕೊಲೆಯಾದ ಯುವಕ. ಬೆಂಗಳೂರಿನಲ್ಲಿ ವಾಸವಾಗಿದ್ದ ಈತ ಚಿಂದಿ ಆಯುತ್ತಿದ್ದನು. ರಾತ್ರಿ ವೇಳೆ ಎಲ್ಲೆಂದರಲ್ಲಿ ಮಲಗುತ್ತಿದ್ದನು. ನಿನ್ನೆ ಮಧ್ಯಾಹ್ನ 3 ಗಂಟೆಯಲ್ಲಿ ಜಲ್ಲಿ ಮತ್ತು ಸೀನಿ ರಮೇಶನಿಗೆ 100 ರೂ. ಕೊಡುವಂತೆ ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದಾಗ ರಮೇಶನ ಜೊತೆ ಹಣ ಹಾಗೂ ಹುಡುಗಿಯ ವಿಚಾರವೆತ್ತುಕೊಂಡು ಜಗಳವಾಡಿದ್ದಾರೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದಾಗ ಇವರಿಬ್ಬರು ಸೇರಿಕೊಂಡು ರಮೇಶನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಕುಸಿದು ಬಿದ್ದ ರಮೇಶನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ.
Comments are closed.