ಪ್ರಮುಖ ವರದಿಗಳು

ಶಂಕಿತ ಪಾಕ್ ಬೋಟ್ ಸ್ಫೋಟ: ನಾಲ್ವರ ಸಾವು; ಗುಜರಾತ್‌ನ ಪೋರ್‌ಬಂದರ್‌ನಿಂದ 365 ಕಿ.ಮೀ. ದೂರದಲ್ಲಿ ಘಟನೆ

Pinterest LinkedIn Tumblr

000163B_

ಅಹ್ಮದಾಬಾದ್, ಜ.2: ಭಾರತದ ಸಮುದ್ರ ಗಡಿಯೊಳಗೆ ಶಂಕಾಸ್ಪದವಾಗಿ ಸಂಚರಿಸುತ್ತಿದ್ದ ಪಾಕಿಸ್ತಾನದ್ದೆನ್ನಲಾದ ಮೀನುಗಾರಿಕಾ ದೋಣಿಯೊಂದನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಬೆನ್ನಟ್ಟಿ ಅಡ್ಡಗಟ್ಟಿದಾಗ ಅದರಲ್ಲಿದ್ದ ನಾಲ್ವರು ಶಂಕಿತ ಉಗ್ರಗಾಮಿಗಳು ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡ ಘಟನೆ ವರದಿಯಾಗಿದೆ.

ಗುಜರಾತ್ ಕರಾವಳಿಯ ಪೋರ್‌ಬಂದರ್‌ನಿಂದ 365 ಕಿ.ಮೀ. (197 ನಾಟಿಕಲ್ ಮೈಲಿ) ದೂರದಲ್ಲಿ ಭಾರತ-ಪಾಕಿಸ್ತಾನ ನಡುವಣ ಸಾಗರ ಗಡಿಯಲ್ಲಿ ಗುರುವಾರ ಬೆಳಗಿನ ಜಾವ (ಡಿಸೆಂಬರ್ 31ರ ಮಧ್ಯರಾತ್ರಿ-ಜನವರಿ ಒಂದರ ಬೆಳಗಿನ ಜಾವದ ನಡುವೆ) 3:50ರ ಹೊತ್ತಿಗೆ ಈ ಘಟನೆ ನಡೆದಿದೆ. ದೋಣಿಯಲ್ಲಿ ಸ್ಫೋಟಕಗಳಿದ್ದ ಕಾರಣ ಅದು ಸ್ಫೋಟಗೊಂಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿವೆ.

ದೋಣಿ ಸ್ಫೋಟಗೊಂಡಿರುವ ರೀತಿ ನೋಡಿದರೆ ಅದರಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟಕಗಳಿದ್ದವು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ ಎಂದು ಈ ಮೂಲಗಳು ಹೇಳಿವೆ.

ಅರಬ್ಬಿ ಸಮುದ್ರ ಮಾರ್ಗದ ಮೂಲಕ ಬಂದು ಮುಂಬೈ ಮಹಾನಗರದ ಮೇಲೆ ಪಾಕಿಸ್ತಾನದ ಉಗ್ರಗಾಮಿಗಳು ನಡೆಸಿದ ಭಯೋತ್ಪಾದನಾ ದಾಳಿಯನ್ನು (26/11) ನೆನಪಿಸಿಕೊಳ್ಳುವಂತಹ ಘಟನೆ ಇದಾಗಿದೆ. ಕರಾಚಿಯ ಕಟಿ ಬಂದರ್‌ನಿಂದ ಪಾಕಿಸ್ತಾನದ ಮೀನುಗಾರಿಕಾ ದೋಣಿ ಹೊರಟಿತ್ತು ಎಂದು ಈ ಮೂಲಗಳು ಹೇಳಿವೆ. ಘಟನೆ ವಿವರ: ಡಿಸೆಂಬರ್ 31ರ ಮಧ್ಯರಾತ್ರಿ ಹೊತ್ತಿಗೆ ಗುಜರಾತ್ ಕರಾವಳಿ ಯಿಂದ ಬಹುದೂರದಲ್ಲಿ ಅರಬ್ಬಿ ಮುದ್ರದಲ್ಲಿ ಶಂಕಾಸ್ಪದವಾಗಿ ಸಂಚರಿಸುತ್ತಿದ್ದ ಮೀನುಗಾರಿಕಾ ದೋಣಿಯೊಂದನ್ನು ಕರಾವಳಿ ಕಾವಲು ಪಡೆಯ ನೌಕೆಗಳು ಮತ್ತು ವಿಮಾನಗಳು ಪತ್ತೆ ಹಚ್ಚಿದವು. ಈ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪಡೆಯ ನೌಕೆಗಳು ಈ ದೋಣಿಯನ್ನು ಗುರುತಿಸಿ ಒಂದು ಗಂಟೆ ಕಾಲ ಬೆನ್ನಟ್ಟಿ ಅಡ್ಡಗಟ್ಟಿದವು. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತರಾಗುವಂತೆ ದೋಣಿಯಲ್ಲಿದ್ದ ವ್ಯಕ್ತಿಗಳಿಗೆ ಕಾವಲು ಪಡೆಯ ಸಿಬ್ಬಂದಿ ಸೂಚನೆ ನೀಡಿದರು.

ಆದರೆ ದೋಣಿಯಲ್ಲಿದ್ದ ನಾಲ್ವರು ಶಂಕಿತ ವ್ಯಕ್ತಿಗಳು ದೋಣಿಯ ನೆಲ ಮಾಳಿಗೆಗೆ ತೆರಳಿ ಅಡಗಿಕೊಂಡರು ಹಾಗೂ ಸ್ವಲ್ಪ ಹೊತ್ತಿನ ನಂತರ ದೋಣಿಗೆ ಬೆಂಕಿ ಹಚ್ಚಿದರು. ಬೆಂಕಿಯಿಂದಾಗಿ ದೋಣಿಯಲ್ಲಿದ್ದ ಸ್ಫೋಟಕಗಳು ಕ್ಷಣ ಮಾತ್ರದಲ್ಲಿ ಸ್ಫೋಟಗೊಂಡವು. ಅಲ್ಲದೆ ಮೀನುಗಾರಿಕೆಯ ದೋಣಿ ಸಮುದ್ರದಲ್ಲಿ ಮುಳುಗಿ ಹೋಯಿತು ಎಂದು ವರದಿಯಾಗಿದೆ.

ಗುಪ್ತಚರ ಮಾಹಿತಿ ಲಭ್ಯ: ಪಾಕಿಸ್ತಾನದ ಕರಾಚಿ ಸಮೀಪದ ಕಟಿ ಬಂದರ್‌ನಿಂದ ಹೊರಡಲಿರುವ ದೋಣಿಯೊಂದು ಕೆಲವೊಂದು ಅಕ್ರಮ ವ್ಯವಹಾರಗಳನ್ನು ನಡೆಸಲಿದೆ ಎಂಬ ಗುಪ್ತಚರ ಮಾಹಿತಿ ಭಾರತಕ್ಕೆ ಈ ಮೊದಲೇ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಕಟ್ಟೆಚ್ಚರದಿಂದ ಕಾವಲು ನಡೆಸಿದ್ದರು ಎನ್ನಲಾಗಿದೆ.

‘ದೋಣಿಯಲ್ಲಿದ್ದ ನಾಲ್ವರು ಕರಾವಳಿ ಕಾವಲು ಪಡೆ ನೌಕೆಯ ಎಚ್ಚರಿಕೆಯ ಎಲ್ಲಾ ಸೂಚನೆಗಳನ್ನು ಧಿಕ್ಕರಿಸಿ ಮುಂದುವರಿಯುತ್ತಿದ್ದರು. ಒಂದು ಹಂತದಲ್ಲಿ ದೋಣಿಯಲ್ಲಿದ್ದ ವ್ಯಕ್ತಿಗಳು ನೆಲ ಮಾಳಿಗೆಗೆ ಹೋಗಿ ಅಡಗಿಕೊಂಡರು. ನಂತರ ದೋಣಿಗೆ ಬೆಂಕಿ ಹಚ್ಚಿದರು. ಇದರಿಂದ ದೋಣಿ ಬೆಂಕಿಯಲ್ಲಿ ಹೊತ್ತಿ ಉರಿಯಿತು. ಜೊತೆಗೆ ಸ್ಫೋಟಗೊಂಡಿತು’ ಎಂದು ಕರಾವಳಿ ಕಾವಲು ಪಡೆಯ ಪತ್ರಿಕಾ ಹೇಳಿಕೆ ತಿಳಿಸಿದೆ.

ಮಹತ್ವದ ಗುಪ್ತಚರ ಮಾಹಿತಿಯನ್ನು ಆಧರಿಸಿ ಕರಾವಳಿ ಕಾವಲು ಪಡೆಯ ನೌಕೆಗಳು ಮತ್ತು ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಕರಾವಳಿ ಕಾವಲು ಪಡೆಯ ಡೊರ್ನಿಯರ್ ವಿಮಾನವನ್ನು ಪತ್ತೆ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಪೋರ್‌ಬಂದ ಕರಾವಳಿಯಿಂದ 365 ಕಿ.ಮೀ. ದೂರದಲ್ಲಿ ಭಾರತ-ಪಾಕಿಸ್ತಾನ ನೌಕಾಯಾನ ಗಡಿಯಲ್ಲಿ ಶಂಕಿತ ಮೀನುಗಾರಿಕಾ ದೋಣಿಯೊಂದನ್ನು ಅದು ಪತ್ತೆ ಮಾಡಿತು.

ತದನಂತರ ಕಾವಲು ಕರ್ತವ್ಯದಲ್ಲಿದ್ದ ಕರಾವಳಿ ಕಾವಲು ಪಡೆಯ ನೌಕೆಯನ್ನು ಈ ಸ್ಥಳಕ್ಕೆ ರವಾನಿಸಲಾಯಿತು. ಸುಮಾರು ಒಂದು ಗಂಟೆ ಕಾಲ ಬೆನ್ನಟ್ಟಿ ಮೀನುಗಾರಿಕಾ ದೋಣಿಯನ್ನು ಅಡ್ಡಗಟ್ಟಲಾಯಿತು ಎಂದು ಹೇಳಿಕೆ ತಿಳಿಸಿದೆ.

ಮೀನುಗಾರಿಕಾ ದೋಣಿಯಲ್ಲಿದ್ದ ಸಿಬ್ಬಂದಿಗಳ ವಿಚಾರಣೆ ಮತ್ತು ದೋಣಿಯಲ್ಲಿದ್ದ ಸರಕಿನ ತಪಾಸಣೆಗಾಗಿ ದೋಣಿಯನ್ನು ನಿಲ್ಲಿಸುವಂತೆ ಕರಾವಳಿ ಕಾವಲು ಪಡೆ ಕೋರಿಕೆ ಸಲ್ಲಿಸಿತ್ತು. ಮುನ್ನೆಚ್ಚರಿಕೆಯಾಗಿ ಗಾಳಿಯಲ್ಲಿ ಗುಂಡು ಹಾರಿಸಿತ್ತು. ಆದರೆ ದೋಣಿಯಲ್ಲಿದ್ದ ವ್ಯಕ್ತಿಗಳು ದೋಣಿಯ ವೇಗವನ್ನು ಹೆಚ್ಚಿಸಿ ಭಾರತದ ನೌಕಾಯಾನ ಗಡಿಯೊಳಗಿಂದ ಪರಾರಿಯಾಗಲು ಪ್ರಯತ್ನಿಸಿದರು. ಹೀಗೆ ಸುಮಾರು ಒಂದು ಗಂಟೆ ಕಾಲ ಕರಾವಳಿ ಕಾವಲು ಪಡೆಯ ನೌಕೆ ದೋಣಿಯನ್ನು ಬೆನ್ನಟ್ಟಿತು. ಕಾವಲು ಪಡೆಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಮೀನುಗಾರಿಕೆ ದೋಣಿಯನ್ನು ಅಡ್ಡಗಟ್ಟುವಲ್ಲಿ ಸಫಲರಾದರು. ದೋಣಿಯಲ್ಲಿ ನಾಲ್ವರು ಸಿಬ್ಬಂದಿ ಇರುವುದು ಕಂಡುಬಂತು. ದೋಣಿಯನ್ನು ನಿಲ್ಲಿಸಿ ತನಿಖೆಯಲ್ಲಿ ಸಹಕರಿಸುವಂತೆ ಅವರಿಗೆ ಎಚ್ಚರಿಕೆ ನೀಡಲಾಯಿತು. ಆದರೆ ಕಾವಲು ಪಡೆಯ ಎಚ್ಚರಿಕೆಯನ್ನು ಅವರು ಧಿಕ್ಕರಿಸಿದರು. ಜೊತೆಗೆ ದೋಣಿಯ ನೆಲಮಾಳಿಗೆಗೆ ತೆರಳಿ ಅಡಗಿಕೊಂಡರು. ದೋಣಿಗೆ ಬೆಂಕಿ ಹಚ್ಚಿದರು. ಇದರ ಪರಿಣಾಮವಾಗಿ ದೋಣಿ ಸ್ಫೋಟಗೊಂಡಿತು. ಬೆಂಕಿಯಲ್ಲಿ ಉರಿದು ಮುಳುಗಿ ಹೋಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಕತ್ತಲು, ತೀವ್ರ ಬಿರುಗಾಳಿ ಮತ್ತು ಪ್ರತಿಕೂಲದ ಹವಾಮಾನದಿಂದಾಗಿ ದೋಣಿ ಮತ್ತು ಅದರಲ್ಲಿದ್ದ ವ್ಯಕ್ತಿಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸ್ಫೋಟದಿಂದ ಸುಟ್ಟು ಹೋದ ದೋಣಿ ಸ್ಥಳದಲ್ಲೇ ಮುಳುಗಿ ಹೋಯಿತು. ಘಟನೆಯಲ್ಲಿ ಬದುಕಿ ಉಳಿದಿರಬಹುದಾದ ವ್ಯಕ್ತಿಗಳ ಪತ್ತೆಗೆ ಕಾವಲು ಪಡೆಯ ನೌಕೆಗಳು ಮತ್ತು ವಿಮಾನಗಳು ನಂತರ ಕಾರ್ಯಾಚರಣೆಯನ್ನು ಮುಂದುವರಿಸಿದವು. ಸಮುದ್ರ ಮಾರ್ಗದ ಮೂಲಕ ದೇಶದ ಗಡಿಯೊಳಗೆ ಉಗ್ರಗಾಮಿಗಳು ನುಸುಳಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಗುಪ್ತಚರ ಮಾಹಿತಿಗಳನ್ನು ಆಧರಿಸಿ ಕಳೆದ ಕೆಲವು ತಿಂಗಳುಗಳಿಂದ ಕರಾವಳಿ ಕಾವಲು ಪಡೆ ಮತ್ತು ಇತರ ಭದ್ರತಾ ಸಂಸ್ಥೆಗಳು ದೇಶದ ನೌಕಾಯಾನ ಪ್ರದೇಶಗಳು ಮತ್ತು ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರದಿಂದ ಕಾವಲು ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Write A Comment