ಕರ್ನಾಟಕ

ಬೆಂಗಳೂರು; ಶಾಲೆಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟ ಮೂವರು ವಿದ್ಯಾರ್ಥಿಗಳಿಗೆ ಗಾಯ

Pinterest LinkedIn Tumblr

gile

ಬೆಂಗಳೂರು, ಜ.2: ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಮಡಿವಾಳದ ರೂಪೇನ ಅಗ್ರಹಾರ ಬಳಿಯ ಶ್ರೀ ಸದ್ಗುರು ಸಾಯಿಬಾಬಾ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಶುಕ್ರವಾರ ಬೆಳಗ್ಗೆ ರಸ್ತೆಯಲ್ಲಿ ಸಿಕ್ಕಿದ್ದ ಜಿಲೆಟಿನ್ ಕಡ್ಡಿಗಳನ್ನು ಶಾಲೆಗೆ ತಂದಿದ್ದ ವಿದ್ಯಾರ್ಥಿಗಳು, ಅದಕ್ಕೆ ವೈಯರ್ ಸಿಕ್ಕಿಸಿ ಮಾಡಿ, ಸ್ವಿಚ್ ಬೋರ್ಡ್ ಆನ್ ಮಾಡಿದಾಗ ಅದು ಸ್ಫೋಟಗೊಂಡಿದೆ. ಮಧ್ಯಾಹ್ನ 12 ಗಂಟೆಯ ವೇಳೆಯಲ್ಲಿ ನಡೆದ ಘಟನೆಯಲ್ಲಿ ಗಾಯಗೊಂಡ ಮೂವರು ವಿದ್ಯಾರ್ಥಿಗಳನ್ನು ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವಾಗ ಶಾಲೆಯ ಸಮೀಪ ಕಸದ ರಾಶಿಯಲ್ಲಿ ಸಿಕ್ಕ ಜಿಲೆಟಿನ್ ಕಡ್ಡಿಗಳನ್ನು ಶಾಲೆಗೆ ತಂದಿದ್ದರು. ಮಧ್ಯಾಹ್ನ ಅದಕ್ಕೆ ವಿದ್ಯುತ್ ಸಂಪರ್ಕಿಸಿದಾಗ ಅದು ಸ್ಫೋಟಗೊಂಡಿದೆ. ಶಾಲೆಯಲ್ಲಿ ಉಂಟಾದ ಭಾರೀ ಶಬ್ದ ಕೇಳಿ ಶಿಕ್ಷಕರು ಕೊಠಡಿಗೆ ಆಗಮಿಸಿದಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ, 12 ವರ್ಷ ವಯಸ್ಸಿನ ಸೂರ್ಯ, ಗಣೇಶ್ ಮತ್ತು ಸಚಿನ್ ಎಂಬ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಇಎಸ್‌ಐ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಜಿಲೆಟಿನ್ ಕಡ್ಡಿ ಸ್ಫೋಟಿಸಿದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿದ್ದು, ಅಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ. ಪರಿಶೀಲನೆಯ ವೇಳೆ ಶಾಲೆಯ ಬಳಿ ಡಿಟೋನೇಟರ್ ಸಿಕ್ಕಿದೆ. ಡಿಟೋನೇಟರ್ ಸಿಕ್ಕಿದ ಜಾಗದಲ್ಲಿದ್ದ ಮೂವರನ್ನು ಮಡಿವಾಳ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಶಾಲಾ ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment