ಕರ್ನಾಟಕ

ಕೊಂಗಳಾ ಗ್ರಾಮದಲ್ಲಿ ಕಾರ್ಯಾಚರಣೆ; ನರಭಕ್ಷಕ ಹುಲಿ ಗುಂಡಿಗೆ ಬಲಿ

Pinterest LinkedIn Tumblr

tiger

ಖಾನಾಪುರ (ಬೆಳಗಾವಿ): ತಾಲ್ಲೂಕಿನ ಕೊಂಗಳಾ ಗ್ರಾಮದ ಅರಣ್ಯದಲ್ಲಿ ನರಭಕ್ಷಕ ಹುಲಿಯನ್ನು ‘ಆಪರೇಶನ್‌ ಟೈಗರ್‌’ ಕಾರ್ಯಾ­ಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಭಾನುವಾರ ಸಂಜೆ ಗುಂಡಿಕ್ಕಿ ಕೊಂದಿದ್ದಾರೆ. ಮುಡುಗೈ ಗ್ರಾಮದಲ್ಲಿ ಡಿಸೆಂಬರ್‌ 17ರಂದು ಮಹಿಳೆಯನ್ನು ಬಲಿ ಪಡೆದ ಬಳಿಕ ಜಾಂಬೋಟಿ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಅಹೋರಾತ್ರಿ ನಡೆ­ಯುತ್ತಿದ್ದ ಕಾರ್ಯಾಚರಣೆಯು ನಾಲ್ಕು ದಿನಗಳ ಬಳಿಕ ಯಶಸ್ವಿಯಾಗಿ ಕೊನೆಗೊಂಡಿತು.

ಕೊಂಗಳಾ ಗ್ರಾಮದ ಮಹದಾಯಿ ನದಿ ತೀರದ ಅರಣ್ಯದಲ್ಲಿ ಸಂಜೆ 6.30ರ ಸುಮಾರಿಗೆ ಹುಲಿ ಕಾಣಿಸಿಕೊಂಡಿದೆ. ಹುಲಿ ಶೋಧ ಕಾರ್ಯಾಚರಣೆ ತಂಡದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಿ.ಎಂ. ಪಾಟೀಲ ಎಂಬುವವರು ಬಂದೂಕಿನಿಂದ ಗುಂಡು ಹೊಡೆದು ಹುಲಿಯನ್ನು ಕೊಂದಿದ್ದಾರೆ. ಹುಲಿಯ ಕುತ್ತಿಗೆಯಲ್ಲಿ ರೇಡಿಯೊ ಕಾಲರ್‌ ಪತ್ತೆಯಾಗಿದೆ. ಹೀಗಾಗಿ ಇದು ಚಿಕ್ಕಮಗಳೂರಿನಿಂದ ಇಲ್ಲಿಗೆ ತಂದು ಬಿಟ್ಟಿರುವ ನರಭಕ್ಷಕ ಹುಲಿಯೇ ಆಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಹುಲಿ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕೊನೆಗೂ ವ್ಯಾಘ್ರನನ್ನು ಗುಂಡಿಕ್ಕಿ ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸೆಂಬರ್‌ 17ರಂದು ಸಂಜೆ ಮುಡುಗೈ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಂಜನಾ ಹಣಬರ ಅವರನ್ನು ಈ ಹುಲಿ ಬಲಿ ತೆಗೆದುಕೊಂಡಿತ್ತು. ಇದುವರೆಗೆ ಎಂಟು ಜಾನುವಾರು­ಗಳನ್ನು ಇದು ಬೇಟೆಯಾಡಿತ್ತು.

ಹುಲಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಮಾಹಿತಿ ಸಿಕ್ಕ ತಕ್ಷಣವೇ ಅರಣ್ಯ ಇಲಾಖೆಯ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನರಾಜ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಸೇರಿದಂತೆ ಹುಲಿ ತಜ್ಞ ವೈದ್ಯರು  ಗ್ರಾಮಕ್ಕೆ ಹೋಗಿದ್ದಾರೆ. ಕೊಂಗಳಾ ಗ್ರಾಮವು ಅರಣ್ಯದೊಳಗೆ ಇರುವುದ­ರಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮೊಬೈಲ್‌ ಸಂಪರ್ಕಕ್ಕೆ ತಡ ರಾತ್ರಿಯವರೆಗೂ ಸಿಗಲಿಲ್ಲ.

ಖಾನಾಪುರದ ಶಿರೋಲಿಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಕ್ಕೆ ಹುಲಿಯ ಕಳೆಬರವನ್ನು ರಾತ್ರಿ ತರಲಾಗುತ್ತಿದೆ. ಮೂವರು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ದಿನವಿಡೀ ಕಾರ್ಯಾಚರಣೆ: ಇದಕ್ಕೂ ಮೊದಲು ಹುಲಿಯ ಹೆಜ್ಜೆ ಗುರುತು ಪತ್ತೆಯಾದ ತಾಲ್ಲೂಕಿನ ಕಬನಾಳಿ ಗ್ರಾಮದ ವ್ಯಾಪ್ತಿಯಲ್ಲಿ ಅರಣ್ಯ ಇಲಾ­ಖೆಯ ವಿಶೇಷ ತಂಡವು ಭಾನುವಾರ ದಿನವಿಡೀ ‘ಆಪರೇಶನ್‌ ಟೈಗರ್‌’ ಕಾರ್ಯಾಚರಣೆಯನ್ನು ಬಿರುಸಿನಿಂದ ನಡೆಸಿದ್ದರು.

ನಾಲ್ಕನೇ ದಿನವೂ ಜಾಂಬೋಟಿ ಸುತ್ತಲಿನ ಗ್ರಾಮಗಳ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಜಂಟಿ ತಂಡವು ಕೂಂಬಿಂಗ್‌ ನಡೆಸಿತ್ತು. ವಿಶೇಷ ಹುಲಿ ಸಂರಕ್ಷಣಾ ಪಡೆ (ಎಸ್‌.ಟಿ.ಪಿ.ಎಫ್‌) ಹಾಗೂ ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ, ಸೋಲಿಗರ ತಂಡ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿ ಹುಲಿಗಾಗಿ ಕಾಡಿನಲ್ಲಿ ಸುತ್ತಾಡಿದ್ದರು.

ಕೊಂಗಳಾ ಗ್ರಾಮದಲ್ಲಿ ಎರಡು ಕುರಿಯನ್ನು ಎಳೆದುಕೊಂಡು ಹೋಗಿರುವ ಕಾಡುಪ್ರಾಣಿ ಹುಲಿ ಆಗಿರಬೇಕು ಎಂದು ನಂಬಿ ಶನಿವಾರ ರಾತ್ರಿಯೇ ಒಂದು ತಂಡವು ಅಲ್ಲಿಗೆ ತೆರಳಿ ಕಾರ್ಯಾಚರಣೆ­ಯನ್ನು ಆರಂಭಿಸಿತ್ತು. ಭಾನುವಾರ ಬೆಳಿಗ್ಗೆಯಿಂದ ಕೊಂಗಳಾ ಗ್ರಾಮದ ಕಾಡಿನಿಂದ ಶೋಧ ಕಾರ್ಯವನ್ನು ತಂಡವು ನಡೆಸಿತ್ತು.

ಕಬನಾಳಿ ಗ್ರಾಮದ ಬಳಿ ಬೆಳಿಗ್ಗೆ 9 ಗಂಟೆಗೆ ಹುಲಿಯ ಕೂಗು ಕೇಳಿ ಬಂತು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ನೇತೃತ್ವದ ತಂಡವು ತಕ್ಷಣವೇ ಬಂದು ಗ್ರಾಮದ ಸುತ್ತಲು ಕೂಂಬಿಂಗ್‌ ಶುರು ಮಾಡಿತ್ತು. ಈ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತು, ಮಲ ಸಿಕ್ಕಿದ್ದರಿಂದ ಈ ಅರಣ್ಯ ಪ್ರದೇಶದಲ್ಲಿ ಚುರುಕಿನಿಂದ ಕಾರ್ಯಾಚರಣೆ ನಡೆಸಿದ್ದರು.

ಜೊತೆಗೆ ಮುಗವಡೆ, ಮುಡುಗೈ, ದಾರೋಳಿ, ನೇರಸಾ, ನೀಲಾವಡೆ, ಪಾಸ್ತೋಳಿ, ಗವ್ವಾಳಿ, ಚಾಪೋಲಿ ಅರಣ್ಯ ಪ್ರದೇಶಗಳಲ್ಲೂ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯವನ್ನು ನಡೆಸಿದ್ದರು. ಜೊತೆಗೆ ಮುಡುಗೈ, ದಾರೋಳಿಯಲ್ಲಿ ಹುಲಿ ಬಂದಿದ್ದ ಸ್ಥಳದಲ್ಲಿ ಕುರಿ ಹಾಗೂ ಆಕಳನ್ನು ಮರಕ್ಕೆ ಕಟ್ಟಿಟ್ಟು ಪ್ರತ್ಯೇಕ ತಂಡ ಅಟ್ಟಣಿಗೆಯ ಮೇಲೆ ಕಾದು ಕುಳಿತಿತ್ತು.

ಆದರೆ, ಹುಲಿ ಮಾತ್ರ ಆ ಕಡೆ ಸುಳಿದಿರಲಿಲ್ಲ. ಅಂತಿಮವಾಗಿ ಹುಲಿಯು ಕೊಂಗಳಾ ಗ್ರಾಮದ ಬಳಿ ಬಂದು ಕೊನೆ ಉಸಿರೆಳೆಯಿತು. ಹುಲಿಯನ್ನು ಹಿಡಿಯಲು ಇಲಾಖೆ ವಿಫಲವಾಗಿ­ರು­ವುದನ್ನು ಖಂಡಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.

Write A Comment