ಕರ್ನಾಟಕ

3ನೇ ದಿನವೂ ಪತ್ತೆಯಾಗದ ನರಭಕ್ಷಕ ಹುಲಿ: ವಿಶೇಷ ತಂಡಗಳಿಂದ ಕಾರ್ಯಾಚರಣೆ ಚುರುಕು

Pinterest LinkedIn Tumblr

tiger

ಖಾನಾಪುರ (ಬೆಳಗಾವಿ): ಮಹಿಳೆಯನ್ನು ಬಲಿ ತೆಗೆದುಕೊಂಡ ನರಭಕ್ಷಕ ಹುಲಿಯನ್ನು ಸೆರೆ ಹಿಡಿ­ಯಲು ತಾಲ್ಲೂಕಿನ ಜಾಂಬೋಟಿ ವಲಯದ ಸುತ್ತಲಿನ ಗ್ರಾಮಗಳ ಕಾಡಿನಲ್ಲಿ ಕಾರ್ಯಾ­ಚರಣೆಯನ್ನು ಅರಣ್ಯ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಒಳಗೊಂಡ ವಿಶೇಷ ತಂಡಗಳು ಶನಿವಾರ ನಡೆಸಿದವಾದರೂ ಹುಲಿ ಸಿಕ್ಕಿಲ್ಲ.

ಮೂರು ದಿನಗಳಿಂದ ಅಹೋರಾತ್ರಿ ­ ನಡೆಸಿ­ದರೂ ಹುಲಿ ಪತ್ತೆಯಾಗದೇ ಇರುವುದು ಕಾಡಿ­ನೊಳಗಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಬೇಟೆಯಾಡಿದ ಸ್ಥಳಕ್ಕೆ ಹುಲಿ ವಾಪಸ್‌ ಬರಬಹುದು ಎಂದು ಕುರಿ– ಆಕಳನ್ನು ಮರಕ್ಕೆ ಕಟ್ಟಿಟ್ಟು ಬಂದೂಕು ಹಿಡಿದು ಕಾದು ಕುಳಿತಿದ್ದ ಅರಣ್ಯ ಇಲಾಖೆಯ ತಂಡದ ಸಿಬ್ಬಂದಿ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಭಾನುವಾರದಿಂದ ಅರಣ್ಯದೊಳಗೆ ಕೂಂಬಿಂಗ್‌ ನಡೆಸುವ ಮೂಲಕ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬಂಡಿಪುರ ರಾಷ್ಟ್ರೀಯ ಉದ್ಯಾನದಿಂದ ವಿಶೇಷ ಹುಲಿ ಸಂರಕ್ಷಣಾ ಪಡೆ (ಎಸ್‌.ಟಿ.­ಪಿ.ಎಫ್‌) ಹಾಗೂ ನಕ್ಸಲ್‌ ನಿಗ್ರಹ ಪಡೆಯ ತಲಾ 30 ಸಿಬ್ಬಂದಿ ಹಾಗೂ ಗರುಡ ತಂಡದ ಶಾರ್ಪ್‌ ಶೂಟರ್ಸ್‌ ಜಾಂಬೋಟಿಗೆ ಬಂದಿ­ದ್ದಾರೆ. ಚಾಮರಾಜನಗರದಿಂದ ಬಂದಿ­ರುವ ನಾಲ್ವರು ಪರಿಣತ ಸೋಲಿಗರು ಹುಲಿಯ ಜಾಡು ಹಿಡಿಯಲು ಸನ್ನದ್ಧರಾಗಿದ್ದಾರೆ. ಕಾರ್ಯಾ­ಚರಣೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದಾರೆ.

ಕಬನಾಳೆ, ಮುಗವಡೆ, ಮುಡುಗೈ, ದಾರೋಳಿ, ನೇರಸಾ, ನೀಲಾವಡೆ, ಚಾಪೋಲಿ ಸೇರಿದಂತೆ 11 ಗ್ರಾಮಗಳ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು. ಪಳಗಿದ ಆನೆಯನ್ನೂ ಬಳಸಿ ಹುಡುಕಾಟ ನಡೆಸ­ಲಾಯಿತು. ಸಚಿವ ಜಾರಕಿಹೊಳಿ ಭೇಟಿ:  ದಾಳಿಗೆ ಬಲಿ­ಯಾದ ಮುಡುಗೈ ಗ್ರಾಮದ ಅಂಜನಾ ಅಣ್ಣಪ್ಪ ಹಣಬರ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಜಾಂಬೋಟಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

‘ಚಿಕ್ಕಮಗಳೂರಿನ ಅರಣ್ಯ ಅಧಿಕಾರಿಗಳು ಭೀಮಗಡ ವನ್ಯಜೀವಿ ಅಭಯಾರಣ್ಯಕ್ಕೆ ಹುಲಿಯನ್ನು ತಂದು ಬಿಟ್ಟಿದ್ದಾರೆ. ಇಲ್ಲಿ ಹುಲಿ ಬಿಡುತ್ತಿರುವ ಕುರಿತು ಬೆಳಗಾವಿಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಹುಲಿಯನ್ನು ಸೆರೆ ಹಿಡಿಯಲು ಆದ್ಯತೆ ನೀಡಲಾಗುವುದು. ಆಗದಿದ್ದರೆ ಗುಂಡಿಕ್ಕಿ ಕೊಲ್ಲಲಾಗುವುದು’ ಎಂದು ಸಚಿವರು ಪತ್ರಕರ್ತರಿಗೆ ತಿಳಿಸಿದರು. ‘ಭಾನುವಾರ ಬಿಜೆಪಿಯವರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಕೈಬಿಡಬೇಕು. ಹುಲಿ ಹಿಡಿಯಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ
ಜಾಂಬೋಟಿ ಸುತ್ತಮುತ್ತಲಿನ ಕಾಡಂಚಿನ ಹಲವು ಗ್ರಾಮಗಳ ಜನರು ಹುಲಿ ದಾಳಿ ಭೀತಿಯಿಂದ ಹೊರಗೆ ಹೋಗುತ್ತಿಲ್ಲ. ಜಾನುವಾರುಗಳನ್ನು ಮೇಯಲು ಬಿಡುತ್ತಿಲ್ಲ. ಕಾಡು ಹಾದಿಯಲ್ಲಿ ಸುಮಾರು ಮೂರು ಕಿ.ಮೀ. ದೂರ ನಡೆದುಕೊಂಡು ಹೋಗಬೇಕಾಗಿ­ರುವು­ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಕಾಡಂಚಿನ ಜಮೀನಿಗೆ ಕೆಲಸಕ್ಕೆ ಹೋಗುತ್ತಿಲ್ಲ. ಹುಲಿ ಸೆರೆ ಹಿಡಿಯದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಲಿಗೆ 2 ಕುರಿ ಬಲಿ ?
ಖಾನಾಪುರ: ತಾಲ್ಲೂಕಿನ ಜಾಂಬೋಟಿಯಿಂದ ಸುಮಾರು 12 ಕಿ.ಮೀ. ದೂರದ ಕೊಂಗಳಾ ಗ್ರಾಮದಿಂದ ಕಾಡುಪ್ರಾಣಿಯೊಂದು ಎರಡು ಕುರಿಗಳನ್ನು ಶನಿವಾರ ರಾತ್ರಿ ಎಳೆದೊಯ್ದಿದೆ. ಆ ಪ್ರಾಣಿ ನರಹಂತಕ ಹುಲಿಯೇ ಇರಬಹುದು ಎಂದು ಶಂಕಿಸಲಾಗಿದೆ.
ಯಾವ ಪ್ರಾಣಿ ದಾಳಿ ಮಾಡಿದೆ ಎಂಬ ಬಗ್ಗೆ ಇನ್ನೂ ನಿಖರವಾಗಿ ಮಾಹಿತಿ ಸಿಕ್ಕಿಲ್ಲ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.
* * *

‘ಸುಳಿವು ಆಧರಿಸಿ ಕೂಂಬಿಂಗ್‌’
ಖಾನಾಪುರ (ಬೆಳಗಾವಿ):  ‘ನರಭಕ್ಷಕ ಹುಲಿಯು ಸಂಚರಿಸಿದ ಮಾರ್ಗವನ್ನು ಆಧರಿಸಿ ಅದರ ಕಾರ್ಯವ್ಯಾಪ್ತಿಯ ನಕ್ಷೆ ಸಿದ್ಧಪಡಿಸ­ಲಾಗಿದೆ. ಎಸ್‌.ಟಿ.ಪಿ.ಎಫ್‌ ಸಿಬ್ಬಂದಿ ಹಾಗೂ ಸೋಲಿಗರ ನೇತೃತ್ವದಲ್ಲಿ ಹುಲಿಯ ಸುಳಿವು ಆಧರಿಸಿ ಭಾನುವಾರದಿಂದ ಕೂಂಬಿಂಗ್‌ ಮೂಲಕ ಕಾರ್ಯಾಚರಣೆಯನ್ನು ತೀವ್ರಗೊ­ಳಿಸ­ಲಾಗುವುದು’ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನರಾಜ್  ತಿಳಿಸಿದರು.

‘ಜನಸಂಚಾರ ಹೆಚ್ಚಾಗಿದ್ದರಿಂದ ಬೇಟೆ­ಯಾಡಿದ ಸ್ಥಳಕ್ಕೆ ಹುಲಿ ವಾಪಸ್‌ ಬಂದಿಲ್ಲ. ಹುಲಿಯ ಬಗ್ಗೆ ಶನಿವಾರ ಯಾವುದೇ ಸುಳಿವು ಸಿಗಲಿಲ್ಲ. ಒಂದು ಲಕ್ಷ ಹೆಕ್ಟೇರ್‌ ಪ್ರದೇಶ ಹೊಂದಿರುವ ಈ ದಟ್ಟ ಅರಣ್ಯದಲ್ಲಿ ಎಲ್ಲ ಕಡೆ ಹುಡುಕಲು ಸಾಧ್ಯವಿಲ್ಲ’ ಎಂದರು.

‘ಈ ಹುಲಿಯ ಪಟ್ಟೆಯು ಸ್ಪಷ್ಟವಾಗಿ ಕಾಣು­ವಂತಹ ಭಾವಚಿತ್ರವನ್ನು ಪ್ರತಿಯೊಂದು ತಂಡಕ್ಕೂ ನೀಡಲಾಗಿದೆ. ತಂಡದ ಮುಂಚೂಣಿಯಲ್ಲಿ ಇರುವ ಅರಿವಳಿಕೆ ತಜ್ಞರು ಅಥವಾ ಶೂಟರ್‌ಗಳ ಬಳಿ ಈ ಚಿತ್ರ ಇರಲಿದೆ. ಇದಕ್ಕೆ ಹೋಲಿಕೆಯಾಗುವ ಹುಲಿಯನ್ನು ಮಾತ್ರ ಸೆರೆ ಹಿಡಿಯಲು ಮುಂದಾಗುತ್ತಾರೆ. ಬೇರೆ ಯಾವುದೇ ಪ್ರಾಣಿ ಬಲಿಯಾಗಬಾರದು ಎಂಬ ಉದ್ದೇಶದಿಂದ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಭೀಮಗಡ ಅಭಯಾರಣ್ಯ ಪ್ರದೇಶದಲ್ಲಿ 32 ಕ್ಯಾಮೆರಾ ಟ್ರ್ಯಾಪ್‌ಗಳಿವೆ. ಈ ಹಿಂದೆ ಈ ಹುಲಿಯ ಚಿತ್ರ ಅವುಗಳಲ್ಲಿ ಸಿಕ್ಕಿತ್ತು. ಹೀಗಾಗಿ ಖಾನಾಪುರ ಅರಣ್ಯದಲ್ಲಿ 20 ಕಡೆ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿ ಹುಲಿಯ ಚಲನವ­ಲನ­ವನ್ನು ಪತ್ತೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಸೋಲಿಗರಿಂದಲೂ ಶೋಧ
ಹುಲಿ ಪತ್ತೆಗೆ ಚಾಮರಾಜನಗರದಿಂದ ನಾಲ್ವರು ಪರಿಣತ ಸೋಲಿಗರು ಆರ್‌.ಎಫ್‌.ಒ ಚಂದ್ರಕುಮಾರ್‌ ನೇತೃತ್ವದಲ್ಲಿ ಜಾಂಬೋಟಿಗೆ ಶನಿವಾರ ಮಧ್ಯಾಹ್ನ ಬಂದಿದ್ದಾರೆ. ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿರುವ ಸೋಲಿಗರಾದ ಹಾಲೇಗೌಡ, ಆಲುಮಲೈ, ಕೇತ ಗೌಡ ಹಾಗೂ  ಚನ್ನಂಜೇಗೌಡ ಹುಲಿ  ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಹುಲಿ ಹತ್ಯೆಗಾಗಿ ರಚಿಸಿರುವ ಪ್ರತ್ಯೇಕ ತಂಡ­ಗಳಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ.

‘ಹುಲಿಯ ಹೆಜ್ಜೆ ಗುರುತಿನಲ್ಲಿರುವ ತೇವ ಅಥವಾ ಅದರ ಮಲದ ವಾಸನೆಯನ್ನು ಗ್ರಹಿಸಿ, ಅದು ಎಷ್ಟು ಗಂಟೆಗಳ ಹಿಂದೆ ಇಲ್ಲಿಗೆ ಬಂದಿತ್ತು; ಎಷ್ಟು ದೂರದಲ್ಲಿರಬಹುದು ಎಂದು ಅಂದಾಜು ಮಾಡಿ, ಹೆಜ್ಜೆ ಗುರುತು ಆಧರಿಸಿ ಆ ದಿಕ್ಕಿನಲ್ಲಿ ಶೋಧ ಕಾರ್ಯ ಮಾಡುತ್ತೇವೆ’ ಎಂದು ಆಲುಮಲೈ ತಿಳಿಸಿದರು.

ರಾಣಾ ಜಾರ್ಜ್ ಕಾರಣ: ಎಚ್‌ಡಿಕೆ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಅರಣ್ಯದಲ್ಲಿ ಮಹಿಳೆಯೊಬ್ಬರನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಕಾಡಿಗೆ ಬಿಡಬಾರದು ಎಂದು ವನ್ಯಜೀವಿ ತಜ್ಞರು ಹೇಳಿದ್ದರೂ, ಅದನ್ನು ಖಾನಾಪುರದ ಅರಣ್ಯಕ್ಕೆ ಬಿಡಲು ವನ್ಯಜೀವಿ ಮಂಡಳಿ ಸದಸ್ಯ ರಾಣಾ ಜಾರ್ಜ್ ಕಾರಣ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ. ನರಭಕ್ಷಕ ಹುಲಿಯನ್ನು ಮಲ್ಲಂದೂರಿ­ನಲ್ಲಿ ಹಿಡಿದ ನಂತರ, ಖಾನಾಪುರದ ಕಾಡಿನಲ್ಲಿ ಬಿಡಲು ಕಾರಣ ಆದವರ ತಲೆದಂಡ ಆಗಬೇಕು’ ಎಂದು ಅವರು ಶನಿವಾರ ಪಕ್ಷದ ಕಚೇರಿಯಲ್ಲಿ ಒತ್ತಾಯಿಸಿದರು. ಹುಲಿಗೆ ಅಳವಡಿಸಿರುವ ರೇಡಿಯೊ ಕಾಲರ್ ಏಕೆ ಕೆಲಸ ಮಾಡುತ್ತಿಲ್ಲ? ಹುಲಿ ಸೆರೆಯಲ್ಲಿದ್ದಾಗ ರೇಡಿಯೊ ಕಾಲರ್ ಸರಿಯಾಗಿತ್ತೇ? ಈ ಎಲ್ಲ ವಿಚಾರಗಳ ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದರು.

Write A Comment