ಪ್ರಮುಖ ವರದಿಗಳು

ಭಾರತದ ಬೌಲರ್‌ಗಳ ಬೆವರಿಳಿಸಿದ ಸ್ಮಿತ್: ಆಸ್ಟ್ರೇಲಿಯ ಮತ್ತೆ ಮೇಲುಗೈ; ಸ್ಟೀವನ್ ಸ್ಮಿತ್‌ಗೆ ತಪ್ಪಿದ ದ್ವಿಶತಕ; ಮುಂದುವರಿದ ಭಾರತದ ಹೋರಾಟ; ವಿಜಯ್ ಅರ್ಧಶತಕ

Pinterest LinkedIn Tumblr

SMITH-1ಮೆಲ್ಬೋರ್ನ್, ಡಿ.27: ನಾಯಕ ಸ್ಟೀವನ್ ಸ್ಮಿತ್ ಸರಣಿಯಲ್ಲಿ ದಾಖಲಿಸಿದ ಸತತ ಮೂರನೆ ಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ಇಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತ ವಿರುದ್ಧದ ಮೂರನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 530 ರನ್ ದಾಖಲಿಸಿದ್ದು, ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಟೆಸ್ಟ್‌ನ ಎರಡನೆ ದಿನವಾಗಿರುವ ಶನಿವಾರ ಆಟ ನಿಂತಾಗ ಮೊದಲ ಇನಿಂಗ್ಸ್‌ನಲ್ಲಿ ಭಾರತ 37 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 108 ರನ್ ದಾಖಲಿಸಿದೆ. 28 ರನ್ ಗಳಿಸಿರುವ ಆರಂಭಿಕ ದಾಂಡಿಗ ಶಿಖರ್ ಧವನ್ ಔಟಾಗಿದ್ದಾರೆ. ಮುರಳಿ ವಿಜಯ್ ಅರ್ಧಶತಕ(55) ಮತ್ತು ಚೇತೇಶ್ವರ ಪೂಜಾರ (25) ರನ್ ಗಳಿಸಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದ್ದಾರೆ. ಭಾರತ ತಂಡ ಆಸ್ಟ್ರೇಲಿಯದ ಮೊತ್ತವನ್ನು ಸರಿಗಟ್ಟಲು ಇನ್ನೂ 422 ರನ್ ಗಳಿಸಬೇಕಾಗಿದೆ.

ಮೊದಲ ದಿನದ ಆಟ ಕೊನೆಗೊಂಡಾಗ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 259 ರನ್ ಗಳಿಸಿತ್ತು. ಶನಿವಾರ ಈ ಮೊತ್ತಕ್ಕೆ 271 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು.

ಔಟಾಗದೆ 72 ರನ್ ಗಳಿಸಿದ್ದ ನಾಯಕ ಸ್ಮಿತ್ ಮತ್ತು 23 ರನ್ ಗಳಿಸಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರಾಡ್ ಹಡನ್ ಬ್ಯಾಟಿಂಗ್ ಮುಂದುವರಿಸಿ ಆರನೆ ವಿಕೆಟ್‌ಗೆ 110 ರನ್ ಸೇರಿಸಿದರು. ಎರಡನೆ ದಿನದ ಆಟದಲ್ಲಿ ಭಾರತದ ಬೌಲರ್‌ಗಳು ಆಸ್ಟ್ರೇಲಿಯದ ದಾಂಡಿಗರನ್ನು ಆಲೌಟ್ ಮಾಡಿದ್ದರೂ, ಬೌಲರ್‌ಗಳು ಆಸ್ಟ್ರೇಲಿಯದ ದಾಂಡಿಗರಿಂದ ಚೆನ್ನಾಗಿ ಪೆಟ್ಟು ತಿಂದರು. ಆಟದ ಮೊದಲ ಒಂದು ಗಂಟೆಯ ಅವಧಿಯಲ್ಲಿ ಭಾರತದ ಯಾವನೇ ಒಬ್ಬ ಆಟಗಾರನಿಗೂ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಸ್ಮಿನ್ನರ್ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಕ್ಕೆ ಹೆಚ್ಚು ರನ್ ಬಿಟ್ಟಕೊಡದೆ ಮಿಂಚಿದರು.

44 ಓವರ್‌ಗಳ ಬೌಲಿಂಗ್‌ನಲ್ಲಿ ಅಶ್ವಿನ್ 134ಕ್ಕೆ 3 ವಿಕೆಟ್ ಉರುಳಿಸಿದರು. ಟೀಮ್ ಇಂಡಿಯಾ ನಾಯಕ ಐವರು ಬೌಲರ್‌ಗಳನ್ನು ಕಣಕ್ಕಿಳಿಸಿದ್ದರು. ಮುಹಮ್ಮದ್ ಶಮಿ ಹೆಚ್ಚು ವಿಕೆಟ್ ಪಡೆದರೂ, ಅವರ ಓವರ್‌ಗಳಲ್ಲಿ ಆಸ್ಟ್ರೇಲಿಯದ ಖಾತೆಗೆ ಹೆಚ್ಚು ರನ್ ಹರಿದು ಬಂತು. ಇಶಾಂತ್ ಶರ್ಮ (0-104) ಮತ್ತು ಉಮೇಶ್ ಯಾದವ್ (3-134) ಪ್ರಹಾರ ಪರಿಣಾಮ ಬೀರಲಿಲ್ಲ. ಮುಹಮ್ಮದ್ ಶಮಿ(4-138) ಅವರು ಬ್ರಾಡ್ ಹಡಿನ್ ವಿಕೆಟ್ ಉರುಳಿಸಿದರು. ಹಡಿನ್ 132 ನಿಮಿಷಗಳ ಬ್ಯಾಟಿಂಗ್‌ನಲ್ಲಿ 84 ಎಸೆತಗಳನ್ನು ಎದುರಿಸಿ 7ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 55 ರನ್ ಗಳಿಸಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದರು.

ಸ್ಮಿತ್ ಶತಕ: ಕಳೆದ ಎರಡೂ ಟೆಸ್ಟ್‌ಗಳಲ್ಲೂ ಶತಕ ದಾಖಲಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದ ನಾಯಕ ಸ್ಟೀವನ್ ಸ್ಮಿತ್ ಮೂರನೆ ಟೆಸ್ಟ್‌ನಲ್ಲೂ ಶತಕದ ಕೊಡುಗೆ ನೀಡಿದರು. 25ನೆ ಟೆಸ್ಟ್ ಆಡುತ್ತಿರುವ ಸ್ಮಿತ್ 191 ಎಸೆತಗಳಲ್ಲಿ 9ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 7ನೆ ಶತಕ ಪೂರೈಸಿದರು.

ಅಪಾಯಕಾರಿ ಆಲ್‌ರೌಂಡರ್ ಮಿಚೆಲ್ ಜಾನ್ಸನ್ 28 ರನ್ ಗಳಿಸಿದ್ದಾಗ ನಾಯಕ ಧೋನಿ ಅವರನ್ನು ರವಿಚಂದ್ರನ್ ಅಶ್ವಿನ್ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ಜಾನ್ಸನ್ ಮತ್ತು ಸ್ಮಿತ್ ಜೊತೆಯಾಟದಲ್ಲಿ ಏಳನೆ ವಿಕೆಟ್‌ಗೆ 50 ರನ್ ಸೇರ್ಪಡೆಗೊಂಡಿತು.

ಎಂಟನೆ ವಿಕೆಟ್‌ಗೆ ನಾಯಕ ಸ್ಮಿತ್‌ಗೆ ಹ್ಯಾರಿಸ್ ಜೊತೆಯಾದರು. ಸ್ಮಿತ್ ಮತ್ತು ಹ್ಯಾರಿಸ್ ಸೊಗಸಾದ ಇನಿಂಗ್ಸ್ ಕಟ್ಟಿದರು. ಬೋಜನಾ ವಿರಾಮದ ಹೊತ್ತಿಗೆ ಆಸ್ಟ್ರೇಲಿಯ 115 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 389 ರನ್ ಗಳಿಸಿತ್ತು. ಬಳಿಕ ಆಟ ಆರಂಭಗೊಂಡಾಗ ಸ್ಮಿತ್ ಮತ್ತು ಹ್ಯಾರಿಸ್ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 106 ರನ್‌ಗಳು ತಂಡದ ಖಾತೆಗೆ ಸೇರ್ಪಡೆಗೊಂಡಿತು.

ಹ್ಯಾರಿಸ್ ಮೂರನೆ ಅರ್ಧಶತಕ ದಾಖಲಿಸಿದರು. 135.4ನೆ ಓವರ್‌ನಲ್ಲಿ ಅಶ್ವಿನಿ ಅವರು ಹ್ಯಾರಿಸ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಹ್ಯಾರಿಸ್ ಟೆಸ್ ್ಟನಲ್ಲಿ ಚೊಚ್ಚಲ ಶತಕ ದಾಖಲಿಸುವ ಅವಕಾಶ ಕಳೆದುಕೊಂಡರು. ಮೂರು ಗಂಟೆ ಕ್ರೀಸ್‌ನಲ್ಲಿದ್ದ ಹ್ಯಾರಿಸ್ 88 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ನೆರವಿನಲ್ಲಿ 74 ರನ್ ಗಳಿಸಿದರು. ಇದು ಅವರು ಟೆಸ್ಟ್‌ನಲ್ಲಿ ದಾಖಲಿಸಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

ದ್ವಿಶತಕ ವಂಚಿತ ಸ್ಮಿತ್: ಹ್ಯಾರಿಸ್ ನಿರ್ಗಮಿಸಿದರೂ ಸ್ಮಿತ್ ಮಾತ್ರ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟಿಂಗ್ ನಡೆಸುವುದನ್ನು ಮುಂದುವರಿಸಿದರು. ಚೊಚ್ಚಲ ದ್ವಿಶತಕ ದಾಖಲಿಸುವ ಯೋಜನೆಯಲ್ಲಿದ್ದರು. ನಥನ್ ಲಿನ್ ಅವರು ಸ್ಮಿತ್‌ಗೆ ಉತ್ತಮ ಬೆಂಬಲ ನೀಡಿದರು. ವೇಗವಾಗಿ ರನ್ ಕಲೆ ಹಾಕಿದ ಈ ಜೋಡಿ 6.2 ಓವರ್‌ಗಳಲ್ಲಿ 7.57 ಸರಾಸರಿಯಂತೆ 48 ರನ್ ಗಳಿಸಿ ತಂಡದ ಸ್ಕೋರ್‌ನ್ನು 530ಕ್ಕೆ ಏರಿಸಿದರು. ಲಿನ್ 11 ರನ್ ಗಳಿಸಿ ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು.

ಸ್ಮಿತ್‌ಗೆ ಆಗ ದ್ವಿಶತಕ ತಲುಪಲು 8 ರನ್‌ಗಳ ಆವಶ್ಯಕತೆ ಇತ್ತು. ಮುಂದಿನ ಓವರ್‌ನಲ್ಲಿ ಉಮೇಶ್ ಯಾದವ್ ಅವರ ಮೂರನೆ ಎಸೆತವನ್ನು ರಕ್ಷಣಾತ್ಮಕವಾಗಿ ಎದುರಿಸುವಲ್ಲಿ ಮುಗ್ಗರಿಸಿದ ಸ್ಮಿತ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅಲ್ಲಿಗೆ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿತು.

ಔಟಾಗುವ ಮೊದಲು ಸ್ಮಿತ್423 ನಿಮಿಷಗಳ ಬ್ಯಾಟಿಂಗ್‌ನಲ್ಲಿ 305 ಎಸೆತಗಳನ್ನು ಎದುರಿಸಿ 15 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 192 ರನ್ ದಾಖಲಿಸಿದರು. ಸ್ಮಿತ್ ದ್ವಿಶತಕ ದಾಖಲಿಸದಿದ್ದರೂ ಬ್ಯಾಟಿಂಗ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು.

ಭಾರತ 108/1:  ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಮೊದಲ ವಿಕೆಟ್‌ಗೆ 55 ರನ್ ಸೇರಿಸಿತ್ತು. ಶಿಖರ್ ಧವನ್ ಮತ್ತು ಮುರಳಿ ವಿಜಯ್ ಇನಿಂಗ್ಸ್ ಆರಂಭಿಸಿ ಆಸ್ಟ್ರೇಲಿಯಕ್ಕೆ ತಿರುಗೇಟು ನೀಡುವ ಪ್ರಯತ್ನ ನಡೆಸಿದ್ದರು. ಆದರೆ ಧವನ್ 28 ರನ್ ಗಳಿಸಿ ಹ್ಯಾರಿಸ್ ಎಸೆತದಲ್ಲಿ ಸ್ಮಿತ್‌ಗೆ ಕ್ಯಾಚ್ ನೀಡಿದರು. ಬಳಿಕ ಆಸ್ಟ್ರೇಲಿಯದ ಬೌಲರ್‌ಗಳಿಗೆ ಯಶಸ್ಸು ಸಿಗಲಿಲ್ಲ. ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಮುಂದೆ ವಿಕೆಟ್ ಉರುಳದಂತೆ ನೋಡಿಕೊಂಡರು. ಮುರಿಯದ ಜೊತೆಯಾಟದಲ್ಲಿ 22.4 ಓವರ್‌ಗಳಲ್ಲಿ 53 ರನ್ ಸೇರಿಸಿದರು.

ವಿಜಯ್ ಟೆಸ್ಟ್‌ನಲ್ಲಿ 9ನೆ ಟೆಸ್ಟ್ ಶತಕ ಪೂರ್ಣಗೊಳಿಸಿದರು. ಮುರಳಿ ವಿಜಯ್ ಮತ್ತು ಧವನ್ ಎರಡನೆ ಬಾರಿ ಅರ್ಧಶತಕದ ಜೊತೆಯಾಟ ನೀಡಿದರು. ಧವನ್ ನಿರ್ಗಮನದ ಬಳಿಕ ಪೂಜಾರ ಕ್ರೀಸ್‌ಗೆ ಬಂದರು. ಪೂಜಾರ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟ್ ಮಾಡುವ ಸೂಚನೆ ನೀಡಿದರು. 27ನೆ ಓವರ್‌ನಲ್ಲಿ ಪೂಜಾರ ಔಟಾಗುವ ಅವಕಾಶ ಇತ್ತು. ಆದರೆ ಹೇಝ್ಲಾವುಡ್ ಎಸೆತದಲ್ಲಿ ವಿಕೆಟ್ ಕೀಪರ್ ಬ್ರಾಡ್ ಹಡಿನ್ ಅವರು ಪೂಜಾರಗೆ ಜೀವದಾನ ನೀಡಿದರು. ಈಗಾಗಲೇ ಆಸ್ಟ್ರೇಲಿಯ 4 ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯದ ವಿರುದ್ಧ ಸರಣಿಯಲ್ಲಿ ಸಮಬಲ ಸಾಧಿಸಲು ಇನ್ನರೆಡು ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಬೇಕಾಗಿದೆ.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 142.3 ಓವರ್‌ಗಳಲ್ಲಿ ಆಲೌಟ್ 530
ಕ್ರಿಸ್ ರೋಜರ್ಸ್‌ ಸಿ ಧೋನಿ ಬಿ ಶಮಿ 57, ಡೇವಿಡ್ ವಾರ್ನರ್ ಸಿ ಧವನ್ ಬಿ ಯಾದವ್ 0, ಶೇನ್ ವ್ಯಾಟ್ಸನ್ ಎಲ್‌ಬಿಡಬ್ಲು ಬಿ ಅಶ್ವಿನ್ 52, ಸ್ಟೀವನ್ ಸ್ಮಿತ್ ಬಿ ಯಾದವ್ 192, ಶಾನ್ ಮಾರ್ಷ್ ಸಿ ಧೋನಿ ಬಿ ಶಮಿ 32, ಜೋ ಬರ್ನ್ಸ್ ಸಿ ಧೋನಿ ಬಿ ಯಾದವ್ 13, ಬ್ರಾಡ್ ಹಡಿನ್ ಸಿ ಧೋನಿ ಬಿ ಶಮಿ 55, ಜಾನ್ಸನ್ ಸ್ಟಂಪ್ಡ್ ಧೋನಿ ಬಿ ಅಶ್ವಿನ್ 28, ಹ್ಯಾರಿಸ್ ಎಲ್‌ಬಿಡಬ್ಲು ಬಿ ಅಶ್ವಿನ್ 74, ನಥನ್ ಲಿನ್ ಬಿ ಶಮಿ 11, ಹೇಝ್ಲಿವುಡ್ ಔಟಾಗದೆ 0, ಇತರೆ 16.
ವಿಕೆಟ್ ಪತನ: 1-0, 2-115, 3-115, 4-184, 5-216, 6-326, 7-376, 8-482,9-530, 10-530
ಬೌಲಿಂಗ್ ವಿವರ: ಇಶಾಂತ್ ಶರ್ಮ 32-7-104-0, ಉಮೇಶ್ ಯಾದವ್ 32.3-3-130-3, ಮುಹಮ್ಮದ್ ಶಮಿ 29-4-138-4, ಆರ್.ಅಶ್ವಿನ್ 44-9-134-3, ಮುರಳಿ ವಿಜಯ್ 5-0-14-0.
ಭಾರತ ಮೊದಲ ಇನಿಂಗ್ಸ್ 37 ಓವರ್‌ಗಳಲ್ಲಿ 1 ವಿಕೆಟ್‌ಗೆ 108
ಮುರಳಿ ವಿಜಯ್ ಔಟಾಗದೆ 55, ಶಿಖರ್ ಧವನ್ ಸಿ ಸ್ಮಿತ್ ಬಿ ಹ್ಯಾರಿಸ್ 28, ಚೇತೇಶ್ವರ ಪೂಜಾರ ಔಟಾಗದೆ 25, ಇತರೆ 0.
ವಿಕೆಟ್ ಪತನ: 1-55
ಬೌಲಿಂಗ್ ವಿವರ: ಜಾನ್ಸನ್ 9-3-24-0, ಹ್ಯಾರಿಸ್ 7-3-19-1, ಹೇಝ್ಲಾ ವುಡ್ 9-4-19-0, ಶೇನ್ ವ್ಯಾಟ್ಸನ್ 4-0-14-0, ನಥನ್ ಲಿನ್ 8-0-32-0.

Write A Comment