ಪ್ರಮುಖ ವರದಿಗಳು

ರಾಷ್ಟ್ರಪತಿ ಆಳ್ವಿಕೆ ಹೇರಿ, ನನ್ನನ್ನು ಬಂಧಿಸಿ:ಕೇಂದ್ರವನ್ನು ಬೆದರಿಸಿದ ಮಮತಾ

Pinterest LinkedIn Tumblr

MAMATA

ಕೊಲ್ಕತ್ತಾ: ತಮ್ಮ ಪಕ್ಷದ ಲೋಕಸಭಾ ಸದಸ್ಯನೊಬ್ಬನನ್ನು ಶಾರದ ಚೀಟಿ ಹಗರಣದ ಸಂಬಂಧದಲ್ಲಿ ಬಂಧಿಸಿರುವ ಒಂದು ದಿನದ ನಂತರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ತಮ್ಮ ಮತ್ತು ತಮ್ಮ ಪಕ್ಷದ ವಿರದ್ಧ ಕೇಂದ್ರ ಸರ್ಕಾರ ಹಗೆ ಸಾಧಿಸುತ್ತಿದ್ದು, ತಮ್ಮನ್ನು ಬಂಧಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರಕ್ಕೆ ಬೆದರಿಕೆ ಹಾಕಿದ್ದಾರೆ.

“ನನ್ನನ್ನು ಜೈಲಿಗೆ ಕಳುಹಿಸಲಿ. ನಾನು ನೋಡಿಕೊಳ್ಳುತ್ತೇನೆ. ಜೈಲು ಎಷ್ಟು ವಿಶಾಲವಾಗಿದೆ ಎಂಬುದನ್ನು ನಾನೂ ನೋಡಿಯೇಬಿಡುತ್ತೇನೆ.” ಎಂದು ಪಕ್ಷದ ಸಭೆಯಲ್ಲಿ ನೆರೆದಿದ್ದ ಲೋಕಸಭಾ ಸದಸ್ಯರು, ಸಚಿವರು ಮತ್ತು ಶಾಸಕರನ್ನುದೇಶಿಸಿ ಹೇಳಿದ್ದಾರೆ.

“ನಮಗೆ ತೊಂದರೆಯಾದರೆ, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ನಾವು ಎಲ್ಲ ಸವಾಲುಗಳಿಗೂ ಸಿದ್ಧ” ಎಂದು ತೃಣಮೂಲ ಕಾಂಗ್ರೆಸ್ ನ ಅಧ್ಯಕ್ಷೆ ಹೇಳಿದ್ದಾರೆ.

ಬಿಜೆಪಿ ಪಕ್ಷಕ್ಕೆ ಹೆದರದೆ ಕೇಸರಿ ಪಕ್ಷದ ಪಿತೂರಿಗಳನ್ನು ಸಮರ್ಥವಾಗಿ ಎದುರಿಸಲು ಒಗ್ಗೂಡಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.

“ಅವರು ಎಲ್ಲ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ನೋಡುತ್ತಿದ್ದಾರೆ. ಸೋನಿಯಾ ಗಾಂಧಿ ಕೂಡ ಮಾತನಾಡುತ್ತಿಲ್ಲ. ಅವರಿಗೆ ನನ್ನನ್ನು ಕಂಡರೆ ಹೆದರಿಕೆ. ಆದುದರಿಂದ ಈ ರೀತಿಯ ಪಿತೂರಿಗಳನ್ನು ಮಾಡಲು ತೊಡಗಿದ್ದಾರೆ” ಎಂದಿದ್ದಾರೆ ಬ್ಯಾನರ್ಜಿ.

“ನಮ್ಮ ಹೋರಾಟ ರಾಜಕೀಯ ಹಗೆತನದ ವಿರುದ್ಧ. ಅವರು ನಮ್ಮನ್ನು ಘಾಸಿಗೊಳಿಸಿದ್ದಾರೆ. ನಾವು ರಾಜಕೀಯವಾಗಿಯೇ ಪ್ರತಿಕ್ರಿಯಿಸುತ್ತೇವೆ.” ಎಂದು ನೇತಾಜಿ ಒಳಾಂಗಣ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ನೆರೆದಿದ್ದ ಸಾವಿರಾರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ್ದಾರೆ.

“ಗಲಭೆಗಳನ್ನು ಹರಡುವ ಹಲವಾರು ಕೇಸುಗಳು ಅವರ ವಿರುದ್ಧ ಇರುವಾಗ ನಮ್ಮೆಡೆಗೆ ಅವರು ಹೇಗೆ ಬೆರಳು ತೋರಿಸುತ್ತಾರೆ? ಅವರು ಜಾತ್ಯಾತೀತತೆಯನ್ನು ಮುಗಿಸಲು ಸಂಚು ಹೂಡಿದ್ದಾರೆ. ಅವರು ಪ್ರಾದೇಶಿಕ ಪಕ್ಷಗಳನ್ನು ಕೊನೆಗಾಣಿಸುವ ಹುನ್ನಾರ ಮಾಡಿದ್ದಾರೆ.” ಎಂದು ಬಿಜೆಪಿ ನಾಯಕತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಮೋದಿಯವರನ್ನೂ ಟೀಕಿಸಿರುವ ಮಮತಾ “ದೇಶವನ್ನು ನೋಡಿಕೊಳ್ಳುತ್ತಿರುವ ಮನುಷ್ಯ… ಅಧಿಕಾರ ಸ್ವೀಕರಿಸಿದ ನಂತರ ಭಾರತದಲ್ಲಿ ಎಷ್ಟು ದಿನ ಕಳೆದಿದ್ದಾರೆ? ಅವರ ವಿಳಾಸ ಈಗ ವಿದೇಶದಲ್ಲಿದೆ” ಎಂದು ಕುಹಕವಾಡಿದ್ದಾರೆ.

ಮೋದಿಯ ವಿರುದ್ಧ ಪ್ರಹಾರ ಮುಂದುವರೆಸಿದ ಮಮತಾ “ಸ್ವಚ್ಛ ಭಾರತ ಎಂದು ಯೋಜನೆಗೆ ಹೆಸರಿಟ್ಟಿದ್ದಾರೆ.. ಅವರು ಮೊದಲು ಸ್ವಚ್ಛ ಮನುಷ್ಯನನ್ನು ಹುಡುಕಬೇಕು” ಎಂದಿರುವ ಅವರು “ದೇಶವನ್ನು ಮುನ್ನಡೆಸುವುದು ಚಾತುರ್ಯದ ಕಾರ್ಯವಲ್ಲ. ಎಲ್ಲ ಜನರನ್ನೂ ಒಟ್ಟಿಗೆ ಕೊಂಡೊಯ್ಯುವವನು ನಾಯಕ. ಗುಜರಾತ್ ನಿಂದ ಮಹಾರಾಷ್ಟ್ರದ ವರೆಗೆ ಕಳೆದ ಕೆಲವು ತಿಂಗಳುಗಳಲ್ಲಿ ಭಾರತದಾದ್ಯಂತ ಗಲಭೆಗಳನ್ನು ಹಬ್ಬಿಸಿದ್ದಾರೆ. ದೆಹಲಿಯನ್ನು ಕೂಡ ಬಿಟ್ಟಿಲ್ಲ. ಕೇವಲ ೩೧% ವೋಟುಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದದ್ದು. ಇನ್ನುಳಿದ ೬೯% ಜನತೆ ಅವರನ್ನು ಬೆಂಬಲಿಸಲಿಲ್ಲ” ಎಂದಿದ್ದಾರೆ.

ಮಾಧ್ಯಮದ ಕೆಲವು ಬಣ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ವರ್ತಿಸಿ ಬಿಜೆಪಿ ಗೆಲುವಿಗೆ ಸಹಾಯ ಮಾಡಿವೆ ಎಂದು ಕೂಡ ಆಪಾದಿಸಿದ್ದಾರೆ.

Write A Comment