ಕರ್ನಾಟಕ

ಐಶಾರಾಮಿ ಜೀವನದ ಮಹದಾಸೆಯಿಂದ ಫ‌ುಲ್‌ಟೈಮ್‌ ಕಳ್ಳತನ

Pinterest LinkedIn Tumblr


ಬೆಂಗಳೂರು: ಐಶಾರಾಮಿ ಜೀವನಕ್ಕಾಗಿ “ಫ‌ುಲ್‌ಟೈಂ’ಮನೆಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆತನಿಂದ 42 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನಾಭರಣ ಹಾಗೂ 11 ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ.

ಆರೋಪಿಯು ಮಾಸಿಕ 35 ಸಾವಿರ ರೂ. ಬಾಡಿಗೆ ನೀಡಿ ಅಪಾರ್ಟ್‌ಮೆಂಟ್‌ವೊಂದರ ಪ್ಲ್ರಾಟ್‌ನಲ್ಲಿ ವಾಸವಿದ್ದು, ನೆರೆ ಹೊರೆಯವರಿಗೆ ತಾನು ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ. ಬೆಳಗ್ಗೆ 11 ಗಂಟೆ ವೇಳೆಗೆ ಟಾಕು-ಟೀಕಾಗಿ ಬಟ್ಟೆ ತೊಟ್ಟು ಕೆಲಸಕ್ಕೆ ಹೋಗುವಂತೆ ತೆರಳಿ ಸಂಜೆ ವೇಳೆಗೆ ವಾಪಸ್ಸಾಗುತ್ತಿದ್ದ. ಬೀಗ ಹಾಕಿರುವ ಮನೆ ಗುರುತಿಸಿ ಕಳವು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಎಂಬುದು ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿದೆ.

ಪಂಜಾಬ್‌ ಮೂಲದ ಸಮೀರ್‌ ವರ್ಮಾ ಬಂಧಿತ. ಇತ್ತೀಚೆಗೆ ಲ್ಯಾಪ್‌ ಟಾಪ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರು ಸಮೀರ್‌ ವರ್ಮಾನನ್ನು ಬಂಧಿಸಿದ್ದು 22 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯು ಕಳೆದ ವರ್ಷ ಫೆಬ್ರವರಿಯಲ್ಲಿ ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದ ಆರೋಪಿ, ಮೂರೇ ತಿಂಗಳಲ್ಲಿ ಜಾಮೀನು ಪಡೆದುಕೊಂಡು ಬಂದು ಹಳೆ ಪ್ರವೃತ್ತಿ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟೆಕ್ಕಿಗಳ ಮನೆಗಳೇ ಟಾರ್ಗೆಟ್‌: ಪಂಜಾಬ್‌ನ ಜಲಂಧರ್‌ ಮೂಲದ ಸಮೀರ್‌ ವರ್ಮಾ 2005ರಲ್ಲಿ ವಿದ್ಯಾಭ್ಯಾಸಕ್ಕೆ ಬಂದು ಇಲ್ಲೇ ನೆಲೆಸಿದ್ದ. ಬಿಕಾಂ ಅಪೂರ್ಣ ಹಾಗೂ ಹೋಟೆಲ್‌ ಮ್ಯಾನೆಜ್‌ಮೆಂಟ್‌ ಕೋರ್ಸ್‌ ಮುಗಿಸಿದ್ದ. ಕೆಲ ವರ್ಷಗಳ ಹಿಂದೆ ಹೊಸಕೆರೆಹಳ್ಳಿಯಲ್ಲಿ ಎಸ್‌.ಆರ್‌ ಸರ್ವೀಸ್‌ ಸೆಂಟರ್‌ ತೆಗೆದು ಪತ್ನಿಯ ಜೊತೆ ವಾಸಿಸುತ್ತಿದ್ದ.

ವ್ಯಾಪಾರದಲ್ಲಿ ನಷ್ಟವುಂಟಾಗುತ್ತಿದ್ದಂತೆ ಕಳವು ಪ್ರವೃತ್ತಿ ಆರಂಭಿಸಿದ ಸಮೀರ್‌, ಸಾಫ್ಟ್ವೇರ್‌ ಉದ್ಯೋಗಿಗಳು ಹೆಚ್ಚಾಗಿ ವಾಸವಿರುವ ಎಲೆಕ್ಟ್ರಾನಿಕ್‌ ಸಿಟಿ, ಬೇಗೂರು, ಹುಳಿಮಾವು ಸುತ್ತಮುತ್ತಲ ಪ್ರದೇಶಗಳಲ್ಲಿನ ಅಪಾರ್ಟ್‌ಮೆಂಟ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಟು, ಯಾರೂ ಇಲ್ಲದ ಫ್ಲಾಟ್‌ಗಳ ಬೀಗ ಮುರಿದು, ಲ್ಯಾಪ್‌ಟಾಪ್‌, ಚಿನ್ನಾಭರಣ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕಳವು ಮಾಡಿಕೊಂಡು ಬರುತ್ತಿದ್ದ. ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತನ್ನ ಅಂಗಡಿಯಲ್ಲಿಯೇ ಮಾರಾಟ ಮಾಡಿ, ಚಿನ್ನಾಭರಣಗಳನ್ನು ರಾಮಬಾಬು ಎಂಬಾತನಿಗೆ ಮಾರಾಟ ಮಾಡುತ್ತಿದ್ದ ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮಡಿವಾಳ ಠಾಣೆ ಪೊಲೀಸರು ಸಮೀರ್‌ನನ್ನು ಬಂಧಿಸಿ 72 ಲಕ್ಷ ರೂ. ಮೌಲ್ಯದ 151 ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಜೈಲು ಸೇರಿದ್ದ ಆರೋಪಿ, ಮೂರೇ ತಿಂಗಳಲ್ಲಿ ಜಾಮೀನು ಪಡೆದುಕೊಂಡು ಬಂದು ಹಳೆ ಪ್ರವೃತ್ತಿ ಮುಂದುವರಿಸಿದ್ದ.

ಪರಿಹಾರ ಹಣ ದೋಚಿದ್ದ: 2015ರ ಮಾರ್ಚ್‌ 15ರಂದು ಕೋಡಿಚಿಕ್ಕನಹಳ್ಳಿಯ ಬಂಡೆಯ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಚಿತ್ರದುರ್ಗ ಮೂಲದ ಕಾರ್ಮಿಕ ದಂಪತಿಯ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಸರ್ಕಾರ ಪರಿಹಾರದ ರೂಪದಲ್ಲಿ ನೀಡಿದ್ದ 2.ಲಕ್ಷ ರೂ. ಹಣವನ್ನು ಪೋಷಕರು ಮನೆಯಲ್ಲಿ ತಂದಿಟ್ಟಿದ್ದರು. ಆರೋಪಿ, ಆ ಮನೆಯ ಬೀಗ ಒಡೆದು 2. ಲಕ್ಷ ರೂ. ಚಿನ್ನದ ತಾಳಿ ಹಾಗೂ ಓಲೆಗಳನ್ನು ಕದ್ದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

-ಉದಯವಾಣಿ

Comments are closed.