ರಾಷ್ಟ್ರೀಯ

ಪಾತಕಿ ತಕ್ಲಾ ಬಲೆಗೆ ಕೆಡವಿದ ಅಜಿತ್‌ ದೋವಲ್‌-ಮೋದಿ ಮಾಸ್ಟರ್‌ ಪ್ಲಾನ್‌

Pinterest LinkedIn Tumblr

ಅಜಿತ್‌ ದೋವಲ್‌

ದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದಲ್ಲಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನಷ್ಟೇ ರೂವಾರಿಯದ ಫಾರುಖ್‌ ತಕ್ಲಾನನ್ನು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಕೌಂಟರ್‌ನಲ್ಲಿ ಬಂಧಿಸಲಾಗಿದೆ.

ದುಬೈನಿಂದ ದೆಹಲಿಗೆ ಆಗಮಿಸುತ್ತಿದ್ದಂತೆಯೇ ಸಿಬಿಐ ಆತನನ್ನು ಬಂಧಿಸಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳ ನೆರವಿನಿಂದ ಆತನನ್ನು ದುಬೈನಿಂದ ಗಡಿಪಾರು ಮಾಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿತ್ತು.

ತಕ್ಲಾನನ್ನು ಮಾರ್ಚ್‌ 19ರ ವರಡಗೂ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲು ಮುಂಬಯಿಯ ಟಾಡಾ ನ್ಯಾಯಾಲಯ ಅನುಮತಿ ನೀಡಿದೆ.

ತಕ್ಲಾನನ್ನು ಭಾರತಕ್ಕೆ ಮರಳಿ ತಂದ ಕುರಿತಂತೆ ವಿವರ

*ಮುಂಬಯಿಯ ಅಮ್ಜದ್‌ ಲಂಗ್ಡಾನ ಅವಳಿ ಸಹೋದರನಾದ ತಕ್ಲಾ ವಿರುದ್ಧ 1993ರ ಸರಣಿ ಸ್ಫೋಟದಲ್ಲಿ ಸೂಕ್ತ ಸಾಕ್ಷ್ಯ ಸಿಗದ ಕಾರಣ ಆತನನ್ನು ಖುಲಾಸೆಗೊಳಿಸಲಾಗಿತ್ತು.

* ಲಂಗ್ಡಾ ಪುತ್ರಿಯ ವಿವಾಹದ ಪ್ರಯುಕ್ತ ದುಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ದ ದಾವೂದ್‌ ಸಹೋದರ ಸಂಬಂಧಿ ಹಾಗು ಹಸೀನಾ ಪಾರ್ಕರ್‌ ಪುತ್ರ.

*ಭೂಗತ ದೊರೆಯ ಪ್ರಮುಖ ನಂಟಸ್ಥರು ಭಾಗವಹಿಸಿದ್ದ ಪಾರ್ಟಿ ಮೇಲೆ ಕಣ್ಣಿಟ್ಟ ಭಾರತದ ಗುಪ್ತಚರ ಇಲಾಖೆಗಳು ಬೇಟೆಗೆ ಇಳಿದವು. ದೂರವಾಣಿ ಕರೆಗಳನ್ನು ಕದ್ಧಾಲಿಸಿದ ಗುಪ್ತಚರ ಸಂಸ್ಥೆಗಳು ಯುಎಇಯಲ್ಲಿ ತಕ್ಲಾ ಅಡಗಿರುವ ಜಾಗವನ್ನು ಪತ್ತೆ ಮಾಡಿದವು.

*ಪಾರ್ಟಿ ಬಳಿಕ ಭಾರತದ ಸಂಸ್ಥೆಗಳು ತಕ್ಲಾಮೇಲೆ ನಿರಂತರ ಗಮನವಿಟ್ಟಿದ್ದವು.

*ತಕ್ಲಾನನ್ನು ಭಾರತಕ್ಕೆ ಮರಳಿ ತರುವ ಜವಾಬ್ದಾರಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮೇಲೆ ಪ್ರಧಾನ ಮಂತ್ರಿ ಕಚೇರಿ ನೀಡಿತು ಎಂದು ಮೂಲಗಳು ತಿಳಿಸಿವೆ.

*ತಕ್ಲಾನನ್ನು ಹಸ್ತಾಂತರಿಸಲು ಭಾರತ ಮುಂದಿಟ್ಟಿದ್ದ ಕೋರಿಕೆಯನ್ನು ಇಂಟರ್‌ಪೊಲ್‌ ಜುಲೈ 27,2017ರಂದು ಯುಎಇಯ ಭದ್ರತಾ ವ್ಯವಹಾರಗಳ ಸಚಿವಾಲಯದ ಮುಂದಿಟ್ಟಿತು. ಆದರೆ ಯುಎಇ ಅಧಿಕಾರಿಗಳು ತಕ್ಲಾನನ್ನು ಬಂಧನದಲ್ಲಿಟ್ಟಿದ್ದವೇ ಎಂಬುದು ತಿಳಿದಿಲ್ಲ.

*ಆಗಸ್ಟ್‌ 8,2017ರಂದು ತಕ್ಲಾ ವಿರುದ್ಧ ಮುಂಬಯಿಯ ಟಾಡಾ ನ್ಯಾಯಾಲಯದಿಂದ ಜಾಮೀನುರಹಿತ ವಾರಂಟ್‌ ಪಡೆದ ಸಿಬಿಐ. ಟಾಡಾ ನ್ಯಾಯಾಲಯದ ವಾರಂಟ್‌ ಹಾಗು ಇಂಟರ್‌ಪೊಲ್‌ನ ರೆಡ್‌ ಕಾರ್ನರ್‌ ನೊಟೀಸ್‌ಅನ್ನು ಅಬು ಧಾಬಿಗೆ ಕಳುಹಿಸಲಾಯಿತು.

*ಆಗಸ್ಟ್‌ 22, 2017ರಂದು ತಕ್ಲಾ ಹಸ್ತಾಂತರ ಕೋರಿ ಭಾರತ ಸರಕಾರ ಅಧಿಕೃತ ಮನವಿಯನ್ನು ಯುಎಇ ಸರಕಾರಕ್ಕೆ ನೀಡಿತು.

*ಯುಎಇನ ರಾಜಮನೆತನದ ವಲಯದಲ್ಲಿ ಸಾಕಷ್ಟು ಪ್ರಭಾವ ಇಟ್ಟಿರುವ ದಾವೂದ್‌ ಈ ವಿಚಾರ ತಿಳಿದು ತಕ್ಲಾಗೆ ಪಾಕಿಸ್ತಾನೀ ಪಾಸ್‌ಪೋರ್ಟ್‌ ನೀಡಿ ಅತ ಒಬ್ಬ ಪಾಕ್‌ ಪ್ರಜೆ ಎಂಬಂತೆ ತೋರಲು ಯತ್ನಿಸಿದ.

*ಬಳಿಕ ತಕ್ಲಾನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ಯುಎಇ ಹಿಂಜರಿಕೆ ತೋರಿದ ಕಾರಣ ಹಸ್ತಾಂತರ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬ.

*ಫೆಬ್ರವರಿ 2018ರಲ್ಲಿ ಜೋರ್ಡಾನ್‌ನಿಂದ ಯುಎಇಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಸ್ವಾಗತಿಸಿದ ದೊರೆ ಮೊಹಮ್ಮದ್‌ ಬಿನ್‌ ಝಾಯೆದ್‌ ಹಾಗು ರಾಜಮನೆತನ.

*ಅಬು ಧಾಬಿಯ ದೊರೆಯೊಂದಿಗೆ ಹಲವಾರು ವಿಚಾರಗಳನ್ನು ಚರ್ಚಿಸಿದ ಪ್ರಧಾನಿ ಇದೇ ವೇಳೆ ತಕ್ಲಾ ಕುರಿತಂತೆ ಪ್ರಸ್ತಾಪಿಸಿದ್ದಾಗಿ ತಿಳಿದುಬಂದಿದೆ.

*ಪ್ರಧಾನ ಮಂತ್ರಿ ನಿಯೋಗದಲ್ಲಿದ್ದ ದೋವಲ್‌ ತಕ್ಲಾ ವಿಚಾರವಾಗಿ ಲೆಫ್ಟೆನೆಂಟ್‌ ಜನರಲ್ ಶೇಖ್‌ ಶರೀಫ್‌ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ತಕ್ಲಾ ಹಸ್ತಾಂತರವನ್ನು ಶೀಘ್ರ ಮಾಡಿ ಮುಗಿಸಲು ಇದೇ ವೇಳೆ ಮನವಿ ಮಾಡಲಾಗಿದೆ.

ವಿದೇಶೀ ಸರಕಾರಗಳ ಜತೆಗೆ ಭದ್ರತಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗು ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಜಂಟಿ ಯತ್ನಕ್ಕೆ ಸಂದ ಜಯ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.