ಕರಾವಳಿ

ನಂಬಿಕೆಗೆ ಪಾತ್ರರಾದ ದೇವಾಡಿಗರು ಸುಮನಸ್ಸುಳ್ಳವರು: ಬಾರಕೂರಿನಲ್ಲಿ ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ

Pinterest LinkedIn Tumblr

ಕುಂದಾಪುರ: ನೀತಿ, ನೀಯತ್ತು, ಸತ್ಯದ ಮೂಲಕ ದೇವಾಡಿಗ ಸಮಾಜವು ಎಲ್ಲರ ನಂಬಿಕೆಗೆ ಪಾತ್ರವಾಗಿದೆ. ಬಾರ್ಕೂರಿನಂತಹ ಪುಣ್ಯ ಭೂಮಿಯಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ದೇವಸ್ಥಾನ ಹಾಗೂ ಈ ಕಾರ್ಯಕ್ರಮದ ಮೂಲಕ ಇಡೀ ಸಮಾಜ ಒಗ್ಗೂಡಲಿದೆ. ಸುಮನಸ್ಸುಳ್ಳ ದೇವಾಡಿಗ ಸಮಾಜದವರು ಇದೀಗ ವಿದ್ಯಾವಂತರಾಗಿದ್ದು ಇದು ಸಂತಸದ ವಿಚಾರ ಎಂದು ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರದ ಧರ್ಮಾಧಿಕಾರಿ ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ ಅವರು ಹೇಳಿದರು.

ಅವರು ಬಾರಕೂರಿನಲ್ಲಿ ದೇವಾಡಿಗ ಸಮಾಜದಿಂದ ನಿರ್ಮಾಣವಾದ ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಾರಕೂರಿನ ಹಿನ್ನೆಲೆ ಗಮನಿಸಿದರೇ ರಾಜರ ಪಾತ್ರ ಮಹತ್ತರವಾಗಿದೆ. ಇದೊಂದು ಸಮ್ರದ್ಧಿಯುಳ್ಳ ಪ್ರದೇಶವಾದ ಕಾರಣದಿಂದಲೇ ಇಲ್ಲಿ ಇಷ್ಟೊಂದು ದೇವಸ್ಥಾನಗಳು ನಿರ್ಮಾಣವಾಗಿದೆ. ಧರ್ಮ ಬಟ್ಟೆಯ ಹಾಗೆ ಹಾಕಿ ತೆಗೆಯುವ ವಸ್ತುವಲ್ಲ. ಇದೊಂದು ಜೀವನದ ಅವಿಚ್ಚಿನ್ನ ಭಾಗವಾಗಿದೆ. ಧರ್ಮಾಚರಣೆ ಎಂಬುದು ಸಹಜವಾಗಿರಬೇಕು. ಜಾತಿ, ಪಂಥ, ಮತಗಳನ್ನು ಗುರಿತಿಸುವ ಜನರು ಧರ್ಮವನ್ನು ಮಾತ್ರ ಗುರುತಿಸುವುದಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ. ಭಗವಂತನನ್ನು ನಮ್ಮೊಳಗೆ ನಾವು ಕಂಡುಕೊಂಡು ನಮ್ಮಿಂದ ಯಾವುದೇ ಅಪರಾಧಗಳಾಗದಂತೆ ನಿಗ್ರಹ ಮಾಡಿಕೊಳ್ಳಬೇಕು. ದೇವರ ನೀಯತ್ತುಕೋರ್ಟಿನಲ್ಲಿ ಸುಳ್ಳು ಎಂದಿಗೂ ಸತ್ಯವಾಗಲ್ಲ ಎಂದು ಹೆಗ್ಗಡೆ ಅವರು ಹೇಳಿದರು. ದೇವಾಡಿಗ ಸಮಾಜ ಈ ಹಿಂದೆ ಶಿಕ್ಷಣ ವಂಚಿತರಾಗಿದ್ದ ಕಾಲದಲ್ಲಿ ಪ್ರಯತ್ನ ಶೀಲರಾಗಿ ರಾಜ್ಯದ ಮುಖ್ಯಮಂತ್ರಿಗಳಾದ ವೀರಪ್ಪ ಮೋಯಿಲಿ ಶ್ರಮ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳು, ಪೋಷಕರು, ಮಹಾ ಪೋಷಕರನ್ನು ಗುರುತಿಸಿ, ಸನ್ಮಾನಿಸಲಾಯಿತು. ಡಾ. ಡಿ ವೀರೇಂದ್ರ ಹೆಗ್ಗಡೆ ಹಾಗೂ ವೀರಪ್ಪ ಮೊಯ್ಲಿ ದಾನಿಗಳನ್ನು ಸನ್ಮಾನಿಸದರು. ಎಚ್. ಮೋಹನದಾಸ್ ಸನ್ಮಾನಿತರ ಪಟ್ಟಿ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಎಂ. ವೀರಪ್ಪ ಮೊಯಿಲಿ, ಶಿಕ್ಷಣ ಮಾತ್ರದಿಂದಲೇ ಜನರು ಸಮಾಜದಲ್ಲಿ ಬೆಳೆಯಲು ಸಾಧ್ಯವಿದೆ. ಧರ್ಮ, ಶಿಸ್ತು, ಶ್ರದ್ಧೆ ಮೂಲಕ ಯಶಸ್ಸು ಸಾದ್ಯವಿದ್ದು ಇದೇ ಬದುಕಿನ ದೊಡ್ಡ ಆಸ್ತಿ. ಸತ್ಯ, ಅಹಿಂಸೆಯಿಂದ ಯಾವುದೇ ವಿಚಾರವನ್ನು ಸಾಧಿಸಲು ಸಾಧ್ಯವಿದೆ. ನಮ್ಮದು ಜಾತ್ಯಾತೀತ ನಾಡಾಗಿದ್ದು ಇಲ್ಲಿ ಹುಟ್ಟಿದ್ದು ನಿಜಕ್ಕೂ ಪುಣ್ಯದ ವಿಚಾರ. ವಸುದೈವ ಕುಟುಂಬಕಂ ಎಂಬ ಉದಾರತೆ ಅಗತ್ಯ. ಸಮಾಜ ಗೌರವಿಸುವ ಕಾರ್ಯ ಮಾಡುವ ಮೂಲಕ ಎತ್ತರಕ್ಕೆ ಬೆಳೆಯಬೇಕು. ದೇವಾಡಿಗ ಸಮಾಜದಲ್ಲಿ ಶ್ರದ್ಧೆಯ ಶ್ರೀಮಂತಿಕೆಯುಳ್ಳವರಿದ್ದಾರೆ. ಆದ್ದರಿಂದಲೇ ಪರಂಪರೆಯ ಈ ಹೆಮ್ಮೆಯ ನಾಡಿನಲ್ಲಿ ಸಮಾಜದ ದೇವಸ್ಥಾನ ನಿರ್ಮಾಣ ಕಾರ್ಯವಾಗಿದೆ ಎಂದರು.

ಸರಕಾರದಿಂದ 2 ಕೋಟಿ…..
ರಾಜ್ಯಕ್ಕಾಗಿ ತ್ಯಾಗ ಮಾಡಿದ ಸ್ತ್ರೀಯ ನಾಡು ಬಾರಕೂರಿನಲ್ಲಿ ಇಂತಹ ಅದ್ಭುತ ದೇವಸ್ಥಾನ ನಿರ್ಮಾಣವಾಗಿದ್ದು ಕೇವಲ ೨೫ ತಿಂಗಳಿನಲ್ಲಿ ೬ ಕೋಟಿ ವೆಚ್ಚದಲ್ಲಿ ಈ ಕೆಲಸವಾಗಿದೆ. ಇದಕ್ಕೆ ಹಲವು ಶಕ್ತಿಗಳ ಕಾರ್ಯವಾಗಿದೆ. ಅಸಾಧ್ಯವನ್ನು ಸಾಧಿಸುವ ಛಲ ಮುಖ್ಯವಾದಾಗ ಇಂತಹ ಮಹತ್ತರ ಕೆಲಸವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈ ಬಗ್ಗೆ ಮಾತುಕತೆ ಮಾಡಿದ್ದು ದೇವಸ್ಥಾನ ಕಾರ್ಯಕ್ಕೆ 2 ಕೋಟಿ ನೀಡುವಬಗ್ಗೆ ತಿಳಿಸಿದ್ದಾರೆ ಎಂದರು. ಅಲ್ಲದೇ ದೇವಾಡಿಗ ಸಮುದಾಯ ಭವನ ನಿರ್ಮಾಣ ಮಾಡಲು ಇಚ್ಚಿಸಿದಲ್ಲಿಯೂ ಅದಕ್ಕೆ ಇಲಾಖೆಯಿಂದ 1 ಕೋಟಿ ಮಂಜೂರು ಮಾಡಿಸುವುದಾಗಿ ಡಾ. ವೀರಪ್ಪ ಮೋಯ್ಲಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಮಾಲತಿ ವೀರಪ್ಪ ಮೊಯ್ಲಿ, ಮಾಹೆ ಮತ್ತು ಕಾರ್ಯದರ್ಶಿ ಹಾಗೂ ವಿಶ್ವಸ್ಥ ಅಶೋಕ್ ಪೈ, ಉಡುಪಿ ಪವರ್ ಕಾರ್ಪೋರೇಶನ್ ಲಿ. (ಅದಾನಿ ಸಮೂಹ ಸಂಸ್ಥೆ)ಯ ಜೊತೆ ಆಡಳಿತ ನಿದೇರ್ಶಕ ಕಿಶೋರ್ ಆಳ್ವ, ಮುಂಬೈಯ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯ ಕೃಷ್ಣ ಶೆಟ್ಟಿ, ಅನಿಲ್ ಜೈನ್, ವಿರೇಶ್ ಮೊದಲಾದವರು ಉಪಸ್ಥಿತರಿದ್ದರು.

ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿ ಹಾಗೂ ವಿಶ್ವಸ್ಥ ಬಿ. ಜನಾರ್ಧನ ದೇವಾಡಿಗ ಬಾರ್ಕೂರು, ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ವಿಶ್ವಸ್ಥರಾದ ಧರ್ಮಪಾಲ ಯು ದೇವಾಡಿಗ ಮುಂಬೈ, ಮುಖ್ಯ ಸಂಚಾಲಕರು ಮತ್ತು ವಿಶ್ವಸ್ಥರಾದ ಹಿರಿಯಡ್ಕ ಮೋಹನ್‌ದಾಸ್ ಮುಂಬೈ, ವಿಶ್ವಸ್ಥರಾದ ಸುರೇಶ ಡಿ. ಪಡುಕೋಣೆ ಮುಂಬೈ, ಹರೀಶ್ ಶೇರಿಗಾರ್ ದುಬೈ, ನಾರಾಯಣ ಎಂ. ದೇವಾಡಿಗ ದುಬೈ, ದಿನೇಶ್ ಸಿ. ದೇವಾಡಿಗ ದುಬೈ, ಜನಾರ್ಧನ ಎಸ್. ದೇವಾಡಿಗ ಮುಂಬೈ, ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಇದ್ದರು.

ಜ್ಯೋತಿ ಸತೀಶ್ ಪ್ರಾರ್ಥಿಸಿ , ಡಾ. ದೇವರಾಜ್ ಸ್ವಾಗತಿಸಿದರು. ವಿಜೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

(ಚಿತ್ರ, ವರದಿ-ಯೋಗೀಶ್ ಕುಂಭಾಸಿ)

Comments are closed.