ಕರಾವಳಿ

ಮನುಷ್ಯ ಮೊದಲು ಮನುಷ್ಯನಾಗಿ ಬದುಕಲು ಕಲಿಯಬೇಕು : ಡಾ ನಾಗಪ್ಪ ಗೌಡ

Pinterest LinkedIn Tumblr

ಮಂಗಳೂರು, ಫೆಬ್ರವರಿ 01: ವರ್ಣಾಶ್ರಮ ವ್ಯವಸ್ಥೆಯಿಂದ ದೇಶವನ್ನು ಕಟ್ಟಲು ಸಾಧ್ಯವಾಗಿಲ್ಲ ಆದರೆ ವಚನಕಾರರ ಮಾನವಧರ್ಮದ ಪ್ರತಿಪಾದನೆಯಿಂದ ಅದು ಸಾಧ್ಯವಿದ್ದು ಮನುಷ್ಯ ಮೊದಲು ಮನುಷ್ಯನಾಗಿ ಬದುಕಲು ಕಲಿಯಬೇಕು ಆ ಮೂಲಕ ವಚನಕಾರರ ಸಂದೇಶವನ್ನು ಪಾಲಿಸಿ ಅವರ ಮನುಷ್ಯ ಧರ್ಮದ ಕಲ್ಪನೆಯನ್ನು ಎಲ್ಲಾ ಜನತೆಯೂ ಮೈಗೂಡಿಸಿಕೊಳ್ಳಬೇಕು ಎಂದು ಮಂಗಳೂರು ವಿವಿಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ. ನಾಗಪ್ಪಗೌಡ ಆರ್ ಹೇಳಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಜಿಲ್ಲೆ ಇದರ ಸಂಯಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ ಮತ್ತು ಅಂಬಿಗರ ಚೌಡಯ್ಯ ಜಯಂತಿಯ ಕುರಿತು ಉಪನ್ಯಾಸ ನೀಡಿದರು.

12ನೇ ಶತಮಾನದ ಕಾಲಘಟ್ಟದಲ್ಲಿ ವಚನಕಾರರು ಯಾವುದೇ ವಿದ್ಯಾಭ್ಯಾಸವಿಲ್ಲದೇ ತಮ್ಮ ಅನುಭವವನ್ನೇ ಆಧಾರವಾಗಿಟ್ಟುಕೊಂಡು ವಚನಗಳ ರಚನೆಯನ್ನು ಮಾಡಿದ್ದಾರೆ. ಅವರುಗಳು ತಮ್ಮ ತಿಳುವಳಿಕೆಯಿಂದಲೇ ವಿಶ್ವಮಾನವನಾಗಿ ಜೀವಿಸಲು ಕರೆಕೊಟ್ಟಿದ್ದಾರೆ. ಆದರೆ ಇಂದು ಜಾತಿ ಧರ್ಮಗಳ ಹೆಸರಿನಲ್ಲಿ ಅನ್ಯಾಯಗಳು ನಡೆಯುತ್ತಿದ್ದು, ವಚನಗಳು ಮಾನವಧರ್ಮವನ್ನು ಹುಟ್ಟಹಾಕಲು ಮಾಡಿದ ಪ್ರಯತ್ನವನ್ನು ಎಲ್ಲರೂ ಇಂದು ಮರೆತ್ತಿದ್ದಾರೆ. ಇಡೀ ಜಗತ್ತಿನಲ್ಲಿ ಮಾನವಧರ್ಮವೇ ನೆಲೆನಿಂತರೆ ಎಲ್ಲಾ ಸಮಸ್ಯೆಗಳು ಬಗೆಹರಿಯಲು ಸಾಧ್ಯವಿದೆ. ಅಲ್ಲದೇ ಮನುಷ್ಯಕುಲ ಮಾತ್ರವೇ ಶ್ರೇಷ್ಠವಾಗಿದ್ದು ನಮ್ಮ ನಡೆ ನುಡಿ ಶುದ್ಧವಾಗಿರಬೇಕು ಹಾಗೂ ಯಾವುದೇ ಜಾತಿಯು ಮೇಲು ಕೀಳು ಅಲ್ಲ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ. ಹೆಚ್. ಖಾದರ್ ಮಾತನಾಡಿ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜಯಂತಿಗಳ ಆಚರಣೆ ಮಾಡಿ ಆ ಮೂಲಕ ಯುವಪೀಳಿಗೆಗೆ ಶ್ರೇಷ್ಠ ವ್ಯಕ್ತಿಗಳ ಆದರ್ಶದ ಕುರಿತು ತಿಳಿಸಬೇಕು ಎಂದು ಹೇಳಿದರು. ಹಾಗೂ ಸಮಾರಂಭದಲ್ಲಿ ಭಾಗವಹಿಸದೇ ಇರುವ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಮೂಡಬಿದ್ರೆಯ ಸಾಹಿತಿ ಸದಾನಂದ ನಾರಾವಿ ಮಡಿವಾಳ ಮಾಚಿದೇವನ ವಚನಗಳ ಹಾಗೂ ಅವುಗಳ ಸಂದೇಶದ ಕುರಿತು ಉಪನ್ಯಾಸವನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಮ್. ಆರ್. ರವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಮ್. ವಿ. ನಾಯಕ್, ದ.ಕ. ಹಾಗೂ ಉಡುಪಿ ಜಿಲ್ಲೆಯ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಎರ್ಮಾಳ್, ಕನ್ನಡ ಮತ್ತು  ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ ಮತ್ತಿತರರು ಉಪಸ್ಥಿತರಿದ್ದರು.

Comments are closed.