ಕರ್ನಾಟಕ

ಐಟಿ ಕಂಪನಿಗಳಿಗೆ ಬೆಸ್ಕಾಂ ಶಾಕ್‌ ?

Pinterest LinkedIn Tumblr


ಬೆಂಗಳೂರು: ಐಟಿ ಕಂಪನಿಗಳಿಗೆ ಸರಬರಾಜು ಮಾಡುವ ವಿದ್ಯುತ್‌ಗೆ ಪ್ರತ್ಯೇಕ ಸ್ಲಾಬ್‌ ಮೂಲಕ ದರ ನಿಗದಿ ಮಾಡುವ ಹೊಸ ಪ್ರಸ್ತಾಪವನ್ನು ಬೆಸ್ಕಾಂ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ಮುಂದಿಟ್ಟಿದೆ.

ಈವರೆಗೆ ಐಟಿ ಕಂಪನಿಗಳು ವಾಣಿಜ್ಯ ಉದ್ದೇಶದ ದರದೊಂದಿಗೆ ಕೈಗಾರಿಕೆಗಳಿಗೆ ನಿಗದಿಪಡಿಸಿರುವ ದರವನ್ನು ಪಾವತಿಸುತ್ತಿವೆ. ಈಗ ಕೈಗಾರಿಕೆಯಿಂದ ಪ್ರತ್ಯೇಕಿಸಿ ಹೊಸ ಸ್ಲಾಬ್‌ ಅಡಿ ಹೆಚ್ಚು ದರ ನಿಗದಿ ಮಾಡಲು ಮುಂದಾಗಿರುವುದರಿಂದ ಏ.1ರ ಬಳಿಕ ಐಟಿ ಕಂಪನಿಗಳು ವಿದ್ಯುತ್‌ ದರದ ಶಾಕ್‌ಗೆ ಒಳಗಾಗುವ ಸಾಧ್ಯತೆ ಇದೆ.

ಬೆಸ್ಕಾಂ ಆದಾಯ ಹೆಚ್ಚಿಸಿಕೊಳ್ಳುವ ಮಾಗೊರ್‍ೕಪಾಯಕ್ಕಾಗಿ ಈ ಹಾದಿ ಹಿಡಿದಂತಿದೆ. ಗೃಹ ಬಳಕೆ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕದೆ ಅದನ್ನು ವಾಣಿಜ್ಯ ಗ್ರಾಹಕರಿಗೆ ವರ್ಗಾಯಿಸುವ ಚಿಂತನೆ ನಡೆದಿದೆ. ಹೀಗಾಗಿ ಹೊಸ ಸ್ಲಾಬ್‌ ಅನ್ನು ಐಟಿ ಕಂಪನಿಗಳಿಗಾಗಿಯೇ ಸಿದ್ಧಪಡಿಸಿ ಆ ಮೂಲಕ ಹೊಸ ದರಕ್ಕೆ ಒಪ್ಪಿಗೆ ಪಡೆಯುವತ್ತ ಬೆಸ್ಕಾಂ ದೃಷ್ಟಿ ಹರಿಸಿದೆ.

ಬೆಸ್ಕಾಂಗೆ ವರ, ಐಟಿ ಕಂಪನಿಗೆ ಶಾಪ?: ಕೆಇಆರ್‌ಸಿಗೆ ಸಲ್ಲಿಸಿರುವ ಪ್ರಸ್ತಾಪಕ್ಕೆ ಒಪ್ಪಿಗೆ ದೊರೆತಲ್ಲಿ ಬೆಸ್ಕಾಂಗೆ ಲಾಭ ಆಗಲಿದೆ. ಆದಾಯ ವೃದ್ಧಿಗಾಗಿ ಕಸರತ್ತು ನಡೆಸುತ್ತಿರುವ ಬೆಸ್ಕಾಂ, ಹೊಸ ಸ್ಲಾಬ್‌ ಮೂಲಕ ಐಟಿ ಕಂಪನಿಗಳಿಗೆ ದರ ನಿಗದಿ ಮಾಡಿ ಹಾಲಿ ವಸೂಲಿಗಿಂತ ಶೇ.15-20ರಷ್ಟು ದರ ವಿಧಿಸಬಹುದು. ಆದರೆ, ಇದಕ್ಕೆ ಕೆಇಆರ್‌ಸಿ ಮುದ್ರೆ ಅಗತ್ಯ. ಬೆಸ್ಕಾಂ ಪ್ರಸ್ತಾಪದಿಂದ ಐಟಿ ಕಂಪನಿಗಳಿಗೆ ಹೊರೆಯಾಗುವ ಸಾಧ್ಯತೆ ಇದೆ. ಈಗಾಗಲೇ ನಿರ್ವಹಣೆ ವೆಚ್ಚದ ಪ್ರಮಾಣ ಏರುಗತಿಯಲ್ಲಿದ್ದು, ವಿದ್ಯುತ್‌ ದರದ ಜತೆಗೆ ಇನ್ನಿತರ ಖರ್ಚುಗಳು ಹೊರೆಯಾಗಬಹುದು ಎಂದು ಊಹಿಸಲಾಗಿದೆ.

ಸದ್ಯ ಬೆಸ್ಕಾಂ ವ್ಯಾಪ್ತಿಯಲ್ಲಿ 12 ಸಾವಿರಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳು ವಿದ್ಯುತ್‌ ಪಡೆಯುತ್ತಿವೆ. ಈ ಕಂಪನಿಗಳು ಈಗಾಗಲೇ ಸರಕಾರದ ನಾನಾ ರಿಯಾಯಿತಿಗಳನ್ನು ಪಡೆಯುತ್ತಿವೆ. ಜತೆಗೆ ಹೆಚ್ಚುವರಿ ರಿಯಾಯಿತಿಯನ್ನು ತೆಕ್ಕೆಗೆ ಹಾಕಿಕೊಂಡಿವೆ. ಪ್ರತಿ ಯೂನಿಟ್‌ಗೆ ರೂ. 6.65-6.95 ಹಾಗೂ ರೂ. 8.45-8.55 ದರ ಪಾವತಿಸುತ್ತಿವೆ. ಎರಡು ಸ್ಲಾಬ್‌ ಬದಲು ಒಂದೇ ಸ್ಲಾಬ್‌ ರಚಿಸಿ ರೂ. 9ರಂತೆ ದರ ನಿಗದಿ ಮಾಡುವ ಸಾಧ್ಯತೆ ಇದೆ. ಆದರೆ, ಹೊಸ ದರ ನಿಗದಿ ಇನ್ನೂ ನಿರ್ಧಾರ ಆಗಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಐಟಿ ವಲಯಕ್ಕೆ ಹೊಡೆತ ?: ದೇಶದಲ್ಲಿ ಐಟಿ ವಲಯ ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ಈ ಪ್ರಮಾಣ ಸಾಕಷ್ಟು ಹೆಚ್ಚಿದ್ದು, ರಾಜ್ಯಕ್ಕೆ ಹೆಚ್ಚಿನ ಆದಾಯ ತಂದುಕೊಡುವ ವಲಯವೆಂಬ ಹೆಗ್ಗಳಿಕೆ ಇದೆ. ಇತ್ತೀಚಿನ ನೋಟ್‌ ಬ್ಯಾನ್‌ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ನಿರ್ಧಾರದಿಂದ ಐಟಿ ಕಂಪನಿಗಳು ಭೀತಿಗೊಳಗಾಗಿವೆ. ಈ ಹಂತದಲ್ಲಿ ವಿದ್ಯುತ್‌ ದರ ಹೆಚ್ಚಳ ನಿರ್ವಹಣೆ ವೆಚ್ಚ ಹೊಸ ಹೊರೆಯಾಗಿ ಪರಿಣಮಿಸಲಿದೆ. ಇದರಿಂದ ಆದಾಯ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಕಂಪನಿಗಳು ರಕ್ಷಣೆಗೆ ಸರಕಾರದ ಮೊರೆ ಹೋಗಬಹುದು.

ಐಟಿ ಕಂಪನಿಗಳು ಪಡೆಯುವ ವಿದ್ಯುತ್‌ಗೆ ಹೊಸ ಸ್ಲಾಬ್‌ ರಚಿಸುವ ಬೆಸ್ಕಾಂ ನಿರ್ಧಾರ ಗಮನಕ್ಕೆ ಬಂದಿಲ್ಲ. ಕೆಇಆರ್‌ಸಿ ತೀರ್ಮಾನ ಕೈಗೊಳ್ಳುವ ಮುನ್ನ ನಮ್ಮ ಇಲಾಖೆಯನ್ನು ಸಂಪರ್ಕಿಸಿದರೆ ಸೂಕ್ತ ಸಮಜಾಯಿಷಿ ನೀಡುತ್ತೇವೆ. ವೈಯಕ್ತಿಕವಾಗಿ ಹೇಳುವುದಾದರೆ ದರ ಹೆಚ್ಚಿಸುವುದು ಸಮಂಜಸವಲ್ಲ.

– ಪ್ರಿಯಾಂಕ್‌ ಖರ್ಗೆ, ಐಟಿ-ಬಿಟಿ ಸಚಿವ

Comments are closed.