ರಾಷ್ಟ್ರೀಯ

ಹೆತ್ತವರ ಕಣ್ಣೀರಿಗೆ ಕರಗಿ ಹಿಂದಿರುಗುವನೇ ಈತ !

Pinterest LinkedIn Tumblr

ಶ್ರೀನಗರ: ನನ್ನ ಮನಾನ್‌… ನಿನ್ನ ತಾಯಿ ಕೂಗುತ್ತಿದ್ದಾಳೆ. ದಯವಿಟ್ಟು ಹಿಂದೆ ಬಾ. ನಿನ್ನ ತಂಗಿ ಮತ್ತು ತಾಯಿಯ ಸ್ಥಿತಿಯನ್ನು ನೋಡು…’ಇದು ಉಗ್ರನಾಗಿರುವ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರತಿಭಾವಂತ ಪಿಎಚ್‌ಡಿ ವಿದ್ಯಾರ್ಥಿ ಮನಾನ್‌ ಬಶೀರ್‌ ವಾನಿಯ ತಾಯಿ ಗೋಳಿಟ್ಟ ಪರಿ .

ಮನೆಗೆ ಮರಳಿದ್ದ ಮಗ ಏಕಾಏಕಿ ಉಗ್ರನಾಗಿ ಪ್ರಕಟವಾಗಿರುವುದನ್ನು ಕಂಡು ಮನಾನ್‌ ತಾಯಿ ಕಂಗಾಲಾಗಿದ್ದಾರೆ. ತಂಗಿ ಆಸೀಫಾ ಕೂಡಾ ಕಣ್ಣೀರಿಡುತ್ತಿದ್ದು ಅಣ್ಣನಿಗೆ ಮರಳಿ ಮನೆಗೆ ಬರುವಂತೆ ಬೇಡಿಕೊಂಡಿದ್ದಾಳೆ.

ಕಳೆದ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ವಿಶ್ವವಿದ್ಯಾಲಯದಿಂದ ಕುಪ್ವಾರದ ಮನೆಗೆ ತೆರಳಿದ್ದ ಮನಾನ್‌ ನಾಪತ್ತೆಯಾಗಿದ್ದ ಮತ್ತು ಆತನ ಮೊಬೈಲ್‌ ಕೂಡ ಸ್ವಿಚ್‌ ಆಫ್ ಆಗಿತ್ತು.

ಭಾನುವಾರ ಸಂಜೆ ಎಕೆ 47 ಗನ್‌ನೊಂದಿಗಿರುವ ಮನಾನ್‌ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ಆ ಬಳಿಕ ಹಿಜ್ಬುಲ್‌ ಉಗ್ರ ಸಂಘಟನೆ ಮನಾನ್‌ ನಮ್ಮೊಂದಿಗೆ ಸೇರಿಕೊಂಡಿದ್ದಾನೆ ಎಂದು ಘೋಷಿಸಿಕೊಂಡಿತ್ತು.

ನಿಷೇಧಿತ ಹಿಜ್ಬುಲ್‌ ಸಂಘಟನೆಯ ಸಯೀದ್‌ ಸಲಾಲುದ್ದೀನ್‌ ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವ ಸಲುವಾಗಿ ಸುಶಿಕ್ಷಿತರೂ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

ಬೆಳವಣಿಗೆ ಗಮನಕ್ಕೆ ಬರುತ್ತಿದ್ದಂತೆ ಮನಾನ್‌ನನ್ನು ಮುಸ್ಲಿಂ ವಿಶ್ವವಿದ್ಯಾಲಯ ಅಮಾನತು ಮಾಡಿದೆ.

ಮನಾನ್‌ ಅಪ್ಲೈಡ್ ಜಿಯೊಲಜಿ ಯಲ್ಲಿ ಸಂಶೋಧನೆ ನಡೆಸಿದ್ದು, ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರವಾಹ ಅಪಾಯವನ್ನು ಎದುರಿಸುವ ತನ್ನ ಸಂಶೋಧನಾ ಪ್ರಬಂಧ ಮಂಡಿಸಿ ಮೆಚ್ಚುಗೆಯನ್ನೂ ಪಡೆದಿದ್ದ. ಕಳೆದ ಕೆಲ ವರ್ಷಗಳಿಂದ ವಿದ್ಯಾರ್ಥಿ ರಾಜಕೀಯದಲ್ಲೂ ಸಕ್ರಿಯನಾಗಿದ್ದ.

ಈ ಹಿಂದೆ ಅನಂತ್‌ನಾಗ್‌ ನಲ್ಲಿ ಉಗ್ರ ಸಂಘಟನೆಗೆ ಸೇರಿಕೊಂಡಿದ್ದ ಕ್ರೀಡಾಪಟು ಮಜೀದ್‌ ಇರ್ಷಾದ್‌ ಖಾನ್‌ ಸಾಮಾಜಿಕ ತಾಣಗಳಲ್ಲಿ ತಾಯಿ ಕಣ್ಣೀರಿಡುತ್ತಿದ್ದ ದೃಶ್ಯ ಕಂಡು ಮನಕರಗಿ ವಾಪಾಸ್‌ ಬಂದಿದ್ದ. ಇದೀಗ ಮಾನಾನ್‌ ಏನು ಮಾಡುತ್ತಾನೆ ಎಂದು ಕಾದುನೋಡಬೇಕಾಗಿದೆ.

Comments are closed.