ರಾಷ್ಟ್ರೀಯ

ಕದ್ದ ಭೂಮಿಯಲ್ಲಿ ತಾಜ್ ಮಹಲ್ ನಿರ್ಮಾಣ: ಸುಬ್ರಮಣಿಯನ್ ಸ್ವಾಮಿ

Pinterest LinkedIn Tumblr


ನವದೆಹಲಿ: ಕಳ್ಳತನ ಮಾಡಿದ್ದ ಭೂಮಿಯಲ್ಲಿ ‘ತಾಜ್ ಮಹಲ್’ನ್ನು ನಿರ್ಮಾಣ ಮಾಡಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಬುಧವಾರ ಹೇಳಿದ್ದಾರೆ.
ತಾಜ್ ಮಹಲ್ ಕುರಿತಂತೆ ಎದ್ದಿರುವ ವಿವಾದ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಮೊಘಲರ ಸಾಮ್ರಾಜ್ಯವನ್ನಾಳಿದ ಸುಲ್ತಾನ ಷಹ ಜಹಾನ್ ಜೈಪುರ ರಾಜನಿಂದ ಭೂಮಿಯನ್ನು ಕಳ್ಳತನ ಮಾಡಿದ್ದ. ಆ ಭೂಮಿಯಲ್ಲಿ ತಾಜ್ ಮಹಲ್’ನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಸಾಬೀತು ಪಡಿಸಲು ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿದ್ದಾರೆ.
ಪ್ರಸ್ತುತ ತಾಜ್ ಮಹಲ್ ಇರುವ ಸ್ಥಳ ಜೈಪುರ ರಾಜ ಮಹಾರಾಜನಿಂದ ಬಲವಂತದಿಂದ ಪಡೆದುಕೊಂಡ ಭೂಮಿಯಾಗಿದೆ. ಈ ಬಗ್ಗೆ ಸಾಕಷ್ಟು ಪುರಾವೆ ಹಾಗೂ ದಾಖಲೆಗಳಿವೆ. ತಾಜ್ ಮಹಲ್ ಇರುವ ಸ್ಥಳವನ್ನು ರಾಜನಿಂದ ಪಡೆದುಕೊಂಡು ಅದಕ್ಕೆ ಪರಿಹಾರವಾಗಿ ಷಹ ಜಹಾನ್ ಕೆಲ ಗ್ರಾಮಗಳನ್ನು ನೀಡಿದ್ದ. ಇದರ ಆಸ್ತಿಯ ಮೌಲ್ಯಕ್ಕೆ ಹೋಲಿಸಿದರೆ ಆ ಗ್ರಾಮಗಳು ಏನೇನೂ ಅಲ್ಲ.
ಇದಲ್ಲದೆ, ತಾಜ್ ಮಹಲ್ ಇದ್ದ ಸ್ಥಳದಲ್ಲಿ ದೇಗುಲ ಇತ್ತು ಎಂಬುದನ್ನು ದಾಖಲೆಗಳೇ ಹೇಳುತ್ತವೆ. ಆದರೆ, ದೇಗಲುನ್ನು ಧ್ವಂಸಗೊಳಿಸಿ ತಾಜ್ ಮಹಲ್ ನಿರ್ಮಾಣ ಮಾಡಿರುವ ಕುರಿತು ಯಾವುದೇ ಸ್ಪಷ್ಟ ಮಾಹಿತಿಗಳಿಲ್ಲ ಎಂದು ತಿಳಿಸಿದ್ದಾರೆ.
ತಾಜ್ ಮಹಲ್ ನ್ನು ಧ್ವಂಸಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗಿಲ್ಲ. ಆದರೆ, ಮುಸ್ಲಿಮರ ಆಳ್ವಿಕೆಯಲ್ಲಿ ಮೂರು ದೇಗುಲಗಳು ನಾಶಗೊಂಡಿದ್ದವು ಎಂಬುದನ್ನು ತಿಳಿಸಲು ಇಚ್ಛಿಸುತ್ತೇವೆ. ಇಸ್ಲಾಮಿಕ್ ಅವಧಿಯಲ್ಲಿ ಧ್ವಂಸಗೊಳಿಸಲಾಗಿದ್ದ ಎಲ್ಲಾ ದೇಗುಲಗಳಲ್ಲಿ ಮೂರು ದೇಗುಲಗಳು ನಿರ್ಮಾಣವಾಗಬೇಕಿದೆ. ಅಯೋಧ್ಯೆಯಲ್ಲಿ ರಾಮ, ಮಥುರಾದಲ್ಲಿ ಕೃಷ್ಣ ಮತ್ತು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ದೇಗುಲ ನಿರ್ಮಾಣವಾಗಬೇಕಿದೆ. ಈ ಮೂರು ದೇಗುಲಗಳು ನಿರ್ಮಾಣವಾಗಿದ್ದೇ ಆದರೆ, ಉಳಿದ ಸಾವಿರಾರು ದೇಗುಲಗಳ ಬಗ್ಗೆ ನಾವು ಮಾತನಾಡುವುದಿಲ್ಲ ಎಂದಿದ್ದಾರೆ.

Comments are closed.