ಮಂಗಳೂರು: ಪುರುಷರ ಸಂತಾನೋತ್ಪತ್ತಿ ಕೋಶಗಳನ್ನು ವೀರ್ಯಗಳು ಎಂದು ಕರೆಯುತ್ತಾರೆ. ಬಹುಶಃ ಇದನ್ನು ನೀವು ನಿಮ್ಮ ಜೀವಶಾಸ್ತ್ರ ತರಗತಿಯಲ್ಲಿ ಕೇಳಿರುತ್ತೀರಿ. ವೀರ್ಯವು ಒಂದು ಅಂಡಾಣುವಿನ ಜೊತೆಗೆ ಸಂಯೋಗ ಹೊಂದಿ ಯುಗ್ಮ ಜೀವಾಣುವನ್ನು ರಚಿಸಬೇಕು. ನಂತರ ಇದು ಭ್ರೂಣವಾಗಿ ಅಭಿವೃದ್ಧಿಯಾಗುತ್ತದೆ. ಭ್ರೂಣವು ನಂತರ ಗರ್ಭವಾಗಿ ರೂಪುಗೊಳ್ಳುತ್ತದೆ. ಹೀಗೆ ಮಾನವನ ಜನನದಲ್ಲಿ ಇಷ್ಟೆಲ್ಲಾ ಪ್ರಮುಖ ಪಾತ್ರ ನಿರ್ವಹಿಸುವ ಭ್ರೂಣದ ಕುರಿತಾಗಿ ನಾವು ನಿಮಗೆ ಇಂದು ಕೆಲವೊಂದು ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತೇವೆ.
ವೀರ್ಯದ ಭಾಗಗಳು:
ವೀರ್ಯದ ಕೋಶಗಳು ಮೂರು ಭಾಗಗಳನ್ನು ಹೊಂದಿರುತ್ತದೆ. ಅವುಗಳೆಂದರೆ ತಲೆ, ಮಧ್ಯ-ಭಾಗ ಮತ್ತು ಬಾಲ. ದೋಷಪೂರಿತ ವೀರ್ಯಗಳು ಎರಡು ತಲೆಗಳನ್ನು, ಚಿಕ್ಕ ತಲೆಯನ್ನು, ಅಧಿಕ ಗಾತ್ರದ ತಲೆಯನ್ನು, ಬಾಗಿದ ಕುತ್ತಿಗೆ, ತೆಳುವಾದ ಮಧ್ಯ-ಭಾಗ, ಬಾಗಿದ, ಮುರಿದ, ಇಲ್ಲವೇ ಸುರುಳಿಯಾಕಾರದ ಅಥವಾ ಹಲವಾರು ಬಾಲಗಳನ್ನು ಹೊಂದಿರುತ್ತವೆ
ವೀರ್ಯದ ಗಾತ್ರ:
ಮಾನವನ ವೀರ್ಯವು ತಲೆಯಿಂದ ಬಾಲದವರೆಗೆ ಸುಮಾರು 50 ಮೈಕ್ರೋಮೀಟರ್ಗಳಷ್ಟು ಉದ್ದವಿರುತ್ತವೆ (0.05 ಮಿಲಿಮೀಟರ್, ಅಥವಾ ಅಂದಾಜು 0.002 ಇಂಚು).
ವೀರ್ಯದ ಉತ್ಪಾದನೆ:
ವೀರ್ಯಗಳು ವೃಷಣಗಳಲ್ಲಿ ಉತ್ಪಾದನೆಯಾಗುತ್ತದೆ. ವೀರ್ಯಗಳ ಆಯಸ್ಸು ಕಡಿಮೆ ಮತ್ತು ಅವುಗಳು ನಿರಂತರವಾಗಿ ಬದಲಾಗುತ್ತಾ ಇರುತ್ತದೆ. ವೀರ್ಯಗಳ ಉತ್ಪಾದನೆ ವೇಗವು ಪ್ರತಿ ಸೆಕೆಂಡ್ಗೆ 1,500 ವೀರ್ಯಗಳಾಗಿರುತ್ತವೆ.
ವೀರ್ಯದ ಪಕ್ವತೆ:
ಉತ್ಪತ್ತಿಯಾದ ಹೊಸ ವೀರ್ಯಗಳು ವೃಷಣಗಳಲ್ಲಿ ಪಕ್ವಗೊಳ್ಳಲು 2 ½ ರಿಂದ 3 ತಿಂಗಳುಗಳ ಕಾಲ ತೆಗೆದುಕೊಳ್ಳುತ್ತವೆ. ಇವುಗಳ ಆರಂಭಿಕ ಪಕ್ವಗೊಳ್ಳುವಿಕೆಯು ವೃಷಣಗಳ ಮೇಲ್ತುದಿಯಲ್ಲಿ ಸುರುಳಿಯಾಕಾರದಲ್ಲಿ ಕಾಣುವ ವೃಷಣನಾಳಸುರಳಿಯಲ್ಲಿ (ಎಪಿಡಿಡೈಮಿಸ್) ವೀರ್ಯಗಳು ಶೇಖರಣೆಗೊಂಡಾಗ ಆಗುತ್ತದೆ.
ವೀರ್ಯಗಳು ಅದ್ಭುತ ಈಜುಪಟುಗಳಾಗಿರುತ್ತವೆ :
ಅಂಡಾಣುವಿನ ಜೊತೆಗೆ ಸೇರಲು ವೀರ್ಯಗಳು ಗರ್ಭಕಂಠದ ಮೂಲಕ ಹಾದು ಫಲ್ಲೋಪಿಯನ್ ನಾಳಗಳಿಗೆ ತಲುಪಲು ಗರ್ಭಕೋಶದಲ್ಲಿ ಸುಮಾರು ಆರರಿಂದ ಎಂಟು ಇಂಚುಗಳವರೆಗೆ ಪ್ರಯಾಣ ಮಾಡಬೇಕಾಗಿರುತ್ತವೆ. ವೇಗವಾದ ವೀರ್ಯಗಳು ನಿಮಿಷಕ್ಕೆ 4-5 ಮಿ.ಮೀ ವೇಗದಲ್ಲಿ ಈಜುತ್ತವೆ. ಈ ವೇಗದಲ್ಲಿ ಈ ವೀರ್ಯಗಳು ಫಲ್ಲೋಪಿಯನ್ ನಾಳಗಳನ್ನು ತಲುಪಲು 45 ನಿಮಿಷ ಸಮಯ ತೆಗೆದುಕೊಳ್ಳುತ್ತವೆ. ಅದೇ ಸಮಯಕ್ಕೆ ನಿಧಾನವಾಗಿ ಈಜುವ ವೀರ್ಯಗಳು ಸುಮಾರು 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ವೀರ್ಯಗಳು ದೀರ್ಘಾವಧಿ ಬದುಕುಳಿಯುತ್ತವೆ:
ಒಮ್ಮೆ ವೀರ್ಯವು ಮಹಿಳೆಯ ದೇಹವನ್ನು ಪ್ರವೇಶಿಸಿದ ಮೇಲೆ ಸುಮಾರು ಮೂರು ದಿನಗಳ ಕಾಲ ಅದು ಅವರ ದೇಹದಲ್ಲಿಯೇ ಬದುಕುಳಿಯುತ್ತದೆ. ಅನುಕೂಲಕರವಾದ ಸ್ಥಿತಿಗಳಲ್ಲಿ, ಅವುಗಳು ಗರಿಷ್ಠ ಐದು ದಿನಗಳ ಕಾಲ ಬದುಕುಳಿಯುತ್ತವೆ. ಒಂದು ವೇಳೆ ಅವು ಫಲ್ಲೋಪಿಯನ್ ನಾಳವನ್ನು ತಲುಪಿದಾಗ ಅವುಗಳಿಗೆ ಅಲ್ಲಿ ಅಂಡಾಣುಗಳು ಕಂಡು ಬರದಿದ್ದಲ್ಲಿ, ಅವು ಅಂಡಾಣುವಿಗಾಗಿ ಸುಮಾರು ಐದು ದಿನಗಳ ಕಾಲ ಅಲ್ಲಿಯೇ ಕಾಯುತ್ತವೆ.
ಗಂಡು ಮತ್ತು ಹೆಣ್ಣು ವೀರ್ಯಗಳೆರಡು ಸಮಾನ ಅವಕಾಶಗಳನ್ನು ಹೊಂದಿರುತ್ತವೆ :
ವೀರ್ಯವು ಎಕ್ಸ್ ಅಥವಾ ವೈ ವರ್ಣತಂತು (ಕ್ರೋಮೋಸೋಮ್) ವನ್ನು ಸಾಗಿಸುತ್ತದೆ. ಒಂದು ವೇಳೆ ಎಕ್ಸ್ ವರ್ಣತಂತು ಅಂಡಾಣುವನ್ನು ಫಲವಂತಿಕೆ ಮಾಡಿದರೆ, ಆಗ ಹೆಣ್ಣು ಮಗು ಹುಟ್ಟುತ್ತದೆ. ಒಂದು ವೇಳೆ ವೈ ವರ್ಣತಂತು ಅಂಡಾಣುವನ್ನು ಫಲವಂತಿಕೆ ಮಾಡಿದರೆ ಗಂಡು ಮಗು ಹುಟ್ಟುತ್ತದೆ. ಎಕ್ಸ್ ವರ್ಣತಂತು ಅಂಡಾಣುವನ್ನು ತಲುಪಲು ಇರುವ ಅವಕಾಶದಷ್ಟೇ, ವೈ ವರ್ಣತಂತು ಅಂಡಾಣುವನ್ನು ತಲುಪಲು ಅವಕಾಶ ಪಡೆದಿರುತ್ತದೆ. ಈ ವಿಚಾರದಲ್ಲಿ ಇವೆರಡು ಸಮವಾಗಿರುತ್ತವೆ.
ವೀರ್ಯಗಳ ಮಾರ್ಗದರ್ಶನ :
ಒಮ್ಮೆ ಯೋನಿಯಲ್ಲಿ ವೀರ್ಯಗಳು ಬಿಡುಗಡೆಗೊಂಡರೆ, ಅವುಗಳು ಅಂಡಾಣುಗಳತ್ತ ಈಜುತ್ತಾ ಸಾಗುತ್ತವೆ. ವೀರ್ಯಗಳು ಗರ್ಭಕೋಶಕ್ಕೆ ಈಜಿಕೊಂಡು ಹೋದ ಮೇಲೆ ಅವುಗಳ ಮಾರ್ಗವು ಇಬ್ಭಾಗವಾಗುತ್ತವೆ. ಆಗ ಅವು ಫಲ್ಲೋಪಿಯನ್ ನಾಳದಲ್ಲಿ ಎಡಗಡೆ ಹೋಗಬೇಕೋ? ಅಥವಾ ಬಲಕ್ಕೆ ಹೋಗಬೇಕೋ? ಎಂದು ನಿರ್ಧಾರವಾಗುತ್ತದೆ. ನಾಳದ ಯಾವುದಾದರೂ ಒಂದು ಕಡೆ ಮಾತ್ರ ಅಂಡಾಣುಗಳು ಇರುತ್ತವೆ.
ವೀರ್ಯಗಳಿಗೆ ದಿಕ್ಕಿನ ಕುರಿತಾಗಿ ಯಾವುದೇ ಸಂವೇದನೆ ಅಥವಾ ಇಂದ್ರಿಯ ಶಕ್ತಿ ಇರುವುದಿಲ್ಲ. ಆದರೂ ಅವು ಗರ್ಭಕೋಶದಲ್ಲಿಅಸ್ತಿತ್ವದಲ್ಲಿರುವ ಮಾರ್ಗದರ್ಶನ ತಂತ್ರಗಳ ಆಧಾರದ ಮೇಲೆ ಸಾಗುತ್ತವೆ. ಮಾನವರಲ್ಲಿ ಇರುವ ಈ ಮಾರ್ಗದರ್ಶನ ತಂತ್ರಗಳನ್ನು ಥರ್ಮೊಟ್ಯಾಕ್ಸಿಸ್ ( ಉಷ್ಣಾಂಶದ ಗ್ರೇಡಿಯಂಟ್ಗೆ ಅಡ್ಡಲಾಗಿ ಈಜುವುದು), ರಿಯೊಟ್ಯಾಕ್ಸಿಸ್ (ದ್ರವದ ಹರಿಯುವಿಕೆಗೆ ವಿರುದ್ಧವಾಗಿ ಈಜುವುದು) ಮತ್ತು ಕಿಮೊಟ್ಯಾಕ್ಸಿಸ್ (ಅಂಡಾಣು ಸ್ರವಿಸಿರುವ ರಾಸಾಯನಿಕದತ್ತ ಆಕರ್ಷಿತವಾಗಿ ಈಜುವುದು).
ಅಂಡಾಣುಗಳಿಗಾಗಿ ಸ್ಪರ್ಧೆ :
ಒಮ್ಮೆ ವೀರ್ಯಗಳು ಅಂಡಾಣುಗಳನ್ನು ತಲುಪಿದ ಮೇಲೆ, ಅವುಗಳು ಅಂಡಾಣುವನ್ನು ಸುತ್ತುವರಿಯುತ್ತವೆ ಹಾಗು ಒಂದು ವೀರ್ಯವು ಮತ್ತೊಂದು ವೀರ್ಯವನ್ನು ಸೋಲಿಸಲು ಹೋರಾಡುತ್ತವೆ. ಯಾವಾಗ ಒಂದು ವೀರ್ಯವು ಅಂಡಾಣುವನ್ನು ಫಲವಂತಿಕೆ ಮಾಡುತ್ತದೆಯೋ, ಆಗ ಅದು ಕೆಲವೊಂದು ಪ್ರಕ್ರಿಯೆಗಳನ್ನುಂಟು ಮಾಡುತ್ತದೆ. ಇದರಿಂದ ಇತರೆ ವೀರ್ಯಗಳು ಆ ಫಲವಂತಿಕೆಯಾದ ಮೊಟ್ಟೆಗಳನ್ನು ಪ್ರವೇಶಿಸಲು ನಿರ್ಬಂಧಿಸುತ್ತದೆ.
ಪೂರ್ವ-ಸ್ಖಲನವು ಸಹ ವೀರ್ಯಗಳನ್ನು ಒಳಗೊಂಡಿರುತ್ತವೆ :
ಪೂರ್ವ-ಸ್ಖಲನ ದ್ರವವು (ಪ್ರಿ-ಕಮ್) ಸ್ಖಲನಕ್ಕೆ ಮೊದಲು ಅಂದರೆ ಭಾವ ಪ್ರಾಪ್ತಿ ಸಮಯದಲ್ಲಿ ಪುರುಷರ ಮೂತ್ರ ವಿಸರ್ಜನಾ ನಾಳದಿಂದ ಬಿಡುಗಡೆಯಾಗುವ ದ್ರವವಾಗಿರುತ್ತದೆ. ಈ ಸ್ರವಿಸುವಿಕೆಯು ಮೂತ್ರ ವಿಸರ್ಜನಾ ನಾಳದ ವಿವಿಧ ಸ್ಥಾನಗಳಲ್ಲಿ ಕಂಡು ಬರುವ ಕೌಪರ್ಸ್ ಗ್ರಂಥಿ ಮತ್ತು ಲಿಟ್ಟರ್ನ ಗ್ರಂಥಿಗಳಿಂದ ಬರುವ ಸ್ರವಿಸುವಿಕೆ ಎಂದು ಪರಿಗಣಿಸಲಾಗಿದೆ. ಇವುಗಳು ಪ್ರಮುಖವಾಗಿ ಹಲವಾರು ಕಿಣ್ವಗಳನ್ನು ಒಳಗೊಂಡಿರುವ ಆಲ್ಕಾಲೈನ್ ದ್ರವವನ್ನು ಮತ್ತು ಲೋಳೆಯನ್ನು ಒಳಗೊಂಡಿರುತ್ತದೆ. ಆದರೂ ಈ ಸ್ರವಿಸುವಿಕೆಗಳು ವೀರ್ಯಗಳನ್ನು ಒಳಗೊಂಡಿರುವುದಿಲ್ಲವಾದರೂ, ಕೆಲವೊಂದು ಸಂಶೋಧನಾ ಅಧ್ಯಯನಗಳು ಪೂರ್ವ-ಸ್ಖಲನ ದ್ರವವು ಸಹ ವೀರ್ಯಗಳಿಂದ ಕಲುಷಿತಗೊಂಡಿರುತ್ತವೆ ಮತ್ತು ಇವು ಗರ್ಭಧರಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ತಿಳಿಸಿವೆ.
ಉಷ್ಣಾಂಶವು ವೀರ್ಯಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ :
ಬೇಸಿಗೆ ಕಾಲದಲ್ಲಿ ವೀರ್ಯಗಳ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ ಮತ್ತು ಚಳಿಗಾಲದಲ್ಲಿ ಇದು ಹೆಚ್ಚಾಗಿರುತ್ತದೆ. ಅಧಿಕ ಉಷ್ಣಾಂಶಕ್ಕೆ ನಮ್ಮನ್ನು ನಾವು ಒಡ್ಡಿಕೊಂಡರೆ ಅದರಿಂದ ವೀರ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ. ಬಿಸಿ ನೀರಿನ ಸ್ನಾನದಿಂದ ಹಿಡಿದು, ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ಇರಿಸಿಕೊಂಡು ಕೆಲಸ ಮಾಡುವವರೆಗೆ ಯಾವುದೇ ಬಗೆಯ ಬಿಸಿಯು ನಮ್ಮ ದೇಹವನ್ನು ಸೋಕಿದಲ್ಲಿ, ಅದರಿಂದ ವೀರ್ಯಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ.