ಆರೋಗ್ಯ

ಹೆರಿಗೆಯ ನಂತರದ ದೇಹ ಸೌಂದರ್ಯ ಮತ್ತು ಆರೋಗ್ಯಕರ ತೂಕವನ್ನು ಪಡೆಯುವ ಬಗ್ಗೆ ಕೆಲವು ಸಲಹೆಗಳು.

Pinterest LinkedIn Tumblr

after_delvery_1

ಮಂಗಳೂರು: ಅರೆ ಮೊದಲಿನಂತಾಗಲು ಅಂದರೆ ಏನು? ಎಂದು ಆಶ್ಚರ್ಯಪಡಬೇಡಿ, ಮೊದಲಿನಂತಾಗುವುದು ಎಂದರೆ ನೀವು ಗರ್ಭಿಣಿಯಾಗುವ ಮೊದಲು ಇದ್ದ ದೇಹ ಸೌಂದರ್ಯ ಮತ್ತು ಅದೇ ಆರೋಗ್ಯಕರ ತೂಕವನ್ನು ಮತ್ತೆ ಪಡೆಯುವ ಪ್ರಕ್ರಿಯೆಯ ಕುರಿತು ನಾವು ಹೇಳುತ್ತಿದ್ದೇವೆ. ಏಕೆಂದರೆ ಗರ್ಭಿಣಿಯಾದಾಗ ನೀವು ಕೆಲವು ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡಿರುತ್ತೀರಿ. ಅರೆ ಮಗುವಾದ ಮೇಲೆ ಹೇಗಪ್ಪಾ ಆ ಅಧಿಕ ತೂಕವನ್ನು ಕರಗಿಸುವುದು ಎಂದು ಚಿಂತೆ ಮಾಡಬೇಡಿ. ಸ್ವಲ್ಪ ದೃಢ ನಿರ್ಧಾರ ಮತ್ತು ಪರಿಶ್ರಮದ ಮೂಲಕ ನೀವು ಗರ್ಭಿಣಿಯಾಗಿದ್ದಾಗ ಪಡೆದ ತೂಕವನ್ನೆಲ್ಲಾ ಕರಗಿಸಿಕೊಳ್ಳಬಹುದು. ಬನ್ನಿ ಅದಕ್ಕೆ ಏನು ಮಾಡಬೇಕು ಎಂದು ತಿಳಿಯೋಣ.

* ಎದ್ದೇಳಿ ಮತ್ತು ಓಡಾಡಿ:
ನೀವು ಈಗ ತಾನೇ ತಾಯಿಯಾಗಿದ್ದೀರಿ, ನಿದ್ರೆಯನ್ನು ಸರಿಯಾಗಿ ಮಾಡುತ್ತಿಲ್ಲ, ತಾಯ್ತನದ ಕಷ್ಟ-ಸುಖಗಳನ್ನು ಅನುಭವಿಸುತ್ತಾ ಇದ್ದೀರಿ, ನಿಮ್ಮ ಮನೆಯಲ್ಲಿ ಬಾಣಂತಿಗೆ ನೀಡುವ ಆಹಾರವನ್ನು ಮಾತ್ರ ನಿಮಗೆ ನೀಡುತ್ತಿದ್ದೀರಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಆಯಾಸಗೊಂಡಿದ್ದೀರಿ ಎಂದು ನಮಗೆ ಗೊತ್ತು. ಆದರೆ ನೀವು ನಿಮ್ಮ ದೇಹವನ್ನು ಮತ್ತೆ ಫಿಟ್ ಆಗಿ ಇರಿಸಿಕೊಳ್ಳಬೇಕು ಎಂದರೆ ಮಗುವಿಗೆ ಜನ್ಮ ನೀಡಿದ ಆರು ವಾರಗಳವರೆಗೆ ಕಾಯಿರಿ. ಆಮೇಲೆ ಸಣ್ಣ ಪ್ರಮಾಣದಲ್ಲಿ ನಿಮ್ಮ ಮನೆಯ ಸುತ್ತ-ಮುತ್ತ ನಡೆಯಲು ಆರಂಭಿಸಿ. ಇದರಿಂದ ನಿಮ್ಮ ದೇಹದಲ್ಲಿ ಸಂತೋಷವನ್ನು ಉಂಟು ಮಾಡುವ ಎಂಡೋರ್ಫಿನ್‌ಗಳು ಬಿಡುಗಡೆಯಾಗುತ್ತವೆ. ಇದರಿಂದ ನಿಮ್ಮ ದೇಹದಲ್ಲಿ ಒಂದೆರಡು ಕೆ.ಜಿ ತೂಕ ಕಡಿಮೆಯಾಗುತ್ತದೆ. ಈ ಪದ್ಧತಿಯು ನಿಮಗೆ ಅನುಕೂಲಕರವಾದಲ್ಲಿ, ಇದರ ವೇಗ ಮತ್ತು ಸಮಯ ಹಾಗು ತೀವ್ರತೆಯನ್ನು ನೀವು ಹೆಚ್ಚಿಸಬಹುದು.

* ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತೂಕ ಎತ್ತಿ :
ಮನೆ ಕೆಲಸ, ನಿಮ್ಮ ಮಗು ಹಾಗು ನಿಮ್ಮ ವೃತ್ತಿಯನ್ನು ಮಾಡಲು ನಿಮ್ಮಲ್ಲಿರುವ ಎಲ್ಲಾ ಸಾಮರ್ಥ್ಯವನ್ನು ನೀವು ಈಗ ಪಣಕ್ಕಿಡುವ ಕಾಲ ಬಂದಿದೆ. ನಿಮ್ಮ ದೇಹದಲ್ಲಿರುವ ಎಲ್ಲಾ ಶಕ್ತಿ ಹಾಗು ಸಾಮರ್ಥ್ಯವನ್ನು ಒಟ್ಟುಗೂಡಿಸಿ ನೀವು ಕೆಲಸ ಮಾಡಬೇಕಾಗುತ್ತದೆ. ಮಧ್ಯಮ ಗಾತ್ರದ ತೂಕಗಳನ್ನು ವಾರದಲ್ಲಿ 3-4 ಬಾರಿ ಎತ್ತುವುದರಿಂದ ನೀವು ಸಣ್ಣಗಾಗಲು ಸಹಾಯವಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಯ ಭಾಗದಲ್ಲಿರುವ ಬೊಜ್ಜನ್ನು ಕರಗಿಸಬಹುದು ಮತ್ತು ಸ್ನಾಯುಗಳನ್ನು ಬಲಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ನೀವು ಫಿಟ್ ಅಷ್ಟೇ ಅಲ್ಲ, ಶಕ್ತಿಶಾಲಿ ಸಹ ಆಗುತ್ತೀರಿ.

after_delvery_2

* ಆರೋಗ್ಯಕರವಾಗಿರುವ ಆಹಾರ ಸೇವಿಸಿ:
ನೀವು ಬಾಣಂತಿಯಾಗಿರುವಾಗ ಸೇವಿಸುವ ಆಹಾರದ ಕುರಿತಾಗಿ ಗಮನವಹಿಸಿ. ಮಗುವಿಗೆ ಹಾಲು ಕುಡಿಸಿ ಅಥವಾ ಬಿಡಿ, ಉಪವಾಸ ಇದ್ದು ತೂಕ ಕಡಿಮೆ ಮಾಡಿಕೊಳ್ಳುತ್ತೀನಿ ಎಂದು ಮಾತ್ರ ಹೋಗಬೇಡಿ. ಪಿಜ್ಜಾಗಳು, ಬರ್ಗರ್‌ಗಳು, ಫ್ರೈಗಳು ಮತ್ತು ಸಿಹಿ ತಿಂಡಿಗಳನ್ನು ಸೇವಿಸಲು ಹೋಗಬೇಡಿ. ಇವುಗಳು ನಿಮ್ಮ ತೂಕವನ್ನು ಮತ್ತೂ ಹೆಚ್ಚಿಸುತ್ತವೆ. ಹೈನು ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು ಮತ್ತು ವೋಲ್ ಗ್ರೇನ್‌ಗಳನ್ನು ಆಹಾರವಾಗಿ ಸೇವಿಸಿ. ಪ್ರತಿ ಎರಡು ಗಂಟೆಗಳಿಗೊಮ್ಮೆ ಊಟ ಮಾಡಿ ಮತ್ತು ಯಥೇಚ್ಛವಾಗಿ ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸಿ. ಇದು ನೀವು ಯಾವುದೇ ಬಗೆಯ ವ್ಯಾಯಾಮ ಮಾಡಿದರೂ ಅದರಿಂದ ಪ್ರಯೋಜನ ಪಡೆಯಲು ಸಹಾಯವಾಗುತ್ತದೆ.

sleep

* ಸೂಕ್ತವಾಗಿ ವಿಶ್ರಾಂತಿಯನ್ನು ಪಡೆಯಿರಿ:
ಸುಸ್ತಾದ, ಆಯಾಸದಿಂದ ಬಳಲುವ ತಾಯಂದಿರು ತೂಕ ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ಹಿಂದುಳಿಯುತ್ತಾರೆ. ನಿಮ್ಮ ದೇಹದಲ್ಲಿರುವ ಹೆಚ್ಚುವರಿ ತೂಕ ಕರಗಬೇಕು ಎಂದರೆ, ನೀವು ಹೆಚ್ಚಿನ ಪ್ರಮಾಣದಲ್ಲಿ ವಿಶ್ರಾಂತಿಯನ್ನು ಪಡೆಯಬೇಕಾಗುತ್ತದೆ. ನಿಮ್ಮ ಮಗುವನ್ನು ನೋಡಿಕೊಳ್ಳಲು ಯಾರ ಸಹಾಯವನ್ನಾದರೂ ಪಡೆದುಕೊಂಡು, ನೀವು ವಿಶ್ರಾಂತಿ ತೆಗೆದುಕೊಳ್ಳಿ. ದಿನದ ಸಮಯದಲ್ಲಿ ಸಣ್ಣ ಬೆಕ್ಕು ನಿದ್ರೆಯನ್ನು ಮಾಡಿದರೂ ಸಾಕು ಅದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನ ದೊರೆಯುತ್ತದೆ. ಇದು ನಿಮ್ಮ ಮೂಡ್ ಮೇಲೆ ಸಹ ಉತ್ತಮ ಪರಿಣಾಮವನ್ನು ಬೀರುತ್ತದೆ. ನಿದ್ದೆ ಮಾಡುವುದರಿಂದ ಸುಮ್ಮನೆ ತಿನ್ನಬೇಕು ಎಂಬ ಚಪಲವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.

* ನಿಮ್ಮ ವರ್ಕ್‌ಔಟ್‌ನಲ್ಲಿ ವಿಭಿನ್ನತೆಯನ್ನು ಸೇರಿಸಿ:
ತೂಕ ಎತ್ತುವುದು ಪ್ರತಿಯೊಬ್ಬರಿಗೂ ಹೊಂದಿಕೊಳ್ಳುವುದಿಲ್ಲ. ಅದಕ್ಕಾಗಿ ಪರಿಣಾಮಕಾರಿಯಾದ ಬದಲಿ ಕ್ರಮಗಳನ್ನು ಅನುಸರಿಸಿ. ಯೋಗ, ಈಜುವಿಕೆ ಮತ್ತು ಸೈಕ್ಲಿಂಗ್‌ನಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಈ ಚಟುವಟಿಕೆಗಳು ನಿಮ್ಮ ಕೀಲುಗಳನ್ನು ಹಗುರಗೊಳಿಸುತ್ತವೆ ಮತ್ತು ನಿಮಗೆ ವಿನೋದವನ್ನು ಸಹ ನೀಡುತ್ತವೆ. ನಿಮ್ಮ ವೈದ್ಯರು ಹಸಿರು ನಿಶಾನೆ ತೋರಿದಲ್ಲಿ, ನೀವು ಏರೋಬಿಕ್ಸ್ ಮತ್ತು ಓಟದಂತಹ ಹೈ ಎಂಡ್ ವ್ಯಾಯಾಮಗಳನ್ನು ಸಹ ಮಾಡಬಹುದು.

* ಒಂದೇ ದಿನದಲ್ಲಿ ಬದಲಾವಣೆಗಳನ್ನು ಹುಡುಕಬೇಡಿ:
ನೀವು ಈಗ ಇರುವ ತೂಕವು ಒಂಬತ್ತು ತಿಂಗಳಿನ ಫಲ ಎಂಬುದನ್ನು ಮರೆಯಬೇಡಿ. ಹಾಗೆಯೇ ನಿಮ್ಮ ದೇಹದಲ್ಲಿನ ಅಧಿಕ ತೂಕವನ್ನು ಕರಗಿಸಬೇಕು ಎಂದಲ್ಲಿ, ಸ್ವಲ್ಪ ಸಮಯವಾಗುತ್ತದೆ ಎಂಬುದನ್ನು ಸಹ ಮರೆಯಬೇಡಿ. ಮುಖ್ಯವಾಗಿ ಮೊದಲು ನೀವು ಈ ಹೊಸ ಜೀವನಕ್ಕೆ ಹೊಂದಿಕೊಳ್ಳಿ. ನಿಮ್ಮ ಮಗುವಿನ ಜೊತೆಗೆ ಖುಷಿಯಿಂದ ಕಾಲ ಕಳೆಯಿರಿ. ಒತ್ತಡಕ್ಕೆ ಒಳಗಾಗಬೇಡಿ. ನಿಮಗೆ ಎದುರಾಗಿರುವ ಈ ಹೆಚ್ಚು ತೂಕದ ತೊಡಕನ್ನು ನಿವಾರಿಸಿಕೊಳ್ಳಲು ಮಾರ್ಗಗಳು ಕಂಡೇ ಕಾಣುತ್ತವೆ.

Comments are closed.