ಮಂಗಳೂರು: ಆಯುರ್ವೇದ ಜಗತ್ತಿನಲ್ಲಿ ಅತ್ಯಂತ ದುಬಾರಿ ಎನಿಸಿದ ಹಲವು ವಸ್ತುಗಳು ನಮ್ಮ ಹಿತ್ತಲಲ್ಲೇ ಬೆಳೆಯುತ್ತಿರುತ್ತವೆ. ಆದರೆ ನಮಗೆ ಅದರ ಕಲ್ಪನೆ ಇರುವುದಿಲ್ಲ. ಅಂಥ ವಸ್ತುಗಳಲ್ಲಿ ಅಲೋವೆರಾ (ಲೋಳೆರಸ) ಒಂದು. ಇದರ ಆರೋಗ್ಯ ಪ್ರಯೋಜನಗಳು ಅಸಂಖ್ಯಾತ. ಹಲವು ಆಯುರ್ವೇದ ಔಷಧಿಗಳಲ್ಲಿ ಇದರ ಬಳಕೆ ಇದೆ. ಆಹಾರ, ವೈದ್ಯಕೀಯ ಹಾಗೂ ಸೌಂದರ್ಯವರ್ಧಕ ಉದ್ಯಮದಲ್ಲೂ ಇದರ ಬಳಕೆ ವ್ಯಾಪಕ. ಇದರ ಪ್ರಯೋಜನಗಳನ್ನು ಹಲವು ವೈಜ್ಞಾನಿಕ ಸಂಶೋಧನೆಗಳು ಎತ್ತಿಹಿಡಿದಿವೆ. ಇಂಥ ಪ್ರಮುಖ ಏಳು ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1.ದೇಹಕ್ಕೆ ಅಗತ್ಯವಾದ ಅಧಿಕ ಖನಿಜಾಂಶ ಹಾಗೂ ಜೀವಸತ್ವಗಳು ಅಲೋವೆರಾ ರಸದಲ್ಲಿವೆ. ವಿಟಮಿನ್ ಬಿ ವ್ಯಾಪಕವಾಗಿರುವ ಅಲೋವೆರಾ ರಸ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದನ್ನು ನೇರವಾಗಿ ಅಥವಾ ನೆಲ್ಲಿ, ತುಳಸಿರಸದ ಜತೆಗೂ ಸೇವಿಸಬಹುದು.
2. ಅಜೀರ್ಣ, ವಾಂತಿ, ಅಸಿಡಿಟಿ ಹಾಗೂ ಗ್ಯಾಸ್ಟ್ರಬಲ್ ಸಮಸ್ಯೆಗಳಿಗೂ ಅಲೋವೆರಾ ರಸದ ನಿತ್ಯಸೇವನೆ ರಾಮಬಾಣ, ತೂಕ ಹೆಚ್ಚದಂತೆ ಕೂಡಾ ಇದು ತಡೆಯುತ್ತದೆ.
3. ನಮ್ಮ ದೇಹದಿಂದ ವಿಷಾಂಶವನ್ನು ಹೊರಹಾಕುವಲ್ಲೂ ಇದು ಪ್ರಯೋಜನಕಾರಿ. ಮುಂಜಾನೆ ಅಲೋವೆರಾ ರಸ ಸೇವನೆ ಇಡೀ ನಮ್ಮ ಜೀರ್ಣ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ.
4. ರಕ್ತಹೀನತೆಗೂ ಇದು ಒಳ್ಳೆಯ ಮದ್ದು. ಕುಮಾರಿ ಆಸವ ಹೆಸರಿನ ಔಷಧಿಯಲ್ಲಿ ಅಲೋವೆರಾ ಅಧಿಕ ಪ್ರಮಾಣದಲ್ಲಿದೆ. ಜತೆಗೆ ಲಿವರ್ ಸಮಸ್ಯೆ, ಜಾಂಡಿಸ್ನಂಥ ರೋಗಗಳಿಗೂ ಇದು ಪ್ರಯೋಜನಕಾರಿ.
5. ರಸದೂತ (ಹಾರ್ಮೋನ್) ಸಮತೋಲನದಲ್ಲೂ ಇದು ಪ್ರಮುಖಪಾತ್ರ ವಹಿಸುತ್ತದೆ. ನಿದ್ರಾಹೀನತೆಗೂ ಇದು ಒಳ್ಳೆಯ ಔಷಧ.
6. ಚರ್ಮ ಹಾಗೂ ಕೂದಲಿಗಂತ ಅಲೋವೆರಾ ಅತ್ಯುತ್ತಮ ಔಷಧ. ಕೂದಲು ಹಾಗೂ ತ್ವಚೆ ನಯವಾಗಿರಲು ಇದನ್ನು ಬಳಸಲಾಗುತ್ತದೆ, ಆರ್ದ್ರತೆಯ ಸಮಸ್ಯೆಗೂ ಇದು ಪರಿಹಾರವಾಗಿದ್ದು, ತೇವಾಂಶ ಹೆಚ್ಚಿಸುವ ಸಾಧನವಾಗಿ ಬಳಕೆಯಾಗುತ್ತದೆ.
7. ಅಂತಿಮವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಅಲೋವೆರಾ ಹೆಚ್ಚಿಸುತ್ತದೆ. ಅದರಲ್ಲೂ ನೆಲ್ಲಿ, ತುಳಸಿ ರಸದ ಜತೆಗೆ ಸೇರಿಸಿ ಬಳಸುವುದು ಹೆಚ್ಚು ಪರಿಣಾಮಕಾರಿ.