ಕರಾವಳಿ

ಫವರ್ ಲಿಫ್ಟರ್ ವಿಶ್ವನಾಥ್‌ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಪ್ರಯತ್ನ: ಸಚಿವ ಕೋಟ(Video)

Pinterest LinkedIn Tumblr

ಕುಂದಾಪುರ: ಕೆನಡದಲ್ಲಿ ನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ನಲ್ಲಿ ತಲಾ 2 ಚಿನ್ನ, ಬೆಳ್ಳಿ ಪದಕಗಳ ಸಾಧನೆ ಮಾಡಿ ದೇಶಕ್ಕೆ ಹೆಸರು ಗಳಿಸಿಕೊಟ್ಟ ಕುಂದಾಪುರದ ದೇವಲ್ಕುಂದ ಗ್ರಾಮದ ವಿಶ್ವನಾಥ ಭಾಸ್ಕರ ಗಾಣಿಗ ಬಾಳಿಕೆರೆ ಅವರಿಗೆ ರಾಜ್ಯ ಸರಕಾರದಿಂದ ನಗದು ಪುರಸ್ಕಾರ, ಉದ್ಯೋಗ, ಮಾತ್ರವಲ್ಲದೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲು ಪ್ರಯತ್ನಿಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಶ್ವನಾಥ ಗಾಣಿಗ ಅವರ ಬಾಳಿಕೆರೆಯ ನಿವಾಸದಲ್ಲಿ ರಾಜ್ಯ ಸರಕಾರದ ಪರವಾಗಿ ಸಮ್ಮಾನಿಸಿ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಮನ್‌ವೆಲ್ತ್‌ ನಲ್ಲಿ ಪವರ್‌ ಲಿಫ್ಟಿಂಗ್‌ನಲ್ಲಿ ದಾಖಲೆ ನಿರ್ಮಿಸಿ ದೇಶಕ್ಕೆ, ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹೆಸರು ತಂದುಕೊಟ್ಟ ವಿಶ್ವನಾಥ ಗಾಣಿಗರ ಸಾಧನೆ ಅತ್ಯಂತ ಶ್ರೇಷ್ಟವಾಗಿದೆ. ಬಡ ಕುಟುಂಬದ ಈ ಸಾಧಕನಿಗೆ ಸರಕಾರದಿಂದ ನಗದು ಪುರಸ್ಕಾರ, ಉದ್ಯೋಗದ ಜತೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲು ಪ್ರಯತ್ನಿಸುವೆ. ಇದಕ್ಕಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ತತ್‌ಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ, ಕ್ರೀಡಾ ಸಚಿವ ಈಶ್ವರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದರು.

ಕ್ರೀಡಾ ಸಾಧಕನನ್ನು ಜಿಲ್ಲಾಡಳಿತ ನಿರ್ಲಕ್ಷಿಸಿದೆ ಎಂಬ ಆರೋಪವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಡಳಿತ ಬೇರೆಯಲ್ಲ, ಸರಕಾರ ಬೇರೆಯಲ್ಲ. ಈಗ ಅವರನ್ನು ಸರಕಾರದ ಪ್ರತಿನಿಧಿಯಾಗಿ ಗೌರವಿಸಿದ್ದೇನೆ. ಸರಕಾರದಿಂದ ಎಲ್ಲ ರೀತಿಯ ಗೌರವ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಇದೇ ಸಂದರ್ಭ ಕ್ರಿಕೇಟಿಗೆ ಮಾನ್ಯತೆ ನೀಡುವ ಹಾಗೆಯೇ ಒಲಿಂಪಿಕ್ಸ್‌ ಅಲ್ಲದ ಇತರ ಕ್ರೀಡೆಗಳಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೂ ಹಿಂದೆ ಇದ್ದಂತೆ ರಾಜ್ಯದಲ್ಲಿ ಪ್ರಾಶಸ್ತ ನೀಡಬೇಕು ಎಂದು ವಿಶ್ವನಾಥ್‌ ಗಾಣಿಗ ಅವರು ಸಚಿವರಿಗೆ ಮನವಿ ಮಾಡಿದರು. ಅಲ್ಲದೇ ಸ್ಥಳೀಯ ಸಂಘಟನೆಯವರು ಕೂಡ ಸಚಿವರಿಗೆ ಈ ಬಗ್ಗೆ ಮನವಿ ನೀಡಿ ವಿಶ್ವನಾಥ ಗಾಣಿಗರಿಗೆ ಪ್ರೋತ್ಸಾಹ ಧನ ಹಾಗೂ ಸರಕಾರಿ ಉದ್ಯೋಗ ಕೊಡಿಸುವಂತೆ ಮನವಿ ಸಲ್ಲಿಸಿದರು.

ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್‌, ತಾ.ಪಂ. ಸದಸ್ಯ ಕರಣ್‌ ಪೂಜಾರಿ, ಗುಲ್ವಾಡಿ ಗ್ರಾ.ಪಂ. ಸದಸ್ಯ ಸುದೇಶ್‌ ಶೆಟ್ಟಿ ಕರ್ಕಿ, ಗಾಣಿಗ ಸಮಾಜದ ಪ್ರಮುಖರಾದ ಕೊಗ್ಗ ಗಾಣಿಗ, ಗಣೇಶ್‌ ಗಾಣಿಗ, ರವಿ ಗಾಣಿಗ, ನೆಂಪುವಿನ ಶ್ರೀ ವಿನಾಯಕ ಯುವಕ ಸಂಘದ ಸಂತೋಷ, ಮಂಜುನಾಥ, ಜಗದೀಶ್‌ ನೆಂಪು , ಅನಿಲ್ ಬಾಳಿಕೆರೆ ಹಾಗೂ ಬಾಳಿಕೆರೆ ಗ್ರಾಮಸ್ಥರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.