ಕ್ರೀಡೆ

ವಿರಾಟ್ ಕೊಹ್ಲಿ ಅಬ್ಬರ; ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ

Pinterest LinkedIn Tumblr

ಮೊಹಾಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಬ್ಬರ ಮುಂದುವರೆದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ನಿನ್ನೆ ಮೊಹಾಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದ ವಿರಾಟ್ ಕೊಹ್ಲಿ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಅಜೇಯ 72 ರನ್ ಸಿಡಿಸಿದ ವಿರಾಟ್ ಕೊಹ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಈ ಪಂದ್ಯದ ಅಮೋಘ ಇನ್ನಿಂಗ್ಸ್ ಮೂಲಕ ಕೊಹ್ಲಿ ಟಿ20 ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ರನ್ ಗಳಿಕೆಯನ್ನು 2440ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಟಿ20 ಯಲ್ಲಿ ಗರಿಷ್ಛ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ ಆಟಗಾರ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದು, ರೋಹಿತ್ ಒಟ್ಟು 2434 ರನ್ ಗಳಿಸಿದ್ದಾರೆ. ಆ ಮೂಲಕ ಕೇವಲ 6 ರನ್ ಗಳ ಅಂತರದಲ್ಲಿ ಅಗ್ರಸ್ಥಾನದಿಂದ ವಂಚಿತರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 12 ರನ್ ಗಳಿಸಿದ್ದರು. ಉಳಿದಂತೆ 2283 ರನ್ ಗಳಿಸಿರುವ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್ 3ನೇ ಸ್ಥಾನದಲ್ಲಿದ್ದು, 2263 ರನ್ ಗಳಿಸಿರುವ ಪಾಕಿಸ್ತಾನದ ಆಲ್ ರೌಂಡರ್ ಶೊಯೆಬ್ ಮಲ್ಲಿಕ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 2140ರನ್ ಗಳಿಸಿರುವ ಮತ್ತೋರ್ವ ಕಿವೀಸ್ ಆಟಗಾರ ಮೆಕ್ಕಲಮ್ ಐದನೇ ಸ್ಥಾನದಲ್ಲಿದ್ದಾರೆ.

Comments are closed.