ಕ್ರೀಡೆ

ನೀವು ಒಬ್ಬ ದಿಗ್ಗಜ ಆಟಗಾರ, ನಿಮ್ಮ ಯಶಸ್ಸಿನ ಓಟ ಹೀಗೆಯೇ ಮುಂದುವರಿಯಲಿ ಎಂದು ಕೊಹ್ಲಿಗೆ ಹಾರೈಸಿದ ಅಫ್ರಿದಿ

Pinterest LinkedIn Tumblr

ಕರಾಚಿ: ನೀವು ಒಬ್ಬ ದಿಗ್ಗಜ ಆಟಗಾರ. ಟೆಸ್ಟ್​, ಏಕದಿನ ಹಾಗೂ ಟಿ20 ಮಾದರಿಗಳಲ್ಲಿ 50ರ ಸರಾಸರಿ ಹೊಂದಿದ್ದೀರಿ. ನಾಯಕರಾಗಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿದ್ದೀರಿ. ನಿಮಗೆ ಅಭಿನಂದನೆಗಳು. ನಿಮ್ಮ ಯಶಸ್ಸಿನ ಓಟ ಹೀಗೆಯೇ ಮುಂದುವರಿಯಲಿ ಎಂದು ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಅವರನ್ನು ಅಭಿನಂದಿಸಿ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹೀದ್​ ಅಫ್ರಿದಿ ಟ್ವೀಟ್​ ಮಾಡಿದ್ದಾರೆ.

ಚಂಡಿಗಢದಲ್ಲಿ ಬುಧವಾರ ನಡೆದ ಟಿ20 ಕ್ರಿಕೆಟ್​ ಸರಣಿಯ 2ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 7 ವಿಕೆಟ್​ಗಳ ಜಯ ತಂದುಕೊಡಲು ವಿರಾಟ್​ ಕೊಹ್ಲಿ ನೆರವಾಗಿದ್ದರು. 52 ಎಸೆತಗಳಲ್ಲಿ ಇವರ ಬ್ಯಾಟ್​ನಿಂದ ಸಿಡಿದ 72 ರನ್​ಗಳು ಇದಕ್ಕೆ ನೆರವಾಗಿದ್ದವು. ಟಿ20 ಮಾದರಿಯಲ್ಲಿ ಕೊಹ್ಲಿ ಸಿಡಿಸಿದ 22ನೇ ಅರ್ಧಶತಕ ಇದಾಗಿತ್ತು. ತನ್ಮೂಲಕ ಅವರು ಅತಿಹೆಚ್ಚು ಅರ್ಧಶತಕ ಸಿಡಿಸಿದ ರೋಹಿತ್​ ಶರ್ಮ ಅವರ ದಾಖಲೆಯನ್ನು ಅಳಿಸಿದರು. ಇದರೊಂದಿಗೆ 71 ಪಂದ್ಯಗಳಿಂದ 2,441 ರನ್​ ಗಳಿಸಿರುವ ಕೊಹ್ಲಿ ಅವರ ಬ್ಯಾಟಿಂಗ್​ ಸರಾಸರಿ 50 ಅನ್ನು ದಾಟಿತು.

ಕೊಹ್ಲಿ ಅವರ ಈ ವಿಶಿಷ್ಟ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಡಿದ್ದ ಟ್ವೀಟ್​ ಅನ್ನು ಮರುಟ್ವೀಟ್​ ಮಾಡುವ ಜತೆಗೆ ಅಫ್ರಿದಿ, ಜಾಗತಿಕ ಅಭಿಮಾನಿ ಬಳಗವನ್ನು ಮನರಂಜಿಸುವುದನ್ನು ಮುಂದುವರಿಸಿ ಎಂದು ಕೊಹ್ಲಿಗೆ ಹಾರೈಸಿದ್ದಾರೆ.

ಕೊಹ್ಲಿ ಅವರನ್ನು ಅಫ್ರಿದಿ ಅಭಿನಂದಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅವರು ಸಾಕಷ್ಟು ಬಾರಿ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ. ಅಫ್ರಿದಿ ಅವರು ತಾವು ಆಯ್ಕೆ ಮಾಡಿರುವ ತಮ್ಮ ಸಾರ್ವಕಾಲಿಕ ಶ್ರೇಷ್ಠ ಏಕದಿನ ವಿಶ್ವಕಪ್​ ತಂಡದಲ್ಲಿ ಎಸ್​.ಎಸ್​. ಧೋನಿ ಹಾಗೂ ಸಚಿನ್​ ತೆಂಡುಲ್ಕರ್​ಗೆ ಸ್ಥಾನ ಕೊಡದೆ ಕೇವಲ ಕೊಹ್ಲಿ ಅವರಿಗೆ ಸ್ಥಾನ ಕೊಟ್ಟಿದ್ದಾರೆ.

Comments are closed.