ಕ್ರೀಡೆ

ಐಸಿಸಿ ವಿಶ್ವಕಪ್ 2019: ಭಾರತಕ್ಕೆ ಮೊದಲ ಸೋಲಿನ ರುಚಿ ತೋರಿಸಿದ ಇಂಗ್ಲೆಂಡ್ !

Pinterest LinkedIn Tumblr

ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಇಂಗ್ಲೆಂಡ್ ತಂಡ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇಂಗ್ಲೆಂಡ್ ನೀಡಿದ 338 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 306 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 31 ರನ್ ಗಳ ಅಂತರದಲ್ಲಿ ಇಂಗ್ಲೆಂಡ್ ಗೆ ಶರಣಾಯಿತು.

338 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ಕ್ರಿಸ್ ವೋಕ್ಸ್ ಆರಂಭಿಕ ಆಘಾತ ನೀಡಿದರು. ಕೆಎಲ್ ರಾಹುಲ್ ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭಾರತ ತಂಡದ ಪತನಕ್ಕೆ ಕಾರಣರಾದರು. ಆ ಬಳಿಕ ರೋಹಿತ್ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಂತೆಯೇ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಕೊಹ್ಲಿ 76 ಎಸೆತಗಳಲ್ಲಿ 66 ರನ್ ಗಳಿಸಿ ಪ್ಲಂಕೆಟ್ ವಿಕೆಟ್ ಒಪ್ಪಿಸಿದರು. ಅಷ್ಟು ಹೊತ್ತಿಗಾಗಲೇ ರೋಹಿತ್ ಶರ್ಮಾ ಕೂಡ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗಿದ್ದರು.

ರಿಷಬ್ ಪಂತ್ ಜೊತೆಗೂಡಿಗ ರೋಹಿತ್ ಶರ್ಮಾ 109 ಎಸೆತಗಳಲ್ಲಿ 102 ರನ್ ಗಳಿಸಿ ಮತ್ತೆ ಕ್ರಿಸ್ ವೋಕ್ಸ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ರಿಷಬ್ ಪಂತ್ ಕೂಡ 32 ರನ್ ಗಳಿಸಿ ಪ್ಲಂಕೆಟ್ ಗೆ ಬಲಿಯಾದರು. ಧೋನಿ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಭರ್ಜರಿ ಹೊಡೆತಗಳ ಮೂಲಕ 45 ರನ್ ಗಳಿಸಿ ಅರ್ಧಶತಕದ ಹೊಸ್ತಿಲಿಗೆ ಬಂದರಾದರೂ, ಪ್ಲಂಕೆಟ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಬಂದ ಧೋನಿ ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿ ನಿಂತರಾದರೂ, ಭಾರತ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 306 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 31 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಟೂರ್ನಿಯಲ್ಲಿ ಇಲ್ಲಿಯವರೆಗೂ ಅಜೇಯವಾಗಿ ಉಳಿದಿದ್ದ ಭಾರತ ತಂಡಕ್ಕೆ ಇದು ಮೊದಲ ಸೋಲಾಗಿದೆ.

Comments are closed.