ಲಂಡನ್: ಭಾರತೀಯ ಬ್ಯಾಂಕ್ ಗಳಿಗೆ ಬಹುಕೋಟಿ ವಂಚನೆ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಇಂದು ಲಂಡನ್ ನಲ್ಲಿ ಮಾಧ್ಯಮಗಳ ಕ್ಯಾಮೆರಾಗಳ ಕಣ್ಣಿಗೆ ಸಿಕ್ಕಿದ್ದಾರೆ.
ಲಂಡನ್ ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಣೆಗೆ ಮಲ್ಯ ಆಗಮಿಸಿದ್ದು, ಈ ವೇಳೆ ಸ್ಥಳದಲ್ಲಿ ಸುದ್ದಿಗಾಗಿ ತೆರಳಿದ್ದ ಸುದ್ದಿಸಂಸ್ಥೆಯ ವರದಿಗಾರರು ಮಲ್ಯರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಲ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ನಾನು ಇಲ್ಲಿಗೆ ಬಂದಿರುವುದು ಪಂದ್ಯ ವೀಕ್ಷಿಸಲು ಎಂದು ಗರಂ ಆಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಹೆಸರಲ್ಲಿ ವಿಜಯ್ ಮಲ್ಯ ಭಾರತದ ವಿವಿಧ ಬ್ಯಾಂಕ್ ಗಳಿಂದ ಬಹುಕೋಟಿ ಸಾಲ ಪಡೆದಿದ್ದು, ಸಾಲವನ್ನು ಮರುಪಾವತಿಸದೇ ಲಂಡನ್ ಗೆ ಪರಾರಿಯಾಗಿದ್ದಾರೆ. ಭಾರತದಲ್ಲಿ ಮಲ್ಯ ವಿರುದ್ಧ ಹಲವು ಪ್ರಕರಣಗಳ ದಾಖಲಾಗಿದ್ದು, ಈಗಾಗಲೇ ಬ್ರಿಟನ್ ಕೋರ್ಟ್ ಕೂಡ ಮಲ್ಯ ಗಡಿಪಾರು ಮಾಡುವ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣ ಇದೀಗ ನಿರ್ಣಾಯಕ ಹಂತದಲ್ಲಿದೆ ಎನ್ನಲಾಗಿದೆ.