ಕ್ರೀಡೆ

ದಕ್ಷಿಣ ಆಫ್ರಿಕಾದ ವಿರುದ್ಧ ಇಂಡಿಯಾದ ಗೆಲುವಿಗೆ ಕಾರಣವಾದ 3 ಪ್ರಮುಖ ಅಂಶಗಳು

Pinterest LinkedIn Tumblr


ಸೌತಾಂಪ್ಟನ್​ನ ರೋಸ್ ಬೌಲ್​ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ. 228ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ್ದ ಭಾರತ, ಸುಲಭವಾಗಿ ಗೆಲುವಿನ ಕೇಕೆ ಹಾಕಿತು. ಅಷ್ಟಕ್ಕೂ ಭಾರತದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಯಾವವು ಗೊತ್ತಾ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಚಹಾಲ್​-ಬುಮ್ರಾ ಬಾಲಿಂಗ್​ ಕಮಾಲ್​:

ಭಾರತ ಕ್ರಿಕೆಟ್​ ತಂಡ ನಿನ್ನೆ ಅಕ್ಷರಶಃ ಮೋಡಿಯನ್ನೇ ಮಾಡಿತ್ತು. ದಕ್ಷಿಣ ಆಫ್ರಿಕಾದವರನ್ನು ಸಾಧಾರಣ ಮೊತ್ತಕ್ಕೆ ಕಟ್ಟು ಹಾಕುವಲ್ಲಿ ಯಜುವೇಂದ್ರ ಚಹಾಲ್​ ಹಾಗೂ ಜಸ್ಪ್ರೀತ್​ ಬುಮ್ರಾ ಪ್ರಮುಖ ಪಾತ್ರವಹಿಸಿದ್ದರು. ಓಪನರ್​ಗಳಾಗಿ ಕ್ರೀಸ್​ಗೆ ಬಂದ ಕ್ವಿಂಟನ್ ಡಿಕಾಕ್ ಹಾಗೂ ಆಶೀಮ್ ಆಮ್ಲಾ ರನ್​ ಕಲೆಹಾಕಲು ಪರದಾಡಿದರು. 3ನೇ ಓವರ್​​ನ ಬುಮ್ರಾ ಬೌಲಿಂಗ್​ನಲ್ಲಿ ಹಶೀಮ್ ಆಮ್ಲಾ(6) ಸ್ಲಿಪ್​​ನಲ್ಲಿ ರೋಹಿತ್​​ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದಾದ ಬೆನ್ನಲ್ಲೆ ಡಿಕಾಕ್​​(10) ಕೂಡ ಸ್ಲಿಪ್​​ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ಬುಮ್ರಾ ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ ನೀಡಿದ್ದರು. ನಂತರ ಮೋಡಿ ಮಾಡುವ ಸರದಿ ಚಹಾಲ್​ದಾಗಿತ್ತು. ನಾಲ್ಕು ವಿಕೆಟ್​ ಪಡೆಯುವ ಮೂಲಕ ಅವರು ಎಲ್ಲರ ಗಮನ ಸೆಳೆದರು.

ರೋಹಿತ್​ ಜವಾಬ್ದಾರಿಯುತ ಆಟ:

ರೋಹಿತ್​ ಶರ್ಮಾ ಈ ಬಾರಿಯ ಐಪಿಎಲ್​ನಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ್ದರು. ಅಲ್ಲದೆ, ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲೂ ಉತ್ತಮವಾಗಿ ಬ್ಯಾಟ್​ ಬೀಸಿರಲಿಲ್ಲ. ಹಾಗಾಗಿ ನಿನ್ನೆ ಅವರು ಆಟವಾಡುತ್ತಾರೋ ಅಥವಾ ಇಲ್ಲವೋ ಎನ್ನುವ ಅನುಮಾನ ಕಾಡಿತ್ತು. ಆದರೆ, ಉಪ ನಾಯಕನಾಗಿ ರೋಹಿತ್​ ಜವಾಬ್ದಾರಿಯುತ ಆಟವಾಡಿದ್ದರು. ಈ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೊಹ್ಲಿ ಚಾಣಾಕ್ಯತೆ:

ವಿರಾಟ್​ ಕೊಹ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಮೊದಲ ವಿಶ್ವಕಪ್​ನಲ್ಲೇ ಅವರು ತಮ್ಮ ಚಾಣಾಕ್ಯತೆಯನ್ನು ಮೆರೆದಿದ್ದಾರೆ. ಕ್ಷೇತ್ರ ರಕ್ಷಣೆ ವಿಭಾಗದಲ್ಲಂತೂ ಅವರ ಚಾಣಾಕ್ಯತೆ ಕೆಲಸ ಮಾಡಿದೆ. ಮೊದಲ ಪವರ್​ಪ್ಲೇ ವೇಳೆ ಮೂರು ಸ್ಲಿಪ್​ಗಳನ್ನು ನಿಲ್ಲಿಸಿದ್ದು ಫಲ ನೀಡಿದೆ. ಉತ್ತಮ ಫೀಲ್ಡಿಂಗ್​ ನಿಯೋಜನೆ ಹಾಗೂ ಸರಿಯಾದ ಸಮಯದಲ್ಲಿ ಸೂಕ್ತ ಬೌಲರ್​ಗಳ ಆಯ್ಕೆಯಲ್ಲಿ ಕೊಹ್ಲಿ ಮೆರೆದ ಚಾಣಾಕ್ಯತೆ ಭಾರತದ ಗೆಲುವನ್ನು ಸುಲಭವಾಗಿಸಿದೆ.

Comments are closed.