ಕ್ರೀಡೆ

ಹೈ ವೋಲ್ಟೇಜ್ ಪಂದ್ಯದಲ್ಲಿ 1 ರನ್ ಅಂತರದ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ; ಧೋನಿ ಸಿಡಿಲಬ್ಬರದ ಅರ್ಧಶತಕ ವ್ಯರ್ಥ

Pinterest LinkedIn Tumblr

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾನುವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಲಬ್ಬರದ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಟೇಬಲ್ ಟಾಪರ್ ಚೆನ್ನೈಗೆ ಸೋಲಿನ ಶಾಕ್ ನೀಡಿದೆ. ಹಾಗಿದ್ದರೂ ಆಡಿರುವ 10 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿರುವ ಆರ್‌ಸಿಬಿ ಆರು ಅಂಕ ಸಂಪಾದಿಸಿರುವ ಆರ್‌ಸಿಬಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ. ಅತ್ತ 10 ಪಂದ್ಯಗಳಲ್ಲಿ 14 ಸಂಪಾದಿಸಿರುವ ಚೆನ್ನೈ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇವೆಲ್ಲದರ ಮೂಲಕ 2014ರ ಬಳಿಕ ಚೆನ್ನೈ ವಿರುದ್ಧ ಆರ್‌ಸಿಬಿ ಮೊದಲ ಗೆಲುವು ದಾಖಲಿಸಿದೆ. ಅದು ಕೂಡಾ ಒಂದು ರನ್ ಅಂತರದ ಗೆಲುವು ಆಗಿರುವುದು ವಿಶೇಷ.

ಮೊದಲು ಬ್ಯಾಟಿಂಗ್ ಆರ್‌ಸಿಬಿ ಪಾರ್ಥಿವ್ ಪಟೇಲ್ ಅರ್ಧಶತಕದ (53) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 161 ರನ್‌ಗಳ ಸ್ಫರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಏಕಾಂಕಿ ಹೋರಾಟ ನೀಡಿದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ (84*) ಕೆಚ್ಚೆದೆಯ ಅರ್ಧಶತಕದ ಹೊರತಾಗಿಯೂ 160 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೇವಲ 1 ರನ್ ಅಂತರದಿಂದ ಸೋಲನುಭವಿಸಬೇಕಾಯಿತು.

ಸವಾಲಿನ ಗುರಿ ಬೆನ್ನಟ್ಟಿದ ಚೆನ್ನೈಗೆ ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಡೇಲ್ ಸ್ಟೈನ್ ಡಬಲ್ ಆಘಾತವನ್ನು ನೀಡಿದರು. ಶೇನ್ ವಾಟ್ಸನ್ (5) ಜತೆಗೆ ಶುರೇಶ್ ರೈನಾ (5) ಖಾತೆ ತೆರೆಯಲು ವಿಫಲವಾದರು.

ಸ್ಟೇನ್‌ಗೆ ಉತ್ತಮ ಬೆಂಬಲ ನೀಡಿದ ಉಮೇಶ್ ಯಾದವ್, ಫಾಪ್ ಡು ಪ್ಲೆಸಿಸ್ (5) ಜತೆಗೆ ಕೇದರ್ ಜಾಧವ್ (9) ಹೊರದಬ್ಬಿದರು. ಪರಿಣಾಮ 28 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

ಈ ಹಂತದಲ್ಲಿ ಜತೆಗೂಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಅಂಬಟಿ ರಾಯುಡು ಎಚ್ಚರಿಕೆಯಿಂದ ಜತೆಯಾಟ ನಿಭಾಯಿಸಿದರು. 10 ಓವರ್ ವೇಳೆಗೆ ಸಿಎಸ್‌ಕೆ ಸ್ಕೋರ್ 57/4. ಅಂದರೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 105 ರನ್‌ಗಳ ಅವಶ್ಯಕತೆಯಿತ್ತು.

ಆರ್‌ಸಿಬಿ ಬೌಲರ್‌ಗಳು ಚೆನ್ನೈ ಮೇಲೆ ನಿರಂತರ ಒತ್ತಡ ಹೇರುತ್ತಲೇ ಸಾಗಿದರು. ಈ ನಡುವೆ ಧೋನಿ ಹಾಗೂ ರಾಯುಡು ಜತೆಯಾಟ ಅಪಾಯಕಾರಿಯೆನಿಸಿತ್ತು. ಈ ಹಂತದಲ್ಲಿ ರಾಯುಡು ಹೊರದಬ್ಬಿದ ಚಹಲ್ ನಿರ್ಣಾಯಕ ಬ್ರೇಕ್ ನೀಡಿದರು. ಎಸೆತಕ್ಕೊಂದರಂತೆ 29 ರನ್ ಗಳಿಸಿದ ರಾಯುಡು ಧೋನಿ ಜತೆಗೆ ಐದನೇ ವಿಕೆಟ್‌ಗೆ 55 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಅಂತಿಮ 5 ಓವರ್‌ಗಳಲ್ಲಿ ಚೆನ್ನೈ ಗೆಲುವಿಗೆ 70 ರನ್ ಬೇಕಾಗಿತ್ತು. ಈ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ರವೀಂದ್ರ ಜಡೇಜಾ (11) ರನೌಟ್ ಆದರು.

ಅತ್ತ ಮಗದೊಮ್ಮೆ ಫಿನಿಶರ್ ಜವಾಬ್ದಾರಿ ವಹಿಸಿಕೊಂಡ ಧೋನಿ ಆರ್‌ಸಿಬಿ ಪಾಳೇಯದಲ್ಲಿ ಆತಂಕ ಸೃಷ್ಟಿಸಿದರು. ಅಲ್ಲದೆ 35 ಎಸೆತಗಳಲ್ಲೇ ಫಿಫ್ಟಿ ಸಾಧನೆ ಮಾಡಿದರು.

ಚೆನ್ನೈ ಗೆಲುವಿಗೆ ಕೊನೆಯ ಓವರ್‌ನಲ್ಲಿ 26 ರನ್‌ಗಳ ಅವಶ್ಯಕತೆಯಿತ್ತು. ಆದರೆ ಛಲ ಬಿಡದ ಧೋನಿ ಕೊನೆಯ ಎಸೆತದ ವರೆಗೂ ಪೈಪೋಟಿ ನೀಡಿದರೂ ಕೇವಲ ಒಂದು ರನ್ ಅಂತರದಲ್ಲಿ ಸೋಲನುಭವಿಸಬೇಕಾಯಿತು.

ಅಂತಿಮ ಓವರ್‌ನಲ್ಲಿ ಮೂರು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ಧೋನಿ ಇನ್ನೇನು ಪಂದ್ಯ ಗೆಲ್ಲಿಸಿದರು ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಅಂತಿಮ ಎಸೆತದಲ್ಲಿ ಎರಡು ರನ್ ಬೇಕಾಗಿತ್ತು. ಆದರೆ ಸ್ಟ್ರೈಕರ್‌ನಲ್ಲಿದ್ದ ಧೋನಿಗೆ ಪಂದ್ಯ ಗೆಲ್ಲಿಸಲಾಗಲಿಲ್ಲ. ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ನೇರ ಥ್ರೋ ಮೂಲಕ ರನೌಟ್ ಮಾಡುವ ಮೂಲಕ ಆರ್‌ಸಿಬಿಗೆ ರೋಚಕ ಗೆಲುವು ಒದಗಿಸಿಕೊಟ್ಟರು.

ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಅತ್ತ 48 ಎಸೆತಗಳನ್ನು ಎದುರಿಸಿದ ಧೋನಿ ಐದು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳ ನೆರವಿನಿಂದ 84 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ ಧೋನಿ ತೋರಿದ ಹೋರಾಟ ಮನೋಭಾವಕ್ಕೆ ಇಡೀ ಕ್ರಿಕೆಟ್ ಲೋಕವೇ ಮೆಚ್ಚುಗೆ ವ್ಯಕ್ತಪಡಿಸಿದೆ.

Comments are closed.