ಕ್ರೀಡೆ

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಹೈದರಾಬಾದ್‌

Pinterest LinkedIn Tumblr

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಬಿರುಸಿನ ಅರ್ಧಶತಕಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನೊಂದಿಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿರುವ ಕೋಲ್ಕತಾ ನೈಟ್ ರೈಡರ್ಸ್ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಸಮಾನ ಅಂಕ ಪಡೆದರೂ ರನ್ ರೇಟ್ ಅಂತರದಲ್ಲಿ ಹಿಂದೆ ಬಿದ್ದಿದೆ. ಅತ್ತ 10 ಪಂದ್ಯಗಳಲ್ಲಿ ಆರನೇ ಸೋಲಿಗೆ ಗುರಿಯಾಗಿರುವ ಕೆಕೆಆರ್ ಎಂಟು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಕ್ರಿಸ್ ಲಿನ್ (51) ಹೊರತಾಗಿ ಇತರೆಲ್ಲ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಎಂಟು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ದಾಖಲಿಸಲು ಸಾಧ್ಯವಾಯಿತು. ಬಳಿಕ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಅಮೋಘ ಅರ್ಧಶತಕಗಳನ್ನು ಬಾರಿಸಿದ ಡೇವಿಡ್ ವಾರ್ನರ್ (67) ಹಾಗೂ ಜಾನಿ ಬೈರ್‌ಸ್ಟೋವ್ (80*) ನೆರವಿನಿಂದ 15 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಕೆಕೆಆರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಐಫಿಎಲ್ 2019ರ ಅತ್ಯಂತ ಅಪಾಯಕಾರಿ ಜೋಡಿಯಾಗಿ ಮೂಡಿಬಂದಿರುವ ವಾರ್ನರ್ ಹಾಗೂ ಬೈರ್‌ಸ್ಟೋವ್ ಅದಕ್ಕೆ ತಕ್ಕುದಾಗಿ ಬ್ಯಾಟ್ ಬೀಸಿದರು. ಪರಿಣಾಮ ಪವರ್ ಪ್ಲೇನಲ್ಲೇ 72 ರನ್ ಹರಿದು ಬಂದಿದ್ದವು.

ಇಲ್ಲಿಗೆ ವಾರ್ನರ್-ಬೈರ್‌ಸ್ಟೋವ್ ಆರ್ಭಟ ನಿಲ್ಲಲಿಲ್ಲ. ಪರಿಣಾಮ 8.4 ಓವರ್‌ಗಳಲ್ಲೇ ತಂಡದ ಮೊತ್ತ 100ರ ಗಡಿ ದಾಟಿತು. ಅಲ್ಲದೆ ಇಬ್ಬರು ತಲಾ 28 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡುವ ಮೂಲಕ ಗಮನ ಸೆಳೆದರು.

ವಾರ್ನರ್ ಹಾಗೂ ಬೈರ್‌ಸ್ಟೋವ್ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 131 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡದ ಗೆಲುವನ್ನು ಖಾತ್ರಿಪಡಿಸಿದರು. 38 ಎಸೆತಗಳನ್ನು ಎದುರಿಸಿದ ವಾರ್ನರ್ ಮೂರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ 67 ರನ್ ಗಳಿಸಿದರು.

ಬಳಿಕ ನಾಯಕ ಕೇನ್ ವಿಲಿಯಮ್ಸನ್ ಜತೆ ಸೇರಿದ ಬೈರ್‌ಸ್ವೋವ್ 15 ಓವರ್‌ಗಳಲ್ಲೇ ಒಂದು ವಿಕೆಟ್ ನಷ್ಟಕ್ಕೆ ಗೆಲುವು ಒದಗಸಿಕೊಟ್ಟರು. 43 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ ಏಳು ಬೌಂಡರಿ ಹಾಗೂ ನಾಲ್ಕು ಸಿಡಿಲಬ್ಬರದ ಸಿಕ್ಸರ್‌ಗಳ ನೆರವಿನಿಂದ 80 ರನ್ ಗಳಿಸಿ ಅಜೇಯರಾಗುಳಿದರು.

Comments are closed.