ಕ್ರೀಡೆ

ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆಂದ ಒಮರ್ ಅಬ್ದುಲ್ಲಾಗೆ ಪಾಕ್ ದಾರಿ ತೋರಿಸಿದ ಕ್ರಿಕೆಟಿಗ ಗೌತಮ್ ಗಂಭೀರ್

Pinterest LinkedIn Tumblr


ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಅಭಿಪ್ರಾಯಪಟ್ಟಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರುದ್ಧ ಮಾಜಿ ಕ್ರಿಕೆಟಿಗ ಹಾಗೂ ನೂತನ ಬಿಜೆಪಿ ಸದಸ್ಯ ಗೌತಮ್ ಗಂಭೀರ್ ತಿರುಗಿಬಿದ್ದಿದ್ದಾರೆ. ಈ ವಿಚಾರದಲ್ಲಿ ಒಮರ್ ಅಬ್ದುಲ್ಲಾ ಮತ್ತು ಗಂಭೀರ್ ಮಧ್ಯೆ ಟ್ವೀಟ್ ಸಮರವೇ ನಡೆಯಿತು. ಗೌತಮ್ ಗಂಭೀರ್ ಅವರು ಒಮರ್ ಅಬ್ದುಲ್ಲಾಗೆ ಪಾಕಿಸ್ತಾನೀ ಪಾಸ್​ಪೋರ್ಟ್ ಪಡೆಯಲು ಸಲಹೆ ನೀಡಿದರು.

“ಒಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಬೇಕು ಎಂದು ಬಯಸುತ್ತಾರೆ. ನನಗೆ ಸಾಗರದ ಮೇಲೆ ನಡೆಯುವ ಬಯಕೆ ಇದೆ… ಪ್ರತ್ಯೇಕ ಪ್ರಧಾನಿಗಿಂತ ಹೆಚ್ಚಾಗಿ ಒಮರ್ ಅಬ್ದುಲ್ಲಾಗೆ ಸ್ವಲ್ಪ ನಿದ್ರೆ ಹಾಗೂ ಒಂದು ಸ್ಟ್ರಾಂಗ್ ಕಾಫಿ ಬೇಕಿದೆ. ಅವರಿಗೆ ಇನ್ನೂ ಅರ್ಥ ಆಗಲಿಲ್ಲವೆಂದರೆ ಪಾಕಿಸ್ತಾನೀ ಪಾಸ್​ಪೋರ್ಟ್ ಬೇಕಾಗುತ್ತದೆ,” ಎಂದು ಗೌತಂ ಗಂಭಿರ್ ಟ್ವೀಟ್ ಮಾಡಿ ಕುಟುಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಗೊತ್ತಿಲ್ಲದ ವಿಚಾರದ ಬಗ್ಗೆ ಗಂಭೀರ್ ಮಾತನಾಡದೇ ಇರುವುದು ಒಳ್ಳೆಯದು ಸಲಹೆ ನೀಡಿದರು.

“ಗೌತಮ್, ನನಗೆ ಸರಿಯಾಗಿ ಕ್ರಿಕೆಟ್ ಆಡಲು ಬರದೇ ಇದ್ದರಿಂದ ನಾನು ಹೆಚ್ಚಾಗಿ ಆ ಆಟ ಆಡಲಿಲ್ಲ. ಜಮ್ಮು-ಕಾಶ್ಮೀರ, ಅದರ ಇತಿಹಾಸ ಹಾಗೂ ಆ ಇತಿಹಾಸ ನಿರ್ಮಾಣದ ಹಿಂದೆ ನ್ಯಾಷನಲ್ ಕಾನ್ಫೆರೆನ್ಸ್​ನ ಪಾತ್ರದ ಬಗ್ಗೆ ನಿಮಗೆ ಹೆಚ್ಚು ಗೊತ್ತಿಲ್ಲದಿದ್ದರೂ ನಿಮ್ಮ ಅಜ್ಞಾನವನ್ನು ಪ್ರದರ್ಶಿಸಲು ಮುಂದಾಗುತ್ತೀರಿ. ನಿಮಗೆ ಗೊತ್ತಿರುವ ವಿಚಾರಗಳಿಗೆ ನೀವು ಸೀಮಿತವಾಗಿರಿ. ಐಪಿಎಲ್ ಬಗ್ಗೆ ಟ್ವೀಟ್ ಮಾಡಿ” ಎಂದು ಗಂಭೀರ್​ಗೆ ಒಮರ್ ಅಬ್ದುಲ್ಲಾ ಕಿವಿಮಾತು ಹೇಳಿದರು.

ಇಷ್ಟಕ್ಕೆ ಸುಮ್ಮನಾಗದ ಗೌತಮ್ ಗಂಭೀರ್, “ನಿಮಗೆ ಕ್ರಿಕೆಟ್ ಸಿದ್ಧಿ ಇದೆಯೋ ಇಲ್ಲವೋ ಬಿಟ್ಟುಬಿಡಿ, ಆದರೆ, ನಿಸ್ವಾರ್ಥ ಆಡಳಿತದ ಬಗ್ಗೆ ತಿಳಿದುಕೊಂಡಿದ್ದರೆ ಕಾಶ್ಮೀರಿಗಳು ಹಾಗೂ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತಿತ್ತು. ಇತಿಹಾಸ ಯಾವಾಗಲೂ ಸ್ಥಿರವಾಗಿಯೇ ಇರುತ್ತದೆ. ನಮ್ಮ ದೃಷ್ಟಿಕೋನ ಮಾತ್ರ ಯಾವಾಗಲೂ ಭಾವನಾತ್ಮಕವಾಗಿರುತ್ತದೆ. ನಿಮ್ಮ ನೋಟವನ್ನು ಸ್ವಚ್ಛಗೊಳಿಸಿ” ಎಂದು ತಿರುಗೇಟು ನೀಡಿದರು.

ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರು ಕಾಶ್ಮೀರದ ಬಾಂಡೀಪೂರದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡುವಾಗ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪ್ರಸ್ತಾಪಿಸುತ್ತಾ, ಪ್ರತ್ಯೇಕ ಪ್ರಧಾನಿ ಬೇಕೆಂಬ ವಾದ ಮುಂದಿಟ್ಟಿದ್ದರು.

“ಭಾರತದ ಅನೇಕ ಸಂಸ್ಥಾನಗಳು ಬೇಷರತ್ತಾಗಿ ಭಾರತದೊಂದಿಗೆ ವಿಲೀನವಾದವು. ಆದರೆ, ನಾವು ಕಾಶ್ಮೀರಿಗಳು ನಮ್ಮದೇ ಗುರುತು, ನಮ್ಮದೇ ಸಂವಿಧಾನ ಇರಬೇಕೆಂದು ಷರತ್ತು ಹಾಕಿದೆವು. ಅದರಂತೆ ನಮ್ಮದೇ ಸದರ್-ಎ-ರಿಯಾಸತ್ ಮತ್ತು ವಜೀರ್-ಎ-ಅಜಮ್ ನಮ್ಮ ನಾಡಿಗೆ ಇದ್ದರು. ದೇವರ ದಯೆಯಿಂದ ನಾವು ಅವರನ್ನು ಮರಳಿ ಕೂರಿಸುತ್ತೇವೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದರು.

ಸದರ್-ಎ-ರಿಯಾಸತ್ ಎಂದರೆ ಅಧ್ಯಕ್ಷ, ಹಾಗೂ ವಜೀರ್-ಎ-ಅಜಮ್ ಎಂದರೆ ಪ್ರಧಾನಮಂತ್ರಿ. 1965ರವರೆಗೂ ಕಾಶ್ಮೀರಕ್ಕೆ ಅಧ್ಯಕ್ಷ ಹಾಗೂ ಪ್ರಧಾನಿ ಎರಡೂ ಹುದ್ದೆ ಇತ್ತು. ನಂತರ, ಈ ಎರಡೂ ಹುದ್ದೆಗಳನ್ನ ನಿಲ್ಲಿಸಿ ಅವುಗಳ ಜಾಗಕ್ಕೆ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಸ್ಥಾನಗಳನ್ನ ಹಾಕಲಾಯಿತು. ಈಗ ಒಮರ್ ಅಬ್ದುಲ್ಲಾ ಅವರು ಕಾಶ್ಮೀರಕ್ಕೆ ಮತ್ತೊಮ್ಮೆ ಅಧ್ಯಕ್ಷ ಹಾಗೂ ಪ್ರಧಾನಿ ಸ್ಥಾನ ಎರಡನ್ನೂ ಮತ್ತೆ ತರುವ ಮಾತನಾಡುತ್ತಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷವು ಕಾಶ್ಮೀರವನ್ನು ಹಿಮ್ಮುಖವಾಗಿ ಕರೆದೊಯ್ಯಬೇಕೆನ್ನುತ್ತಿದೆ. ದೇಶಕ್ಕೆ ಎರಡು ಪ್ರಧಾನಿ ಬೇಕು ಎನ್ನುತ್ತದೆ. ಒಂದು ಭಾರತಕ್ಕೆ ಮತ್ತೊಂದು ಕಾಶ್ಮೀರಕ್ಕೆ ಪ್ರಧಾನಿ ಇರಬೇಕಂತೆ. ತನ್ನ ಮಿತ್ರಪಕ್ಷವೊಂದು ಇಂಥ ಮಾತುಗಳನ್ನಾಡಲು ಹೇಗೆ ಧೈರ್ಯ ತೋರಿತೆಂದು ಕಾಂಗ್ರೆಸ್ ಉತ್ತರಿಸಬೇಕು” ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್​ಗೆ ಸವಾಲು ಹಾಕಿದ್ದಾರೆ.

Comments are closed.