ಕ್ರೀಡೆ

ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಹಾರ್ದಿಕ್ ಪಾಂಡ್ಯ; ಕೊನೆಗೂ ಕ್ಷಮೆಯಾಚನೆ

Pinterest LinkedIn Tumblr

ನವದೆಹಲಿ: ಖಾಸಗಿ ರಿಯಾಲಿಟಿ ಷೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಟೀಂ ಇಂಡಿಯಾ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಇದೀಗ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕ್ಷಮೆ ಕೋರಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕೆಎಲ್ ರಾಹುಲ್ ಜೊತೆ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಸ್ತ್ರೀದ್ವೇಷಿ ಹಾಗೂ ಕಾಮಪ್ರಚೋದಕ ಹೇಳಿಕೆ ನೀಡುವ ಮೂಲಕ ಸಿಕ್ಕಿ ಬಿದ್ದಿದ್ದರು. ಪಾಂಡ್ಯಾ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾಂಡ್ಯ ಕ್ಷಮೆಯಾಚನೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಾಂಡ್ಯಾ, ನನ್ನ ಹೇಳಿಕೆಯಿಂದ ಯಾರ ಭಾವನೆಗಳಿಗಾದರೂ ಧಕ್ಕೆಯಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಏನಿದು ಘಟನೆ?
ನಿರೂಪಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಟ್ಟ ಕಾಫಿ ವಿತ್ ಕರಣ್ ಸೆಲೆಬ್ರಿಟಿ ಚಾಟ್ ಶೋದಲ್ಲಿ ಸಹ ಆಟಗಾರ ಕೆಎಲ್ ರಾಹುಲ್ ಜತೆ ಹಾರ್ದಿಕ್ ಪಾಂಡ್ಯ ಭಾಗವಹಿಸಿದ್ದರು. ಹಾಗೆ ಸಂಭಾಷಣೆ ಮುಂದುವರಿದಾಗ ಹಾರ್ದಿಕ್ ಮಹಿಳೆಯರ ಬಗ್ಗೆ ಸ್ತ್ರೀದ್ವೇಷಿ ಹಾಗೂ ಕಾಮಪ್ರಚೋದಕ ಹೇಳಿಕೆಯನ್ನು ನೀಡಿದ್ದರು. ಅನೇಕ ಹೆಣ್ಮಕ್ಕಳ ಸಂಗವನ್ನು ತಾವು ಇಷ್ಟಪಡುವುದಾಗಿ ಈ ಬಗ್ಗೆ ಹೆಮ್ಮೆಪಟ್ಟುಕೊಂಡು ಹೆತ್ತವರಲ್ಲಿ ಮುಕ್ತವಾಗಿ ಮಾತನಾಡುವುದಾಗಿ ತಿಳಿಸಿದ್ದರು.

ಹೆಣ್ಮಕ್ಕಳ ಬಗ್ಗೆ ಪಾಂಡ್ಯ ಪದ ಬಳಕೆ ಎಷ್ಟು ಕೀಳು ಮಟ್ಟದಲ್ಲಿತ್ತೆಂದರೆ ಮೊದಲ ಬಾರಿ ಅನುಭವದ ಬಳಿಕ ನೇರವಾಗಿ ಹೆತ್ತವರ ಬಳಿ ಬಂದು ‘ಆಜ್ ಮೇ ಕರ್ ಕೇ ಆಯಾ’ (ಇವತ್ತು ನಾನು ಮಾಡಿ ಬಂದೆ) ಎಂದು ಹೇಳಿಕೊಂಡಿದ್ದಾಗಿ ತಿಳಿಸಿದ್ದರು. ಕ್ಲಬ್‌ನಲ್ಲಿ ಮಹಿಳೆಯ ಹೆಸರು ಯಾಕೆ ಕೇಳಿಲ್ಲ ಎಂಬುದಕ್ಕೆ ಉತ್ತರವಾಗಿ, ಮಹಿಳೆಯ ನಡಿಗೆಯನ್ನು ನಾನು ವೀಕ್ಷಿಸಲು ಬಯಸುತ್ತೇನೆ ಎಂದು ಉತ್ತರಿಸಿದ್ದರು. ಹಾರ್ದಿಕ್ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ಎದ್ದು ಬರುತ್ತಿದೆ. ಸದ್ಯ ಹಾರ್ದಿಕ್ ಕ್ಷಮಾಪನೆಯಿಂದಲೂ ಬಿಸಿಸಿಐ ತೃಪ್ತಿ ಹೊಂದಿಲ್ಲ. ಅಲ್ಲದೆ ಶಿಸ್ತು ಕ್ರಮ ಜರಗಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ ಎಂಬುದನ್ನು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಭಾರತೀಯ ತಂಡವನ್ನು ಪ್ರತಿನಿಧಿಸುವವರು ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬುದಕ್ಕೆ ಮಾನದಂಡಗಳಿವೆ. ಸದ್ಯ ಪಾಂಡ್ಯ ಎಲ್ಲೇ ಮೀರಿದ್ದಾರೆ. ಇದರ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿಬಂದಿದೆ. ಅಂದ ಹಾಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಂಡ್ಯ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ.

Comments are closed.