ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್: 7 ವರ್ಷದ ಪುಟ್ಟ ಪೋರ ಆಸ್ಟ್ರೇಲಿಯಾ ತಂಡಕ್ಕೆ ಉಪನಾಯಕನಾಗಿ ಸೇರ್ಪಡೆ !

Pinterest LinkedIn Tumblr

ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ (3ನೇ ಪಂದ್ಯ)ಕ್ಕೆ ಆಸಿಸ್ ತಂಡಕ್ಕೆ ನೂತನ ಉಪನಾಯಕನ ಆಯ್ಕೆಯಾಗಿದ್ದು, 7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್‌ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾನೆ.

ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ಹೃದಯಸ್ಪರ್ಶಿ ಘಟನೆಯೊಂದಕ್ಕೆ ಮೆಲ್ಬೋರ್ನ್ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಕ್ರಿಕೆಟ್‌ ಆಸ್ಪ್ರೇಲಿಯಾ, 15 ಸದಸ್ಯರ ಆಸ್ಪ್ರೇಲಿಯಾ ಬಳಗಕ್ಕೆ ಕ್ರಿಕೆಟ್‌ ವ್ಯಾಮೋಹಿ 7 ವರ್ಷದ ಬಾಲಕ ಆರ್ಶೀ ಶಿಲ್ಲರ್ ನನ್ನು ಸೇರ್ಪಡೆಗೊಳಿಸಿದೆ.

7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್‌ ಹೃದಯ ಸಂಬಂಧೀ ಕಾಯಿಲೆಯಿಂದ ಬಳಲುತ್ತಿದ್ದು, ಕ್ರಿಕೆಟ್ ಮೇಲೆ ಅತಿಯಾದ ವ್ಯಾಮೋಹ ಬೆಳೆಸಿಕೊಂಡಿದ್ದಾನೆ. ಅಲ್ಲದೆ ಭವಿಷ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಆಡಬೇಕು ಎಂದು ಬೃಹದಾಸೆಯನ್ನು ಹೊಂದಿದ್ದಾನೆ.

ಬಾಲಕನ ಆಸೆ ತಿಳಿದ ಕ್ರಿಕೆಟ್ ಆಸ್ಟ್ರೇಲಿಯಾ ಆತನನ್ನು ಕ್ರೀಡಾಂಗಣಕ್ಕೆ ಇಳಿಸಲು ನಿರ್ಧರಿಸಿದೆ. ಬಾಲಕ ಆರ್ಶೀ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಡಿಸೆಂಬರ್‌ 26ರಿಂದ ನಡೆಯಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಟಿಮ್‌ ಪೇಯ್ನ್‌ಗೆ ಸಹನಾಯಕನಾಗುವುದು ಖಚಿತಪಟ್ಟಿದೆ. ಅಡಿಲೇಡ್‌ ಮೂಲದ ಬಾಲಕ ಎಡಗೈ ಸ್ಪಿನ್ನರ್‌ ಆಗಿದ್ದು, ಅಡಿಲೇಡ್‌ ಟೆಸ್ಟ್‌ ವೇಳೆ ಆಸ್ಪ್ರೇಲಿಯಾ ತಂಡದೊಂದಿಗೆ ಅಭ್ಯಾಸ ಕೂಡ ನಡೆಸಿದ್ದ. ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಆತನನ್ನು ಆಸ್ಪ್ರೇಲಿಯಾ ಬಳಗಕ್ಕೆ ಸೇರಿಸಿಕೊಳ್ಳಬೇಕೆಂದು ಈ ತಿಂಗಳ ಆರಂಭದಲ್ಲೇ ನಿರ್ಧಾರವಾಗಿತ್ತು.

ಶನಿವಾರ ಬಾಲಕ ಆರ್ಶೀ 7ನೇ ಹುಟ್ಟುಹಬ್ಬವಾಗಿದ್ದು, ಅಂದೇ ಈ ವಿಷಯ ಅಧಿಕೃತವಾಗಿ ಬಿತ್ತರಗೊಂಡಿದ್ದು ವಿಶೇಷವಾಗಿತ್ತು.

3 ತಿಂಗಳ ಮಗುವಾಗಿದ್ದಾಗಲೇ ಸಮಸ್ಯೆ ತಿಳಿದಿತ್ತು
ಇನ್ನು ಆರ್ಶಿ ಶಿಲ್ಲರ್ ಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಆತನ ಪೋಷಕರಿಗೆ ಮೊದಲೇ ತಿಳಿದಿತ್ತು. ಆತನ ಚಿಕಿತ್ಸೆಗಾಗಿ ಅವರು ಹರಸಾಹಸ ಪಡುತ್ತಿದ್ದು, 3 ತಿಂಗಳ ಹಸುಗೂಸಿದ್ದಾಗಿನಿಂದಲೇ ಆರ್ಶಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಬಗ್ಗೆ ಮಾತನಾಡಿರುವ ಆತನ ತಾಯಿ ಸರಾಹ್ ಅವರು, ಆತನ ಜೀವನದ ಪ್ರತೀಯೊಂದು ಕ್ಷಣಗಳನ್ನೂ ಸ್ಮರಣೀಯವಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳುವ ಮೂಲಕ ತಮ್ಮ ಮಗನ ಬಗಿಗಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ,

Comments are closed.