ಕ್ರೀಡೆ

ತನ್ನ ಮೊದಲ ಪಂದ್ಯದಲ್ಲಿಯೇ ಹಾಂಕಾಂಗ್ ಗೆ ಸಿಂಹ ಸ್ವಪ್ನವಾಗಿ ಕಾಡಿದ ವೇಗಿ ಖಲೀಲ್​ ಅಹ್ಮದ್​ ಯಾರು ?

Pinterest LinkedIn Tumblr

ದುಬೈ: ಏಷ್ಯಾ ಕಪ್ 2018 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಪ್ರಯಾಸದ ಗೆಲುವು ಸಾಧಿಸಿದೆ. ಅದೂ ಕೂಡ ಹಾಂಕಾಂಗ್ ನಂತಹ ಕ್ರಿಕೆಟ್ ಶಿಶು ಎದುರು ಭಾರತ ತಿಣುಕಾಡಿದ ರೀತಿ ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.

ಆದರೆ ಈ ಹಂತದಲ್ಲಿ ಭಾರತ ತಂಡದ ನೆರವಿಗೆ ಬಂದಿದ್ದು ಮಾತ್ರ ಎಡಗೈ ವೇಗಿ ಖಲೀಲ್​ ಅಹ್ಮದ್. ಖಲೀಲ್ ಗೆ ಇದು ಪದಾರ್ಪಣೆ ಪಂದ್ಯವಾಗಿದ್ದು, ಪದಾರ್ಪಣೆ ಪಂದ್ಯದಲ್ಲೇ ಖಲೀಲ್ ತಮ್ಮ ತಾಕತ್ತು ಪ್ರದರ್ಶನ ಮಾಡಿದ್ದಾರೆ. ಆ ಮೂಲಕ ಭಾರತಕ್ಕಿದ್ದ ದೀರ್ಘಕಾಲದ ಎಡಗೈ ವೇಗಿಯ ಕೊರತೆಯನ್ನು ನೀಗಿಸುವ ಭರವಸೆ ಮೂಡಿಸಿದ್ದಾರೆ. ಈ ಮೂಲಕ 20 ವರ್ಷದ ಯುವ ಕ್ರಿಕೆಟಿಗ ಭಾರತದ ಪರ ಏಕದಿನ ಪಂದ್ಯವಾಡಿದ 222ನೇ ಆಟಗಾರ ಎನಿಸಿಕೊಂಡರು.

ಖಲೀಲ್​ ಅಹ್ಮದ್​ ಅವರನ್ನು ಏಷ್ಯಾಕಪ್ ಗೆ ಆಯ್ಕೆ ಮಾಡಿದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಅವರು ಹಾಂಕಾಂಗ್​ ವಿರುದ್ಧದ ಪಂದ್ಯದಲ್ಲಿ 11ರ ಬಳಗದಲ್ಲಿ ಸ್ಥಾನ ಪಡೆದು, ಪದಾರ್ಪಣೆ ಪಂದ್ಯದಲ್ಲೇ 3 ವಿಕೆಟ್​ ಪಡೆಯುವ ಮೂಲಕ ಭರವಸೆ ಮೂಡಿಸಿದ್ದಾರೆ. ಅಂಡರ್​-19 ತಂಡದ ಕೋಚ್​ ರಾಹುಲ್​ ದ್ರಾವಿಡ್​ ಅವರ ಗರಡಿಯಲ್ಲಿ ಖಲೀಲ್​ ಪಳಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೌಲರ್​ ಆಗಿ ರೂಪುಗೊಳ್ಳುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.

ಇವರ ಬಗ್ಗೆ ತಿಳಿಯಬೇಕಾದ ಪ್ರಮುಖಾಂಶಗಳು ಇಲ್ಲಿವೆ.
1. ರಾಜಸ್ಥಾನದ ಟೋಂಕ್​ ಜಿಲ್ಲೆಯಲ್ಲಿ ಹುಟ್ಟಿದ ಖಲೀಲ್ ಅಹ್ಮದ್ 2017ರ ಅಕ್ಟೋಬರ್​ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 2017ರ ಫೆಬ್ರವರಿಯಲ್ಲಿ ದೇಶೀಯ ಟಿ20 ಪಂದ್ಯಗಳಿಗೆ ಹಾಗೂ 2018ರ ಫೆಬ್ರವರಿಯಲ್ಲಿ ಲಿಸ್ಟ್​ ಎ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದರು.

2. ಖಲೀಲ್​ ಅಹ್ಮದ್​ 2015-16ರ ಅಂಡರ್​-19 ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದಲ್ಲಿ ಪಾಲ್ಗೊಂಡಿದ್ದರು, ಟೂರ್ನಿಯಲ್ಲಿ 6 ಪಂದ್ಯಗಳಿಂದ ಒಟ್ಟು 3 ವಿಕೆಟ್​ ಪಡೆದಿದ್ದರು.

3. ನಂತರ ಖಲೀಲ್​ ಅವರನ್ನು ಡೆಲ್ಲಿ ಡೇರ್​ಡೆವಿಲ್ಸ್​ ತಂಡ 10 ಲಕ್ಷ ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಅವರು ಐಪಿಎಲ್​ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ.

4. 2018ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಖಲೀಲ್​ ತೀವ್ರ ಕುತೂಹಲ ಹುಟ್ಟು ಹಾಕಿದ್ದರು. ಇವರನ್ನು ಖರೀದಿಸಲು ಕಿಂಗ್ಸ್​ ಇಲವೆನ್​ ಪಂಜಾಬ್​, ಡೆಲ್ಲಿ ಡೇರ್​ ಡೆವಿಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಪೈಪೋಟಿ ನಡೆಸಿದ್ದವು. ಅಂತಿಮವಾಗಿ 3 ಕೋಟಿ ರೂ. ನೀಡಿ ಸನ್​ರೈಸರ್ಸ್​ ಹೈದರಾಬಾದ್​ ತಂಡ ಖಲೀಲ್ ರನ್ನು ಖರೀದಿಸಿತ್ತು. ಖಲೀಲ್​ ಕೇವಲ ಒಂದು ಪಂದ್ಯದಲ್ಲಿ ಹೈದರಾಬಾದ್​ ತಂಡದ ಪರ ಆಡಿದ್ದರು.

5. ಈ ವರ್ಷ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿದ್ದ ಭಾರತ ಎ ತಂಡದಲ್ಲಿ ಖಲೀಲ್​ ಸ್ಥಾನ ಪಡೆದಿದ್ದರು. ಇಂಗ್ಲೆಂಡ್​ನಲ್ಲಿ ಒಟ್ಟು 3 ಪಂದ್ಯವನ್ನಾಡಿದ್ದ ಖಲೀಲ್​ 6 ವಿಕೆಟ್​ ಪಡೆದಿದ್ದರು. 2017-18ರ ವಿಜಯ್​ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಒಟ್ಟು 6 ಲಿಸ್ಟ್​ ಎ ಪಂದ್ಯಗಳಲ್ಲಿ 10 ವಿಕೆಟ್​ ಪಡೆದು ಮಿಂಚಿದ್ದರು.

Comments are closed.