ಕ್ರೀಡೆ

ಕಾಶ್ಮೀರ ಕಣಿವೆಯಲ್ಲಿ ರಕ್ತಪಾತ: ಪಾಕ್‌ ಕ್ರಿಕೆಟಿಗ ಆಫ್ರಿದಿ ಆಕ್ರೋಶ

Pinterest LinkedIn Tumblr


ಹೊಸದಿಲ್ಲಿ : ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ಪಾಕ್‌ ಕ್ರಿಕೆಟಿಗ ಶಾಹೀದ್‌ ಆಫ್ರಿದಿ ಇದೀಗ ಮತ್ತೂಮ್ಮೆ ಕಾಶ್ಮೀರ ವಿಷಯವನ್ನು ಕೆದಕಿದ್ದಾರೆ. ಕಾಶ್ಮೀರೀ ಜನರ ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತೆಗಾಗಿ ಟ್ಟಿಟರ್‌ನಲ್ಲಿ ಧ್ವನಿ ಎತ್ತರಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಭಾರತದ ಸೈನಿಕರಿಂದ ರಕ್ತಪಾತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಭಾರತ ಆಕ್ರಮಿತ ಕಾಶ್ಮೀರ ಕಣಿವೆಯ ಹಾಲಿ ಪರಿಸ್ಥಿತಿ ಭಯಾನಕ. ಕಾಶ್ಮೀರಿಗಳ ಸ್ವಯಂ ಆಡಳಿತೆಯ ಮತ್ತು ಸ್ವಾತಂತ್ರ್ಯದ ಧ್ವನಿಯನ್ನು ಅಡಗಿಸಲು ಅಮಾಯಕರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಕಾಶ್ಮೀರ ಕಣಿವೆಯಲ್ಲಿನ ರಕ್ತಪಾತವನ್ನು ಕೊನೆಗಾಣಿಸಲು ಯಾಕೆ ಏನನ್ನೂ ಮಾಡುತ್ತಿಲ್ಲ?’ ಎಂದು ಆಫ್ರಿದಿ ಪ್ರಶ್ನಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಕಳೆದ ಭಾನುವಾರ ಮೂರು ಪ್ರತ್ಯೇಕ ಎನ್‌ಕೌಂಟರ್‌ ನಡೆಸಿ 13 ಉಗ್ರರನ್ನು ಹತ್ಯೆಗದ ಎರಡು ದಿನಗಳ ತರುವಾಯ ಆಫ್ರಿದಿ ಅವರಿಂದ “ಕಾಶ್ಮೀರಿಗಳ ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತೆ’ಗಾಗಿ ಟ್ವಿಟರ್‌ ಆಗ್ರಹ ಮೂಡಿ ಬಂದಿದೆ.

13 ಉಗ್ರರನ್ನು ಸಾಯಿಸುವ ಕಾರ್ಯಾಚರಣೆಯಲ್ಲಿ ಮೂವರು ಯೋಧರು ಮತ್ತು ನಾಲ್ವರು ಪೌರರು ಜೀವ ತೆತ್ತಿದ್ದರು. ಮೃತ ಪಟ್ಟ ಯೋಧರೆಂದರೆ ಗುನ್ನೇರ್‌ ಅರವಿಂದ ಕುಮಾರ್‌, ಗುನ್ನೇರ್‌ ನೀಲೇಶ್‌ ಸಿಂಗ್‌ ಮತ್ತು ಸಿಪಾಯ್‌ ಹೇತ್ರಾಮ್‌.

ಆಫ್ರಿದಿ ಅವರ ಟ್ವೀಟ್‌ಗೆ ವ್ಯಗ್ರ ಹಾಗೂ ವ್ಯಂಗದ ಪ್ರತಿಕ್ರಿಯೆಗಳು ಭಾರತೀಯರಿಂದ ವ್ಯಕ್ತವಾಗಿದ್ದರೆ ಪಾಕಿಸ್ಥಾನೀಯರಿಂದ ಬೆಂಬಲದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಆಫ್ರಿದಿ ಅವರು ಕಾಶ್ಮೀರ ವಿಷಯವನ್ನು ಕೆಣಕಿರುವುದು ಇದೇ ಮೊದಲಲ್ಲ. ಮೊಹಾಲಿಯಲ್ಲಿ ಆಸೀಸ್‌ ವಿರುದ್ದದ ವಿಶ್ವ ಟಿ-20 ಪಂದ್ಯ ನಡೆದಿದ್ದಾಗ (2016ರ ಮಾರ್ಚ್‌) “ಪಾಕ್‌ ತಂಡವನ್ನು ಬೆಂಬಲಿಸಿದ ಕಾಶ್ಮೀರೀ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಹೇಳಿದ್ದರು.

2017ರಲ್ಲಿ ನಿವೃತ್ತರಾಗಿದ್ದ ಪಾಕ್‌ ಕ್ರಿಕೆಟಿಗ ಆಫ್ರಿದಿ ಅವರು ತಮ್ಮ ಕ್ರಿಕೆಟ್‌ ಬಾಳ್ವೆಯಲ್ಲಿ ಪಾಕ್‌ ಪರ 27 ಟೆಸ್ಟ್‌, 398 ಒನ್‌ ಡೇ ಮತ್ತು 98 ಟಿ-20 ಪಂದ್ಯಗಳನ್ನು ಆಡಿದ್ದಾರೆ.

-ಉದಯವಾಣಿ

Comments are closed.