ಅಂತರಾಷ್ಟ್ರೀಯ

ಭಾರತದ ಜತೆಗಿನ ಬಾಂಧವ್ಯ ಮಹತ್ವದ್ದು: ಚೀನಾ ವಿದೇಶಾಂಗ ಸಚಿವ

Pinterest LinkedIn Tumblr


ಬೀಜಿಂಗ್‌: ಚೀನಾ ಯಾವತ್ತೂ ತನ್ನ ನೆರೆಹೊರೆಯವರ ಜತೆ ಉತ್ತಮ ಬಾಂಧವ್ಯ ಹಾಗೂ ಭಾರತದೊಂದಿಗೆ ಸ್ನೇಹ ಬಯಸುತ್ತದೆ. ಆದರೆ ತನ್ನ ಪರಮಾಧಿಕಾರದ ಹಕ್ಕುಗಳು, ಹಿತಾಸಕ್ತಿಗಳು ಮತ್ತು ಪ್ರಾದೇಶಿಕ ಸಮಗ್ರತೆಗಳನ್ನೂ ಬಲವಾಗಿ ಎತ್ತಿ ಹಿಡಿಯುತ್ತದೆ ಎಂದು ಚೀನೀ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಡೋಕ್ಲಾಂ ಬಿಕ್ಕಟ್ಟನ್ನು ಬೀಜಿಂಗ್ ‘ಸಂಯಮ’ದಿಂದ ನಿಭಾಯಿಸಿದೆ. ಹೊಸದಿಲ್ಲಿ ಜತೆಗಿನ ಉತ್ತಮ ಬಾಂಧವ್ಯಗಳನ್ನು ಮುಂದುವರಿಸುವುದಕ್ಕೇ ತನ್ನ ಆದ್ಯತೆ ಎಂಬುದನ್ನು ಇದು ತೋರಿಸಿದೆ ಎಂದು ಅವರು ನುಡಿದರು.

ಪ್ರಮುಖ ರಾಷ್ಟ್ರಗಳ ಜತೆಗೆ ಚೀನಾದ ಬಾಂಧವ್ಯ ಹಾಗೂ ಕಳೆದ ವರ್ಷ ತಾನು ಕೈಗೊಂಡ ರಾಜತಾಂತ್ರಿಕ ಉಪಕ್ರಮಗಳ ಬಗ್ಗೆ ವಿವರಿಸುತ್ತ, ಚೀನಾದ ಅಂತಾರಾಷ್ಟ್ರೀಯ ಅಧ್ಯಯನಗಳ ಪತ್ರಿಕೆಯಲ್ಲಿ ಸುದೀರ್ಘ ಲೇಖನವನ್ನು ಚೀನೀ ಸಚಿವರು ಪ್ರಕಟಿಸಿದ್ದಾರೆ. ಚೀನಾದ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಡೋಕ್ಲಾಂನಿಂದ ಭಾರತ ತನ್ನ ಸೇನೆ ಹಾಗೂ ಉಪಕರಣಗಳನ್ನು ಹಿಂತೆಗೆದುಕೊಂಡಿತು ಎಂದು ಹೇಳಿದ್ದಾರೆ.

73 ದಿನಗಳ ಡೋಕ್ಲಾಂ ಬಿಕ್ಕಟ್ಟು ಉಭಯ ದೇಶಗಳ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಬಗೆಹರಿದಿತ್ತು. ಭೂತಾನ್‌ಗೆ ಸೇರಿದ ಡೋಕ್ಲಾಂನ ತ್ರಿಸಂಧಿ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಮುಂದಾದ ಚೀನೀ ಸೇನೆಯನ್ನು ಭಾರತೀಯ ಸೇನೆ ತಡೆದಿತ್ತು. ಅದರೊಂದಿಗೆ ಬಿಕ್ಕಟ್ಟು ಆರಂಭವಾಗಿತ್ತು.

ನಂತರ ಚೀನೀ ಸೇನೆ ರಸ್ತೆ ನಿರ್ಮಾಣ ಯೋಜನೆಯನ್ನು ಕೈಬಿಟ್ಟ ಬಳಿಕ ಆಗಸ್ಟ್‌ 28ರಂದು ಭಾರತೀಯ ಸೇನೆ ಡೋಕ್ಲಾಂನ ವಿವಾದಿತ ಪ್ರದೇಶದಿಂದ ವಾಪಸಾಗಿತ್ತು.

ಭಾರತ ಮತ್ತು ಚೀನಾ ಎರಡೂ ಪ್ರಾಚೀನ ನಾಗರಿಕತೆಗಳು ಹಾಗೂ ಬೃಹತ್‌ ದೇಶಗಳಾಗಿದ್ದು, ಪರಸ್ಪರ ಸ್ನೇಹ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯಲು ಬದ್ಧರಾಗಿದ್ದೇವೆ ಎಂದು ಯಿ ವಿವರಿಸಿದ್ದಾರೆ.

‘ವ್ಯೂಹಾತ್ಮಕ ತಪ್ಪುಗಳನ್ನು ಸರಿಪಡಿಸಲು ನಾವು ರಾಜತಾಂತ್ರಿಕ ವಿಧಾನವನ್ನೇ ಮುಂದುವರಿಸುತ್ತೇವೆ. ಭಾರತ-ಚೀನಾ ಸಹಕಾರಗಳೇ ಪರಸ್ಪರರ ಹಿತಾಸಕ್ತಿಗಳನ್ನು ಕಾಯ್ದುಕೊಂಡು ಮುಂದುವರಿಯುವ ಆಶಯಗಳನ್ನು ಬಿಂಬಿಸುತ್ತದೆ. ಡ್ರ್ಯಾಗನ್‌ ಮತ್ತು ಆನೆ ಜತೆಯಾಗಿ ನರ್ತಿಸುವುದನ್ನು ನೀವು ನೋಡುವಿರಿ. 1+1= 11 ಆಗುವುದನ್ನು ನಾವು ಬಯಸುತ್ತೇವೆ’ ಎಂದು ಯಿ ತಿಳಿಸಿದ್ದಾರೆ.

Comments are closed.