ಕರ್ನಾಟಕ

ಸಂವಿಧಾನ ಬದಲಾವಣೆಯ ಮಾತನಾಡುವವರಿಗೆ ಚಿಕಿತ್ಸೆ ಅಗತ್ಯ: ಅಣ್ಣಾ ಹಜಾರೆ

Pinterest LinkedIn Tumblr


ಬೆಳಗಾವಿ: ದೇಶದ ಸಂವಿಧಾನ ಬದಲಿಸಬೇಕೆನ್ನುವವರ ಮನಸ್ಥಿತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ”ಸಂವಿಧಾನ ಬದಲಿಸಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆ ಸಾಹಸಕ್ಕೆ ಯಾರೂ ಕೈಹಾಕಬಾರದು. ಕಾಲಮಾನದ ಅಗತ್ಯಕ್ಕೆ ತಕ್ಕಂತೆ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು ಹೊರತು ಬದಲಿಸಲು ಆಗಲ್ಲ”, ಎಂದರು.

ಲೋಕಪಾಲ, ಲೋಕಾಯುಕ್ತ, ರೈತ ಮತ್ತು ಚುನಾವಣೆ ಸುಧಾರಣೆ ವಿಷಯ ಮುಂದಿಟ್ಟುಕೊಂಡು ತಾವು ದಿಲ್ಲಿಯಲ್ಲಿ ಮಾರ್ಚ್‌ 23ರಿಂದ ಮತ್ತೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿರುವುದಾಗಿ ಹೇಳಿದ ಅವರು, ಇದರ ಜಾಗೃತಿಗಾಗಿ ಈಗ ದೇಶಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು. ”ದಿಲ್ಲಿಯಲ್ಲಿ ಸತ್ಯಾಗ್ರಹದ ಜಾಗ ಯಾವುದು ಎಂದು ನಿಶ್ಚಿತವಾಗಿಲ್ಲ. ಜಾಗ ನೀಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಒಂದುವೇಳೆ ನೀಡದಿದ್ದರೆ ಜೈಲಿನಲ್ಲೇ ಸತ್ಯಾಗ್ರಹ ಆರಂಭಿಸುತ್ತೇನೆ”, ಎಂದು ಘೋಷಿಸಿದರು.

”ನರೇಂದ್ರ ಮೋದಿ ಸರಕಾರ ಲೋಕಪಾಲ ಮಸೂದೆಯನ್ನು ಪೂರ್ಣ ದುರ್ಬಲಗೊಳಿಸಿ ಜಾರಿಗೊಳಿಸಿದೆ. ಇದರಿಂದ ಸ್ವಚ್ಛ ಆಡಳಿತ ಮತ್ತು ಸಂಸದೀಯ ವ್ಯವಸ್ಥೆ ಕನಸಿನ ಮಾತಾಗಿದೆ. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತ ಸಾಗಿದೆ. ಇದರ ನಿರ್ಮೂಲನೆಗೆ ಲೋಕಪಾಲ ಮತ್ತು ಲೋಕಾಯುಕ್ತ ಕಾನೂನು ಬಲಗೊಳ್ಳಲೇಬೇಕು. ಅದೇ ಆಶಯದೊಂದಿಗೆ ಈಗ ಮತ್ತೆ ಸತ್ಯಾಗ್ರಹದ ಹಾದಿ ಹಿಡಿದಿದ್ದೇನೆ”, ಎಂದು ಅಣ್ಣಾ ಹೇಳಿದರು.

ಪತ್ರಕ್ಕೆ ಉತ್ತರವಿಲ್ಲ: ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದ ಅಣ್ಣಾ ಹಜಾರೆ, ”ರೈತರ ಕುರಿತು 22 ಮತ್ತು ಲೋಕಪಾಲ ಕುರಿತು 10 ಪತ್ರಗಳನ್ನು ಪ್ರಧಾನಿಗೆ ಬರೆದಿರುವೆ. ಅವರಿಂದ ಒಂದೂ ಮರು ಉತ್ತರ ಬಂದಿಲ್ಲ. ನೀವು ದೊಡ್ಡವರು ನಾನು ಸಣ್ಣವನು. ನನ್ನಂಥವನ ಪತ್ರಕ್ಕೆ ಪ್ರತಿಕ್ರಿಯಿಸಲು ನಿಮ್ಮ ಹತ್ತಿರ ಸಮಯ ಇರಲಿಕ್ಕಿಲ್ಲವೆಂದು ಬೇಸರಿಸಿ ಇನ್ನೊಂದು ಪತ್ರ ಬರೆದಿದ್ದೇನೆ. ಅದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ”, ಎಂದು ದೂರಿದರು.

ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

4 ಸಾವಿರ ಜನರಿಂದ ಮುಚ್ಚಳಿಕೆ: ”ನನ್ನ ಹೋರಾಟ ಪಕ್ಷ, ಪಂಗಡ ರಾಜಕಾರಣದಿಂದ ದೂರ. ಇದರ ಶುದ್ಧತೆ ಕಾಯ್ದುಕೊಳ್ಳಲು ‘ಈ ಬಾರಿ ನಾನು ರಾಜಕೀಯ ಸೇರುವುದಿಲ್ಲ. ದೇಶ, ಸಮಾಜ ಸೇವೆ ಮಾಡಿಕೊಂಡು ಹೋಗುತ್ತೇನೆ’ ಎಂದು ಮುಚ್ಚಳಿಕೆ ಬರೆಸಿಕೊಂಡು ನನ್ನೊಂದಿಗೆ ಇರಲು ಅವಕಾಶ ನೀಡುತ್ತಿದ್ದೇನೆ. ಈಗಾಗಲೇ 4 ಸಾವಿರ ಜನ ಇಂಥ ಮುಚ್ಚಳಿಕೆ ನೀಡಿದ್ದಾರೆ. ವಾಗ್ದಾನ ಮಾಡಿದವರು ನಂತರ ರಾಜಕೀಯಕ್ಕೆ ಹೋದರೆ ಕೋರ್ಟ್‌ ಮೆಟ್ಟಿಲು ಹತ್ತುತ್ತೇನೆ”, ಎಂದು ಅಣ್ಣಾ ಹಜಾರೆ ತಮ್ಮ ಈ ಹಿಂದಿನ ಅನುಭವದ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸಿದರು.

Comments are closed.