ನವದೆಹಲಿ: ಸುಲಭ ಜಯ ಗಳಿಸುವ ವಿರಾಟ್ ಕೊಹ್ಲಿ ಬಳಗದ ಆಸೆ ಈಡೇರಲಿಲ್ಲ. ಧನಂಜಯ ಡಿ ಸಿಲ್ವಾ ಮತ್ತು ರೋಷನ್ ಸಿಲ್ವಾ ಅವರ ಅಮೋಘ ಬ್ಯಾಟಿಂಗ್ ಭಾರತದ ಕನಸಿಗೆ ಭಂಗ ತಂದಿತು. ಅಂತಿಮ ಪಂದ್ಯ ಡ್ರಾಗೊಂಡರೂ ಶ್ರೀಲಂಕಾ ವಿರುದ್ಧದ ಸರಣಿಯನ್ನು 1–0ಯಿಂದ ಗೆದ್ದ ಭಾರತ ದಾಖಲೆಯನ್ನು ಸಮಗಟ್ಟಿತು.
2005ರಿಂದ 2008ರ ಅವಧಿಯಲ್ಲಿ ಆಸ್ಟ್ರೇಲಿಯಾ ನಿರಂತರ ಒಂಬತ್ತು ಸರಣಿಗಳನ್ನು ಗೆದ್ದಿತ್ತು. ಭಾರತವೂ ಈಗ ಒಂಬತ್ತು ಸರಣಿಗಳನ್ನು ಗೆದ್ದುಕೊಂಡ ಸಾಧನೆ ಮಾಡಿತು.
ಫಿರೋಜ್ ಷಾ ಕೋಟ್ಲಾ ಅಂಗಣದಲ್ಲಿ ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ 410 ರನ್ಗಳ ಜಯದ ಗುರಿ ಬೆನ್ನತ್ತಿದ್ದ ಶ್ರೀಲಂಕಾ ನಾಲ್ಕನೇ ದಿನ 3 ವಿಕೆಟ್ ಕಳೆದುಕೊಂಡು 31 ರನ್ ಗಳಿಸಿತ್ತು. ಹಿಂದಿನ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಅಂತಿಮ ದಿನ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಭಾರತ ತಂಡದ ಭರವಸೆ ಆಗಿತ್ತು.
(ಶ್ರೀಲಂಕಾ ತಂಡದ ಬ್ಯಾಟ್ಸ್ಮನ್ ಧನಂಜಯ ಡಿ ಸಿಲ್ವಾ)
ಆದರೆ ಲೆಕ್ಕಾಚಾರವನ್ನು ಧನಂಜಯ ಬುಡಮೇಲು ಮಾಡಿದರು. ಮಂಗಳವಾರ ಔಟಾಗದೆ 13 ರನ್ ಗಳಿಸಿದ್ದ ಸಿಲ್ವಾ ಬುಧವಾರ ಪ್ರೇಕ್ಷಕರ ಮನ ಗೆದ್ದರು. ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿ ಭಾರಿ ಆಘಾತದಿಂದ ತಂಡವನ್ನು ರಕ್ಷಿಸಿದ್ದ ನಾಯಕ ದಿನೇಶ್ ಚಾಂಡಿಮಲ್ ಅವರು ಧನಂಜಯ ಜೊತೆಗೂಡಿ ಐದನೇ ವಿಕೆಟ್ಗೆ 112 ರನ್ ಸೇರಿಸಿದರು.
ಧನಂಜಯ ಸಿಲ್ವಾ 99 ರನ್ ಗಳಿಸಿದ್ದಾಗ ಮಹಮ್ಮದ್ ಶಮಿ ಎಸೆತವನ್ನು ಸ್ಟಿಯರ್ ಮಾಡಿ ಮೂರು ರನ್ ಗಳಿಸಿ ಶತಕ ಪೂರೈಸಿದರು. 36 ರನ್ ಗಳಿಸಿದ ಚಾಂಡಿಮಲ್ ಔಟಾದ ನಂತರ ಧನಂಜಯ ಅವರ ಜೊತೆಗೂಡಿದ ರೋಷನ್ ಸಿಲ್ವಾ ಕೂಡ ಮಿಂಚು ಹರಿಸಿದರು. ಆದರೆ 119 (219 ಎಸೆತ, 1 ಸಿ, 15 ಬೌಂ) ರನ್ ಗಳಿಸಿದ್ದಾಗ ಧನಂಜಯ ಡಿ ಸಿಲ್ವಾ ಸ್ನಾಯು ಸೆಳೆತಕ್ಕೆ ಒಳಗಾಗಿ ನಿವೃತ್ತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪಂದ್ಯ ಗೆಲ್ಲಲು ಭಾರತಕ್ಕೆ ಉತ್ತಮ ಅವಕಾಶವಿತ್ತು. ಆದರೆ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ರೋಷನ್ ಸಿಲ್ವಾ ಭಾರತದ ಬೌಲರ್ಗಳನ್ನು ಕಾಡಿದರು. ಚೊಚ್ಚಲ ಪಂದ್ಯದಲ್ಲಿ ರೋಷನ್ ಅರ್ಧಶತಕ (74;154 ಎ, 11 ಬೌಂ) ಗಳಿಸಿದ್ದಾಗ ಪಂದ್ಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. 44 (72 ಎ, 6 ಬೌಂ) ರನ್ ಗಳಿಸಿದ ಡಿಕ್ವೆಲ್ಲಾ ಔಟಾಗದೆ ಉಳಿದರು.
ಸಂಕ್ಷಿಪ್ತ ಸ್ಕೋರ್
ಭಾರತ, ಮೊದಲ ಇನಿಂಗ್ಸ್: 7ಕ್ಕೆ536 ಡಿಕ್ಲೇರ್ಡ್; ಶ್ರೀಲಂಕಾ, ಮೊದಲ ಇನಿಂಗ್ಸ್ 373; ಭಾರತ ಎರಡನೇ ಇನಿಂಗ್ಸ್ 5ಕ್ಕೆ 246 ಡಿಕ್ಲೇರ್ಡ್; ಶ್ರೀಲಂಕಾ ಎರಡನೇ ಇನಿಂಗ್ಸ್ (ಮಂಗಳವಾರದ ಮುಕ್ತಾಯಕ್ಕೆ 16 ಓವರ್ಗಳಲ್ಲಿ 3ಕ್ಕೆ31): 103 ಓವರ್ಗಳಲ್ಲಿ 5 ವಿಕೆಟ್ಗಳಿಗೆ 299 (ಧನಂಜಯ ಡಿ ಸಿಲ್ವಾ, ನಿವೃತ್ತಿ 119, ದಿನೇಶ್ ಚಾಂಡಿಮಲ್ 36, ರೋಷನ್ ಡಿ ಸಿಲ್ವಾ ಔಟಾಗದೆ 74, ನಿರೋಷನ್ ಡಿಕ್ವೆಲ್ಲಾ ಔಟಾಗದೆ 44; ಮಹಮ್ಮದ್ ಶಮಿ 50ಕ್ಕೆ1, ರವಿಚಂದ್ರನ್ ಅಶ್ವಿನ್ 126ಕ್ಕೆ1, ರವೀಂದ್ರ ಜಡೇಜ 81ಕ್ಕೆ3). ಫಲಿತಾಂಶ: ಪಂದ್ಯ ಡ್ರಾ; ಮೂರು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 1–0 ಗೆಲುವು. ಪಂದ್ಯಶ್ರೇಷ್ಠ–ವಿರಾಟ್ ಕೊಹ್ಲಿ, ಸರಣಿಯ ಶ್ರೇಷ್ಠ ಆಟಗಾರ–ವಿರಾಟ್ ಕೊಹ್ಲಿ.
* ಮಾಲಿನ್ಯಕ್ಕೆ ಕಂಗೆಟ್ಟ ತಂಡ: ಚಾಂಡಿಮಲ್
’ವಾಯುಮಾಲಿನ್ಯದ ನಡುವೆ ಎರಡು, ಮೂರು ಮತ್ತು ನಾಲ್ಕನೇ ದಿನ ಇಲ್ಲಿ ಆಡುವುದು ತುಂಬ ಕಷ್ಟವಾಯಿತು’ ಎಂದು ಹೇಳಿದ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್ ‘ಕೊನೆಯ ದಿನ ಶ್ರೀಲಂಕಾದಲ್ಲೇ ಇದ್ದಂತೆ ಭಾಸವಾಗಿತ್ತು. ತಂಡವನ್ನು ಬೆಂಬಲಿಸಿದ ಇಲ್ಲಿನ ಜನತೆಗೆ ಮತ್ತು ಭಾರತ ತಂಡಕ್ಕೆ, ವಿಶೇಷವಾಗಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಭಿನಂದನೆ ಸಲ್ಲಬೇಕು’ ಎಂದರು.
* ಲಂಕಾ ಬ್ಯಾಟ್ಸ್ಮನ್ಗಳನ್ನು ಹೊಗಳಿದ ವಿರಾಟ್
ಬ್ಯಾಟಿಂಗ್ಗೆ ಅಷ್ಟೊಂದು ಅನುಕೂ ಲಕರವಲ್ಲದ ಪಿಚ್ನಲ್ಲಿ ತಳವೂರಿ ಪಂದ್ಯ ಡ್ರಾ ಮಾಡಿಕೊಂಡ ಶ್ರೀಲಂಕಾ ತಂಡದ ಆಟಗಾರರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೊಗಳಿದರು. ‘ಲಂಕಾ ಬ್ಯಾಟ್ಸ್ಮನ್ಗಳು ಪರಿಸ್ಥಿತಿಗೆ ತಕ್ಕಂತೆ ಆಡಿದರು. ಭರವಸೆಯಿಂದ ಕ್ರೀಸ್ನಲ್ಲಿ ಉಳಿದರು. ಬೌಲರ್ಗಳು ಮೇಲುಗೈ ಸಾಧಿಸದಂತೆ ನೋಡಿಕೊಂಡರು. ಇದು ಗಮನಾರ್ಹ ಅಂಶ’ ಎಂದು ಕೊಹ್ಲಿ ನುಡಿದರು.
ಮೂರನೇ ಶತಕ ಸಿಡಿಸಿದ ಧನಂಜಯ ಡಿ ಸಿಲ್ವಾ
ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ರೋಷನ್ ಸಿಲ್ವಾ
112 ರನ್ ಜೊತೆಯಾಟ ಆಡಿದ ಧನಂಜಯ–ಚಾಂಡಿಮಲ್