ಮುಂಬೈ: ಕ್ರಿಕೆಟ್ ನ ದಂತಕಥೆ ಮತ್ತು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ನಂಬರ್ 10 ಜೆರ್ಸಿಯನ್ನು ಯಾವುದೇ ಆಟಗಾರನೂ ಕೂಡ ಧರಿಸದಂತೆ ಬಿಸಿಸಿಐ ಅಘೋಷಿತ ನಿರ್ಧಾರ ಹೊರಡಿಸಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಹೌದು..ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಧರಿಸುತ್ತಿದ್ದ ನಂಬರ್ 10 ಜೆರ್ಸಿಯನ್ನು ಇನ್ನು ಮುಂದೆ ಯಾವುದೇ ಆಟಗಾರನೂ ಧರಿಸುವಂತಿಲ್ಲ ಎಂಬ ಅಲಿಖಿತ ಮತ್ತು ಅಘೋಷಿತ ಘೋಷಣೆಯೊಂದನ್ನು ಬಿಸಿಸಿಐ ಹೊರಡಿಸಿದೆ. ಅದರಂತೆ ಇನ್ನು ಮುಂದೆ ಯಾವುದೇ ಆಟಗಾರನೂ ಕೂಡ ನಂಬರ್ 10 ಜೆರ್ಸಿಯನ್ನು ತೊಡುವಂತಿಲ್ಲ..ಸಚಿನ್ ತೆಂಡೂಲ್ಕರ್ ಮೇಲಿನ ಗೌರವದ ಕಾರಣಕ್ಕಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
ಅಲ್ಲದೆ ಈ ಹಿಂದೆ ಇದೇ ನಂಬರ್ 10 ಜೆರ್ಸಿ ತೊಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಅಲ್ಲದೆ ಸಚಿನ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಶಾರ್ದೂಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಬಳಿಕೆ ಎಚ್ಚೆತ್ತಿದ್ದ ಬಿಸಿಸಿಐ ನಂಬರ್ 10 ಜೆರ್ಸಿಯನ್ನು ಈವರೆಗೂ ಯಾವುದೇ ಆಟಗಾರರಿಗೂ ನೀಡಿಲ್ಲ. ಅಲ್ಲದೆ ಇನ್ನುಮುಂದೆಯೂ ನೀಡದಂತೆ ಎಚ್ಚರಿಕೆ ವಹಿಸಿದೆ ಎನ್ನಲಾಗಿದೆ. ಆ ಮೂಲಕ ಸಚಿನ್ ನಿವೃತ್ತಿ ಬಳಿಕ ಬಿಸಿಸಿಐ ಅವರ ಜೆರ್ಸಿಗೂ ಅನಧಿಕೃತ ನಿವೃತ್ತಿ ಘೋಷಿಸಿದೆ.
ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಇಡೀ ಕ್ರಿಕೆಟ್ ವೃತ್ತಿ ಜೀವನದಲ್ಲಿ ನಂಬರ್ 10 ಜೆರ್ಸಿಯನ್ನು ತೊಟ್ಟು ಆಡಿದ್ದರು. ಇದೇ ಕಾರಣಕ್ಕಾಗಿ ಈ ಜೆರ್ಸಿ ಸಚಿನ್ ಮಾತ್ರವಲ್ಲದೇ ಅವರ ಅಭಿಮಾನಿಗಳಲ್ಲೂ ಭಾವನಾತ್ಮಕ ಸಂಬಂಧ ಬೆಸೆದಿತ್ತು.