ಕ್ರೀಡೆ

ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಭುವನೇಶ್ವರ್ ಕುಮಾರ್

Pinterest LinkedIn Tumblr


ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಇಲ್ಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯಕ್ಕೂ ಪೂರ್ವಭಾವಿಯಾಗಿ ಮಾತನಾಡಿರುವ ಭಾರತ ತಂಡದ ಬಲಗೈ ವೇಗಿ ಭುವನೇಶ್ವರ್ ಕುಮಾರ್, ಉತ್ತಮ ವೇಗ ಕಾಪಾಡುವ ಮೂಲಕ ಚೆಂಡನ್ನು ಸ್ವಿಂಗ್ ಮಾಡುವುದೇ ತನ್ನ ಯಶಸ್ಸಿನ ರಹಸ್ಯ ಎಂದು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆಗೆ ಹೋಲಿಸಿದರೆ ಭುವಿ ವೇಗದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಅಲ್ಲದೆ ಹೊಸ ಚೆಂಡು ಮತ್ತು ಡೆತ್ ಓವರ್‌‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರವಾಗಿ ಮಾರ್ಪಾಡುಗೊಂಡಿದ್ದಾರೆ.

ಉತ್ತಮ ವೇಗದೊಂದಿಗೆ ಚೆಂಡು ಎಸೆಯಲು ಪರಿಶ್ರಮಿಸಿದಾಗ ಸ್ವಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್ ತಮಗೆ ನೆರವಾಗಿದ್ದಾರೆ. ಇದೀಗ ಉತ್ತಮ ವೇಗದ ಜತೆಗೆ ಸ್ವಿಂಗ್ ಮಾಡಬಲ್ಲೆ ಎಂದು ಭುವಿ ವಿವರಿಸುತ್ತಾರೆ.

ಅವರು (ಭರತ್) ಬೌಲರುಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಈ ಹಂತದಲ್ಲಿ ತಾಂತ್ರಿಕವಾಗಿ ಹೆಚ್ಚೇನು ಕಲಿಯುವ ಅಗತ್ಯವಿಲ್ಲ. ಆದರೆ ಹೇಗೆ ಬೌಲಿಂಗ್ ಸುಧಾರಿಸಿಕೊಳ್ಳಬಹುದೆಂಬುದರ ಬಗ್ಗೆ ಸಲಹೆಗಳನ್ನು ಮಾಡುತ್ತಾರೆ. ಇದರಿಂದಾಗಿ ವೇಗದೊಂದಿಗೆ ಚೆಂಡು ಸ್ವಿಂಗ್ ಮಾಡಲು ಸಾಧ್ಯವಾಯಿತು. ತಂಡದಲ್ಲಿ ಅವರ ಪಾತ್ರ ಅಮೂಲ್ಯವಾದುದು ಎಂದು ಹೇಳಿದರು.

ಕೇವಲ ಬೌಲಿಂಗ್ ಮಾತ್ರವಲ್ಲದೆ ಕೆಳ ಕ್ರಮಾಂಕದ ಬ್ಯಾಟಿಂಗ್‌ನಲ್ಲೂ ಭುವಿ ಅಮೂಲ್ಯ ಪಾತ್ರ ವಹಿಸುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಓರ್ವ ಆಟಗಾರನಾಗಿ ನಾನು ಬೆಳೆದು ಬಂದಿದ್ದೇನೆ ಎಂದಿದ್ದಾರೆ.

ಸರಣಿಯ ಬಗ್ಗೆ ಮಾತನಾಡಿದ ಭುವಿ, ಕಾನ್ಪುರದಲ್ಲಿ ಮಗದೊಂದು ಒತ್ತಡದ ಪಂದ್ಯ ಎಂದು ಅಭಿಪ್ರಾಯಪಟ್ಟರು.

ಕಿರು ಸರಣಿಯಲ್ಲಿ ನಮಗೆ ಈ ರೀತಿಯ ಸವಾಲು ಎದುರಾಗಿರಲಿಲ್ಲ. ಆದರೆ ಒತ್ತಡದಿಂದ ನಿಭಾಯಿಸುವುದೇ ತಂಡದ ಸ್ವಭಾವವಾಗಿದ್ದು, ನಾಳಿನ ಪಂದ್ಯದಲ್ಲೂ ಒತ್ತಡದಿಂದ ಹೊರಬರಲಿದ್ದೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಭುವಿ ಪ್ರದರ್ಶನಕ್ಕೆ ನಾಯಕ ವಿರಾಟ್ ಕೋಹ್ಲಿ ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

Comments are closed.