ರಾಷ್ಟ್ರೀಯ

ಬ್ರಹ್ಮಚಾರಿಗಳಿಗೆ ಬಿಜೆಪಿಯಲ್ಲಿ ಉಜ್ವಲ ಭವಿಷ್ಯ!

Pinterest LinkedIn Tumblr


ಹೊಸದಿಲ್ಲಿ: ಛತ್ತೀಸ್‌ಗಢದ ಕಾರ್ಮಿಕ ಮತ್ತು ಕ್ರೀಡಾ ಸಚಿವ ಭೈಯಾಲಾಲ್‌ ರಾಜ್‌ವಾಡೆ ಆವರು ‘ಭಾರತೀಯ ಜನತಾ ಪಕ್ಷದಲ್ಲಿ ಬ್ರಹ್ಮಚಾರಿಗಳು ಉಜ್ವಲ ಭವಿಷ್ಯ ಹೊಂದಿದ್ದಾರೆ’ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಭಾರಿ ಕಂಪನ ಸೃಷ್ಟಿಸಿದ್ದಾರೆ.

”ಈ ಪಕ್ಷ(ಬಿಜೆಪಿ)ದಲ್ಲಿ ಬ್ಯಾಚಲರ್‌ಗಳಿಗೆ ಉಜ್ವಲ ಭವಿಷ್ಯವಿದೆ. ಬೇಕಾದರೆ ನೀವೇ ನೋಡಿ… ಪ್ರಧಾನಿಯವರು ಬ್ರಹ್ಮಚಾರಿ, ಹಲವು ಮುಖ್ಯಮಂತ್ರಿಗಳು ಬ್ರಹ್ಮಚಾರಿಗಳು, ಕೆಲವು ಮಂತ್ರಿಗಳೂ ಸಹ,” ಎಂದು ರಾಜವಾಡೆ ಗುರುವಾರ ಬಿಜೆಪಿ ಸಹೋದ್ಯೋಗಿ ದೀಪಕ್‌ ಪಟೇಲರ ಹುಟ್ಟುಹಬ್ಬ ಸಮಾರಂಭದಲ್ಲಿ ಹೇಳಿದರು. ಭೈಯಾಲಾಲ್‌ ಅವರು ದೀಪಕ್‌ ಪಟೇಲ್‌ ಅವರನ್ನುದ್ದೇಶಿಸಿ ಹೀಗೆ ಹೇಳಿದ್ದಾರೆ. ಏಕೆಂದರೆ ಪಟೇಲ್‌ ಕೂಡ ಬ್ರಹ್ಮಚಾರಿ.

ಪ್ರಮುಖ ಬಿಜೆಪಿ ಮುಖಂಡರ ಈ ‘ಒಂಟಿತನ’ ಹಾಸ್ಯದ ವಸ್ತುವಾಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಪ್ರಧಾನಿ ಮೋದಿ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ದೊಡ್ಡ ಮೌಲ್ಯದ ನೋಟುಗಳನ್ನು ನಿಷೇಧಿಸಿದ ಪರಿಣಾಮ ಮದುವೆ ಸಂದರ್ಭಗಳಲ್ಲಿ ಸಾವಿರಾರು ಕುಟುಂಬಗಳು ‘ನಗದು ಅಭಾವ’ದಿಂದ ತತ್ತರಿಸಿದ್ದವು. ಆಗ ಯೋಗ ಗುರು ಬಾಬಾ ರಾಮ್‌ದೇವ್‌, ”ಬಿಜೆಪಿಯಲ್ಲಿ ಹೆಚ್ಚಿನವರು ಬ್ರಹ್ಮಚಾರಿಗಳು. ಇದು ವಿವಾಹದ ಋುತು ಎಂಬುದು ಅವರ ಗಮನಕ್ಕೆ ಬಂದಿಲ್ಲ. ತಪ್ಪಾಗಿದ್ದೇ ಅಲ್ಲಿ,” ಎಂದು ತಮಾಷೆ ಮಾಡಿದ್ದರು.

ಈ ಹಿಂದೆ ಯಶೋದಾಬೆನ್‌ ಅವರನ್ನು ಮದುವೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಬ್ರಹ್ಮಚಾರಿ ಎನ್ನುವ ಹಾಗಿಲ್ಲವಾದರೂ ಈಗವರು ಒಂಟಿಯೇ. ಇನ್ನು, ಮಾಜಿ ಪ್ರಧಾನಿ ವಾಜಪೇಯಿ, ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರಾಖಂಡದ ಸಿ.ಎಂ. ತ್ರಿವೇಂದ್ರ ಸಿಂಗ್‌ ರಾವತ್‌, ಹರಿಯಾಣದ ಮನೋಹರ್‌ ಲಾಲ್‌ ಖಟ್ಟರ್‌, ಅಸ್ಸಾಂ ಸಿ.ಎಂ. ಸರ್ಬಾನಂದ ಸೊನೊವಾಲ್‌ ಇವೆಲ್ಲರೂ ಬ್ರಹಚಾರಿಗಳೇ.

Comments are closed.