ಮನೋರಂಜನೆ

ಅಯೋಧ್ಯೆಯಲ್ಲಿ ಮಸೀದಿ ಬದಲು ಶಾಲೆ ನಿರ್ಮಿಸಿ; ಸಲ್ಮಾನ್​ ಖಾನ್​ ತಂದೆ

Pinterest LinkedIn Tumblr


ನವದೆಹಲಿ (ನ. 10): ಅಯೋಧ್ಯೆಯ ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದಕ್ಕೆ ಸುಪ್ರೀಂಕೋರ್ಟ್​ನಲ್ಲಿ ಕೊನೆಗೂ ಅಂತ್ಯ ಸಿಕ್ಕಿದೆ. ವಿವಾದಿತ ಜಾಗವನ್ನು ರಾಮಲಲ್ಲಾಗೆ ನೀಡಿರುವುದರಿಂದ ರಾಮಮಂದಿರ ನಿರ್ಮಾಣದ ಕನಸು ಮತ್ತೆ ಗರಿಗೆದರಿದೆ. ಹಾಗೇ, ಮಸೀದಿ ಕಟ್ಟಲು ಅಥವಾ ಬೇರಾವುದೇ ರೀತಿಯಲ್ಲಿ ಆ ಜಾಗವನ್ನು ಬಳಸಿಕೊಳ್ಳಲು ಸುನ್ನಿ ವಕ್ಫ್​ ಬೋರ್ಡ್​ಗೆ 5 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಇದೆಲ್ಲದರ ನಡುವೆ ಬಾಲಿವುಡ್​ನ ಖ್ಯಾತ ನಿರ್ಮಾಪಕ ಮತ್ತು ಚಿತ್ರಕಥೆಗಾರ ಸಲೀಂ ಖಾನ್ ಮತ್ತೊಂದು ಬೇಡಿಕೆಯಿಟ್ಟಿದ್ದಾರೆ. ವಿವಾದಿತ ಜಾಗವನ್ನು ಹೊರತುಪಡಿಸಿ ಅಯೋಧ್ಯೆಯ ಬೇರೆ ಸ್ಥಳದಲ್ಲಿ 5 ಎಕರೆ ಜಾಗವನ್ನು ನೀಡಲು ಸೂಚಿಸಲಾಗಿತ್ತು. ಆ 5 ಎಕರೆ ಜಾಗದಲ್ಲಿ ಮಸೀದಿಯ ಬದಲು ಮುಸ್ಲಿಂ ಸಮುದಾಯದವರಿಗಾಗಿ ಶಾಲೆಯನ್ನು ಕಟ್ಟಿಸುವಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಚಿತ್ರಸಾಹಿತಿ ಸಲೀಂ ಖಾನ್ ಮನವಿ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಮಸೀದಿ, ದೇವಸ್ಥಾನಗಳಿಗಿಂತ ಹೆಚ್ಚಾಗಿ ಶಾಲೆಗಳ ಅಗತ್ಯವಿದೆ. ಹೀಗಾಗಿ, ಸರ್ಕಾರದಿಂದ ಅಯೋಧ್ಯೆಯಲ್ಲಿ ನೀಡಲಾಗುವ ಜಾಗದಲ್ಲಿ ಶಾಲೆಯನ್ನು ಕಟ್ಟಿಸಿದರೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದಂತಾಗುತ್ತದೆ. ಹಳೆಯ ಘಟನೆಗಳನ್ನು ನೆನೆದು ಯಾರೊಂದಿಗೂ ದ್ವೇಷ ಸಾಧಿಸುವುದು ಬೇಡ. ಎಲ್ಲವನ್ನೂ ಕ್ಷಮಿಸಿ, ಪ್ರೀತಿಯಿಂದ ಬದುಕೋಣ. ಮುಂದೆ ಇಂತಹ ಘಟನೆಗಳು ಪುನರಾವರ್ತಿತವಾಗದಂತೆ ಎಚ್ಚರ ವಹಿಸೋಣ. ಸರ್ಕಾರದಿಂದ ನೀಡುವ 5 ಎಕರೆ ಜಾಗದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗಾಗಿ ಶಾಲೆ ನಿರ್ಮಿಸಿದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿವರ್ಷ ಆ ಶಾಲೆಯಿಂದ ನೂರಾರು ವಿದ್ಯಾರ್ಥಿಗಳು ಉಪಯೋಗ ಪಡೆಯುತ್ತಾರೆ ಎಂದು ಸಲೀಂ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.

ಮುಸ್ಲಿಂ ಸಮುದಾಯದವರು ಇಂತಹ ವಿಷಯಗಳನ್ನು ಚರ್ಚಿಸುವ ಬದಲು ಮೂಲಸೌಕರ್ಯಗಳ ಕೊರತೆಯ ಬಗ್ಗೆ ಯೋಚಿಸಬೇಕು. ನಮ್ಮಲ್ಲಿ ಮುಖ್ಯವಾಗಿ ಶಾಲೆಗಳು ಮತ್ತು ಆಸ್ಪತ್ರೆಗಳು ಹೆಚ್ಚಾಗಬೇಕು. ನಾವು ರೈಲು, ವಿಮಾನ, ಅಥವಾ ನೆಲದ ಮೇಲೆ ಎಲ್ಲಿ ಖಾಲಿ ಜಾಗ ಸಿಗುತ್ತದೆಯೋ ಅಲ್ಲಿ ಕೂಡ ನಮಾಜ್ ಮಾಡಬಹುದು. ಆದರೆ, ಅಲ್ಲೆಲ್ಲ ಮಕ್ಕಳಿಗೆ ಪಾಠ ಮಾಡಲು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ.

ಹೀಗಾಗಿ, ನಮಾಜ್ ಮಾಡಲು ಜಾಗ ಬೇಕೆಂದು ಹೋರಾಡುವ ಬದಲು ನಮ್ಮ ಸಮುದಾಯದವರಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡುವತ್ತ ಹೆಚ್ಚಿನ ಆದ್ಯತೆ ನೀಡುವುದು ಒಳಿತು. ಒಂದುವೇಳೆ 22 ಕೋಟಿ ಮುಸ್ಲಿಮರಿಗೆ ಉತ್ತಮ ಶಿಕ್ಷಣ ಸಿಕ್ಕಿದರೆ ನಮ್ಮ ದೇಶದ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ ಎಂಬುದು ನನ್ನ ಅಭಿಪ್ರಾಯ ಎಂದು ಸಲೀಂ ಖಾನ್ ಹೇಳಿದ್ದಾರೆ.

Comments are closed.