ಬೆಂಗಳೂರು (ಜೂ. 14): ಸ್ಯಾಂಡಲ್ವುಡ್ ನಟನಿಂದ ಲವ್ ಸೆಕ್ಸ್ ದೋಖಾ ನಡೆದಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಎರಡನೇ ಪತ್ನಿಯನ್ನು ಈ ನಟ ಹತ್ಯೆ ಮಾಡಲು ಮುಂದಾಗಿದ್ದ ಎನ್ನುವ ವಿಚಾರ ಗಾಂಧಿನಗರವನ್ನೇ ದಂಗುಬಡಿಸಿದೆ.
‘ಅರುಣ್’ ಚಿತ್ರದ ನಾಯಕ ಶಬರೀಶ್ ಶೆಟ್ಟಿ ಬಂಧಿತ ಆರೋಪಿ. ಈ ಮೊದಲೇ ವಿವಾಹವಾಗಿದ್ದ ಶಬರೀಶ್ ಸುಳ್ಳು ಹೇಳಿ ಖಾಸಗಿ ಸಂಸ್ಥೆಯ ನೌಕರೆ ಪದ್ಮಶ್ರೀ ಎಂಬುವವರನ್ನು ವಿವಾಹವಾಗಿದ್ದ. ಶಬರೀಶ್ ಮೊದಲ ಮದುವೆಯ ವಿಚಾರ ತಿಳಿಯುತ್ತಿದ್ದಂತೆ ಅವನಿಂದ ಪದ್ಮಶ್ರೀ ಅಂತರ ಕಾಯ್ದುಕೊಂಡಿದ್ದರು.
ಇದರಿಂದ ಬೇಸರಗೊಂಡಿದ್ದ ಶಬರೀಶ್ ಎರಡನೇ ಹೆಂಡತಿ ಪದ್ಮಶ್ರೀಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ. ಅಲ್ಲದೆ, ಐದು ಜನ ದುಷ್ಕರ್ಮಿಗಳ ಸಹಾಯ ಪಡೆದು ಕೆಆರ್ ಪುರಂನ ಭಟ್ಟರಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಪದ್ಮಶ್ರೀ ಕೈ-ಕಾಲು ಕಟ್ಟಿ ಇಂಜೆಕ್ಷನ್ ನೀಡಲು ಪ್ರಯತ್ನಿಸಿದ್ದ. ಈ ಸಮಯಕ್ಕೆ ಸರಿಯಾಗಿ ಪದ್ಮಶ್ರೀ ಸ್ನೇಹಿತನೂ ಮನೆಗೆ ಬಂದಿದ್ದ.
ಈ ವಿಚಾರ ತಿಳಿಯುತ್ತಿದ್ದಂತೆ ಕೆಆರ್ ಪುರಂ ಪೊಲೀಸರಿಗೆ ಪದ್ಮಶ್ರೀ ಸ್ನೇಹಿತ ಮಾಹಿತಿ ನೀಡಿದ್ದ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶಬರೀಶ್, ನವೀನ್ ಎಂಬ ಆರೋಪಿಗಳನ್ನು ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಉಳಿದ ನಾಲ್ವರು ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ತಲೆಮರಿಸಿಕೊಂಡ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಸ್ವಸ್ಥರಾಗಿದ್ದ ಪದ್ಮಶ್ರೀ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.