ಮನೋರಂಜನೆ

100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ

Pinterest LinkedIn Tumblr


ಹೈದರಾಬಾದ್: ತೆಲುಗು, ತಮಿಳು, ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಕೋಡಿ ರಾಮಕೃಷ್ಣ ವಿಧಿವಶರಾಗಿದ್ದಾರೆ.

ಅನಾರೋಗ್ಯದ ನಿಮಿತ್ತ ಹೈದ್ರಾಬಾದ್‍ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೋಡಿ ರಾಮಕೃಷ್ಣ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಪಂಚ ಭಾಷೆಯಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ದೇಶಿಸಿದ ಕೋಡಿ ರಾಮಕೃಷ್ಣ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು. ಕನ್ನಡದ ನಾಗರಹಾವು, ಮಂಗಮ್ಮಗರಿ, ಅಂಕುಶಂ, ಅಮ್ಮೋರು, ಅರುಂಧತಿ ಇವರು ನಿರ್ದೇಶನ ಕೆಲ ಸೂಪರ್ ಹಿಟ್ ಸಿನಿಮಾಗಳಾಗಿವೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಲ್ಲಕೊಳ್ಳು ಗ್ರಾಮದಲ್ಲಿ ಜನಿಸಿದ್ದ ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ತೆಲುಗು ಭಾಷೆಗಳಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. 1982 ರಲ್ಲಿ ಇವರ ನಿರ್ದೇಶನದ ಮೊದಲ ಸಿನಿಮಾ ತೆರೆಕಂಡಿತ್ತು. 2016 ರಲ್ಲಿ ಕನ್ನಡ ವಿಷ್ಣುವರ್ಧನ್ ಅಭಿನಯದಲ್ಲಿ ವಿಶೇಷ ತಂತ್ರಜ್ಞಾನದೊಂದಿಗೆ ನಾಗರಹಾವು ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಟಾಲಿವುಡ್‍ನಲ್ಲಿ ‘ನಾಗಭರಣಂ’ ಎಂದು ಬಿಡುಗಡೆಯಾಗಿತ್ತು. ಇದೇ ಇವರ ಅಂತಿಮ ಸಿನಿಮಾ ಆಗಿದೆ.

ಕೆಲ ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಹೃದಯಘಾತ ಕೂಡ ಸಂಭವಿಸಿತ್ತು. ಈ ವೇಳೆ ಉತ್ತಮ ಚಿಕಿತ್ಸೆ ಲಭ್ಯವಾದ ಕಾರಣ ಬಹುಬೇಗ ಗುಣಮುಖರಾಗಿದ್ದರು. ಗುರುವಾರ ತೀವ್ರ ಆನಾರೋಗ್ಯಕ್ಕೆ ಒಳಗಾದ ರಾಮಕೃಷ್ಣ ಅವರನ್ನು ಆಸ್ಪತ್ರೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನದ ವೇಳೆಗೆ ನಿಧನರಾಗಿದ್ದಾರೆ.

Comments are closed.