ಮನೋರಂಜನೆ

ಅಜಯ್ ದೇವಗನ್ ನಟನೆಯ ‘ದೃಶ್ಯಂ’ ಚಿತ್ರದಿಂದ ಪ್ರೇರಣೆ ಪಡೆದು ಯುವತಿ ಹತ್ಯೆ!

Pinterest LinkedIn Tumblr


ಇಂದೋರ್: 22 ವರ್ಷ ವಯಸ್ಸಿನ ಯುವತಿಯ ಹತ್ಯೆೆಯ ಸಂಬಂಧ ಬಿಜೆಪಿ ಮುಖಂಡ ಹಾಗೂ ಆತನ ಮೂವರು ಮಕ್ಕಳು ಸೇರಿ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಜಯ್ ದೇವಗನ್ ನಟಿಸಿರುವ ‘ದೃಶ್ಯಂ’ ಚಲನಚಿತ್ರದಿಂದ ಪ್ರೇರಣೆ ಪಡೆದು ಎರಡು ವರ್ಷಗಳ ಹಿಂದೆ ಈ ಯುವತಿಯನ್ನು ಹತ್ಯೆೆ ಮಾಡಲಾಗಿತ್ತು. ಬಿಜೆಪಿ ಮುಖಂಡ ಜಗದೀಶ್ ಕರೋತಿಯ ಅಲಿಯಾಸ್ ಕಲ್ಲು ಪಹಲ್ವಾನ್(65), ಆತನ ಮಕ್ಕಳಾದ ಅಜಯ್(36), ವಿಜಯ್(38), ವಿನಯ್(31) ಹಾಗೂ ಅವರ ಸಹಚರ ನೀಲೇಶ್ ಕಶ್ಯಪ್(28)ಅವರೇ ಐವರು ಆರೋಪಿಗಳು. ಈ ಎಲ್ಲ ಆರೋಪಿಗಳನ್ನು ಬಂಧಿಸಿರುವುದಾಗಿ ಇಂದೋರ್ ಡಿಐಜಿ ಹರಿನಾರಾಯಣಚಾರಿ ಮಿಶ್ರಾ ತಿಳಿಸಿದ್ದಾರೆ.

ಬಾಣಗಂಗಾ ಪ್ರದೇಶದ ಟ್ವಿಂಕಲ್ ದಾಗ್ರೆ(22) ಕೊಲೆಯಾದ ಯುವತಿ. ಜಗದೀಶ್ ಕರೋತಿಯ ಜತೆಗೆ ಯುವತಿ ಟ್ವಿಂಕಲ್ ಅಕ್ರಮ ಸಂಬಂಧ ಹೊಂದಿದ್ದರು. ನಂತರ ಆಕೆ ಕರೋತಿಯ ಅವರ ಜತೆಯೇ ಬಾಳ್ವೆ ನಡೆಸಲು ಬಯಸಿದ್ದರು. ಇದು ಕರೋತಿಯ ಕುಟುಂಬದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು. ಈ ಸಮಸ್ಯೆೆಯಿಂದ ಪಾರಾಗಲು ಆಕೆಯನ್ನೇ ಮುಗಿಸುವ ಸಂಚು ರೂಪಿಸಿದರು. ಕರೋತಿಯ ಮತ್ತು ಆತನ ಮಕ್ಕಳು 2016ರ ಅ.16ರಂದು ಟ್ವಿಂಕಲ್‌ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಆಕೆಯ ದೇಹವನ್ನು ಸುಟ್ಟು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈಕೆಯನ್ನು ಸುಟ್ಟ ಸ್ಥಳದಲ್ಲಿ ಬಳೆ ಹಾಗೂ ಇತರೆ ಆಭರಣಗಳು ಪತ್ತೆಯಾಗಿದ್ದು, ಅವನ್ನು ಆಧರಿಸಿಯೇ ಐವರನ್ನು ಬಂಧಿಸಿರುವುದಾಗಿ ಡಿಐಜಿ ಮಿಶ್ರಾ ಹೇಳಿದ್ದಾರೆ. ಕೊಲೆಗೆ ಯೋಜನೆ ರೂಪಿಸಲು 2015ರಲ್ಲಿ ತೆರೆಕಂಡ ಅಜಯ್ ದೇವಗನ್ ಅಭಿನಯದ ದೃಶ್ಯಂ ಚಿತ್ರದಿಂದ ಪ್ರೇರಣೆ ಪಡೆದಿದ್ದಾರೆ. ಈ ಚಿತ್ರದ ದೃಶ್ಯಗಳಿಂದ ಪ್ರೇರಣೆ ಪಡೆದು ನಾಯಿಯ ದೇಹವನ್ನು ಹೂತು ಹಾಕಿ ಮನುಷ್ಯರ ದೇಹವನ್ನು ಯಾರೋ ಹೂತಿದ್ದಾರೆ ಎಂದು ಅವರೇ ಸುದ್ದಿ ಹಬ್ಬಿಸಿದ್ದರು. ಪೊಲೀಸರು ಗುಂಡಿ ತೋಡಿದಾಗ ನಾಯಿಯ ದೇಹದ ಕೊಳೆತ ಭಾಗ ಕಂಡು ಬಂದಿತ್ತು. ಇದು ಪೊಲೀಸರ ತನಿಖೆಯ ಹಾದಿ ತಪ್ಪಿಸಿತ್ತು ಎಂದು ಅವರು ವಿವರಿಸಿದ್ದಾರೆ.

ಈ ಪ್ರಕರಣವನ್ನು ಬೇಧಿಸಲು ಪೊಲೀಸರು ವೈಜ್ಞಾನಿಕ ಪರೀಕ್ಷೆಗಳನ್ನು ಬಳಸಲು ಮುಂದಾದರು. ಆರೋಪಿ ಕರೋತಿಯ ಹಾಗೂ ಅವರ ಇಬ್ಬರು ಪುತ್ರರನ್ನು ಗುಜರಾತ್ ಪ್ರಯೋಗಾಲಯದಲ್ಲಿ ಮಿದುಳಿನಲ್ಲಿ ಉಂಟಾಗುವ ಆವೇಗವನ್ನು ಗುರುತಿಸುವ (ಬ್ರೇನ್ ಎಲೆಕ್ಟ್ರಿಕಲ್ ಆಸಿಲೇಷನ್ ಸಿಗ್ನೇಚರ್- ಬಿಇಒಎಸ್) ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ನೀಡುವ ಹೇಳಿಕೆ ಮತ್ತು ಮಿದುಳಿನಲ್ಲಿ ಉಂಟಾಗುವ ಆಂತರಿಕ ಆವೇಗದ ಆಧಾರದ ಮೇಲೆ ಆರೋಪಿ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆೆ ನಿರ್ಣಯಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಇಂದೋರ್ ಪೊಲೀಸರು ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಈ ಪರೀಕ್ಷೆ ನಡೆಸಿದ್ದಾರೆ.

Comments are closed.